ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕರ ನಡುವಿನ ಮನಸ್ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಎಲ್ಲವನ್ನು ತಣ್ಣಗಾಗಿಸಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಧ್ಯಸ್ಥಿಕೆ ವಹಿಸಬೇಕೆಂಬ ಕೂಗು ಕೇಳಿ ಬಂದಿದೆ.
ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಿ, ಅಸಮರ್ಥ ಸಚಿವರನ್ನು ಕೈ ಬಿಟ್ಟು ಸಂಪುಟ ಪುನಾರಚನೆಗೆ ಮುಂದಾಗಿದ್ದ ರಾಜ್ಯ ಕಾಂಗ್ರೆಸ್ ನಾಯಕರ ಪ್ರಯತ್ನಕ್ಕೆ ಸಚಿವರ ವಿರೋಧದಿಂದ ಹಿನ್ನಡೆಯಾಗಿದೆ.
ಆದರೆ, ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಬಿಜೆಪಿಯ “ಆಪರೇಷನ್ ಕಮಲ’ಕ್ಕೆ ಅವಕಾಶ ದೊರೆಯದಂತೆ ನೋಡಿಕೊಳ್ಳಲು ಇಬ್ಬರು ಪಕ್ಷೇತರರಿಗೆ ಮಂತ್ರಿ ಸ್ಥಾನ ನೀಡಿ ಸಂಪುಟ ವಿಸ್ತರಣೆಗೆ ಯತ್ನ ತಂದಿರುವುದೂ ಈಗ “ಹಿರಿಯರ ಮುನಿಸಿಗೆ’ ಕಾರಣವಾಗಿದೆ.
ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಈ ಪ್ರಯತ್ನಕ್ಕೆ ಪಕ್ಷದ ಹಿರಿಯ ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ಮಾಜಿ ಸಚಿವ ರಾಮಲಿಂಗಾರೆಡ್ಡಿಯಂತಹ ಹಿರಿಯರನ್ನು ಕಡೆಗಣಿಸಿ ಹೊರಗಿನಿಂದ ಬಂದವರಿಗೆ ಮಣೆ ಹಾಕುವುದು,
ಒಬ್ಬರಿಗೊಂದು ಇನ್ನೊಬ್ಬರಿಗೊಂದು ನ್ಯಾಯ ಮಾಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ರಾಹುಲ್ ಮಧ್ಯ ಪ್ರವೇಶ ಮಾಡಬೇಕು ಎಂದು ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್ ಆಗ್ರಹಿಸಿದ್ದಾರೆ.
ಪ್ರಮುಖವಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಿರುದ್ಧವೇ ರೋಷನ್ ಬೇಗ್ ಸೇರಿದಂತೆ ಅನೇಕ ನಾಯಕರು ಆರೋಪ ಮಾಡಿರುವುದರಿಂದ ರಾಹುಲ್ ಗಾಂಧಿಯೇ ಮಧ್ಯ ಪ್ರವೇಶ ಮಾಡಬೇಕು ಎಂದು ಪಕ್ಷದ ಕೆಲವು ಹಿರಿಯ ನಾಯಕರು ಹೈ ಕಮಾಂಡ್‌ಗೆ ಮನವಿ ಮಾಡಿದ್ದಾರೆ.
ಸ್ವತಃ ದಿನೇಶ್ ಗುಂಡೂರಾವ್ ಕೂಡ ರಾಜ್ಯದಲ್ಲಿನ ಬೆಳವಣಿಗೆಗಳನ್ನು ಹೈ ಕಮಾಂಡ್ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದ್ದು, ರಾಹುಲ್ ಸೂಚನೆಯ ಮೇರೆಗೆ ವೇಣುಗೋಪಾಲ್ ಅವರು ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.