Advertisement

ರೇಷ್ಮೆ ಬೆಳೆಯಿಂದ ರೈತರ ಆರ್ಥಿಕ ಸ್ಥಿತಿ ಸದೃಢ

05:49 PM Jun 21, 2022 | Team Udayavani |

ದೇವನಹಳ್ಳಿ: ಗ್ರಾಮೀಣ ಭಾಗದಲ್ಲಿ ರೈತರು ಇಂದಿಗೂ ರೇಷ್ಮೆ ಬೆಳೆಯಿಂದ ಆರ್ಥಿಕವಾಗಿ ಸದೃಢರಾಗಲು ಅನುಕೂಲವಾಗಿದೆ. ತಾಲೂಕಿನಲ್ಲಿ ಸಿಲ್ಕ್ ಅಂಡ್‌ ಮಿಲ್ಕ್ ರೈತರಿಗೆ ಎರಡು ಕಣ್ಣುಗಳಿದ್ದಂತೆ ಎಂದು ಶಾಸಕ ಎಲ್‌.ಎನ್‌.ನಾರಾಯಣಸ್ವಾಮಿ ತಿಳಿಸಿದರು.

Advertisement

ಪಟ್ಟಣದ ಬಿಬಿ ರಸ್ತೆಯಲ್ಲಿರುವ ತಾಲೂಕು ರೇಷ್ಮೆ ಇಲಾಖೆ ಆವರಣದಲ್ಲಿ ತಾಲೂಕು ರೇಷ್ಮೆ ಇಲಾಖೆ ವತಿಯಿಂದ ರೈತರಿಗೆ ವಿವಿಧ ಸಲಕರಣೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ರೇಷ್ಮೆ ಇಲಾಖೆಯಿಂದ ಬರುವ ಎಲ್ಲಾ ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ತಮ್ಮ ಆರ್ಥಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ದೇವನಹಳ್ಳಿ ತಾಲೂಕಿನ ಶೆಟ್ಟೇರಹಳ್ಳಿ ಗ್ರಾಮದಲ್ಲಿ ನಮ್ಮ ಚಿಕ್ಕಪ್ಪ ರೇಷ್ಮೆ ಬೆಳೆಯುತ್ತಿದ್ದರು. ಅದನ್ನು ನೋಡಿದ್ದೇನೆ. ಹುಳು ಹೇಗೆ ಸಾಕುವುದು. ಚಾಕಿ ಹಾಕುವುದು. ಸಗಣಿಯಲ್ಲಿ ಸಾರಿಸುವುದು ಎಲ್ಲಾ ಮಾಡಿದ್ದೇನೆ.

ರೇಷ್ಮೆ ಬೆಳೆಗಾರರು ತಮ್ಮ ಆರ್ಥಿಕ ಮಟ್ಟ ಹೆಚ್ಚಿಸಿಕೊಳ್ಳಬೇಕು. ಅಧಿಕಾರಿಗಳು ರೈತರಿಗೆ ರೇಷ್ಮೆ ಇಲಾಖೆಯಿಂದ ಬರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು. ಕಚೇರಿಗಳಿಗೆ ರೈತರನ್ನು ಅಲೆದಾಡಿಸಬೇಡಿ. ರೈತರಿಂದ ಯಾವುದೇ ದೂರು ಬರದಂತೆ ಅಧಿಕಾರಿಗಳು ಕೆಲಸ ಮಾಡಿ. ರೈತರಿಗೆ ಹೆಚ್ಚು ಅನುಕೂಲ ಮಾಡಿಕೊಡುವ ಕೆಲಸವನ್ನು ಮಾಡಿಕೊಡಬೇಕು.

ರಾಜ್ಯ ಮತ್ತು ಕೇಂದ್ರಸರ್ಕಾರಗಳು ರೇಷ್ಮೆಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತಿದ್ದು ಅದರ ಬಗ್ಗೆ ತಿಳಿದುಕೊಳ್ಳಬೇಕು. ರೈತರಿಗೆ ಹುಳುಸಾಕಾಣಿಕೆ, ಮನೆಗಳ ನಿರ್ಮಾಣ ಮಾಡಿಕೊಳ್ಳಬೇಕು. ಅದಕ್ಕೆ ಬರುವ ಸಬ್ಸಿಡಿಯನ್ನು ಬಳಸಿಕೊಳ್ಳಿ. ಹೊಸಹೊಸ ಹಿಪ್ಪುನೇರಳೆ ತೋಟಗಳು ಆಗಬೇಕು. ನರೇಗಾ ಮತ್ತು ಇತರೆ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ರೈತರಿಗೆ ನೀಡಬೇಕು ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪನಿರ್ದೇಶಕ ಪ್ರಭಾಕರ್‌ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಣ್ಣು, ರೇಷ್ಮೆ ಕೃಷಿಗೆ ಬಹಳ ಯೋಗ್ಯವಾಗಿದೆ. ಜಿಲ್ಲೆಯ ತೋಟಗಾರಿಕೆ ಬೆಳೆಗಳ ಹಾಗೂ ಹೈನುಗಾರಿಕೆ ಜೊತೆಯಲ್ಲಿ ಅಪಾರ ಜನಪ್ರಿಯತೆ ಪಡೆದಿರುವುದು ಸಂತಸದ ಸಂಗತಿಯಾಗಿದೆ. ಸಿಲ್ಕ್ ಮತ್ತು ಮಿಲ್ಕ್ ಎಂದು ಖ್ಯಾತಿ ಪಡೆದಿರುವ ರೇಷ್ಮೆ ಕೃಷಿ ತನ್ನದೇ ಆದ ಮಹತ್ವವನ್ನು ಉಳಿಸಿಕೊಂಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 5502 ಹೆಕ್ಟೇರ್‌ ಹಿಪ್ಪುನೇರಳೆ ವಿಸ್ತೀರ್ಣವಿದ್ದು, 527 ಹಳ್ಳಿಗಳಲ್ಲಿ 6396 ಜನ ರೈತರು ರೇಷ್ಮೆ ಕೃಷಿ ಮಾಡುತ್ತಿದ್ದಾರೆ ಎಂದು ಹೇಳಿದರು.

Advertisement

ದೇವನಹಳ್ಳಿ ತಾಲೂಕುರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಆರ್‌.ನರೇಂದ್ರ ಬಾಬು, ತಾಲೂಕು ಜೆಡಿಎಸ್‌ ಅಧ್ಯಕ್ಷ ಆರ್‌.ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಪ್ರಚಾರಸಮಿತಿ ಅಧ್ಯಕ್ಷ ನೆರಗನಹಳ್ಳಿ ಶ್ರೀನಿವಾಸ್‌, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಪಟಾಲಪ್ಪ, ಪುರಸಭಾ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ಎಂ.ಕುಮಾರ್‌, ರೇಷ್ಮೆ ಇಲಾಖೆಯ ವಿಸ್ತರಣಾಧಿಕಾರಿ ಮುನಿರಾಜು, ಮುಖಂಡರಾದ ಲಕ್ಷ್ಮೀನಾರಾಯಣ್‌(ಲಚ್ಚಿ), ಎಂ.ಆನಂದ್‌, ವೈ.ಪಿ.ಪ್ರವೀಣ್‌, ಜನಕಮಣಿ, ಚಿಕ್ಕಣ್ಣ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next