Advertisement

Desi Swara: ಜೀವವಿದ್ದರೆ ಮಾತ್ರ ಜೀವನ: ಆರೋಗ್ಯ ಭಾಗ್ಯವೆಂಬ ನೈಜ ಶ್ರೀಮಂತಿಕೆ

11:32 AM Apr 06, 2024 | Team Udayavani |

ಹರ್ಷ: ತಾತ!….ತಾತ ಈಗ ನಿನ್ನ ವಯಸ್ಸೆಷ್ಟು?

Advertisement

ತಾತ: ಹರ್ಷ ಪುಟ್ಟ, ನನಗೀಗ 78 ವರ್ಷ
ಹರ್ಷ: ಅಬ್ಬಬ್ಟಾ ! ನನಗೆ ಬರೀ 8 ವರ್ಷ…..

ತಾತ: ವಯಸ್ಸೆಷ್ಟಾದರೇನು? ನಾನು ನೀನು ಗೆಳೆಯರಂತೆ ಒಂದೇ ಆಟ ಆಡುತ್ತೇವೆ, ಜತೆಜತೆಗೆ ಊಟ ಮಾಡುತ್ತೇವೆ ಅಲ್ಲವೇ?

ಹರ್ಷ: ಹೌದು ತಾತ, ನೀನು ತಾತನಾದರೂ ನನ್ನ ಜತೆಗೆ ಕ್ರಿಕೆಟ್‌, ಫುಟ್‌ಬಾಲ್‌, ಚೆಸ್‌ ಎಲ್ಲ ಆಟ ಆಡುತ್ತೀಯ. ಆದರೆ ಅಪ್ಪ ಯಾಕೆ ಆಡೋಲ್ಲ? ಯಾವಾಗ ನೋಡಿದರೂ ನನಗೆ ಸುಸ್ತು ಅಂತಾರೆ.

ತಾತ : ಹೌದಪ್ಪ, ನಾವೆಲ್ಲ ಹಳೆಯ ಜನ ನಮ್ಮ ಊಟ, ದಿನಚರಿ, ಚಟುವಟಿಕೆಗಳೇ ನಾವು ಇಷ್ಟು ಗಟ್ಟಿಯಾಗಿ ಇರುವುದಕ್ಕೆ ಕಾರಣ. ಇಂದಿನ ದಿನಗಳಲ್ಲಿ ಮೊದಲನೆಯದಾಗಿ ಊಟದಲ್ಲಿ ರುಚಿಯೂ ಇಲ್ಲ, ಪೌಷ್ಠಿಕತೆಯೂ ಇಲ್ಲ, ಇನ್ನು ಇಂತಹ ಊಟವನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವುದೂ ಇಲ್ಲ. ಅದಾದ ಮೇಲೆ ಆಟ ಅಥವಾ ದೈಹಿಕ ಚಟುವಟಿಕೆಗಳಿಗಂತೂ ಸಮಯವೇ ಇಲ್ಲ.

Advertisement

ಹರ್ಷ: ಹೌದು ತಾತ ! ಅಪ್ಪ-ಅಮ್ಮ ಇಬ್ಬರಿಗೂ ಇವೆಲ್ಲವುದಕ್ಕೆ ಸಮಯವೇ ಇಲ್ಲ.

ತಾತ: ಹೌದು ನಿನ್ನ ಅಪ್ಪನಿಗೆ ಈ ಚಿಕ್ಕ ವಯಸ್ಸಿನಲ್ಲೇ ಮಧುಮೇಹ ಕಾಯಿಲೆ, ರಕ್ತದೊತ್ತಡ ಬರಲು ಇದೆ ಕಾರಣ. ರೋಗ ಬರುವುದಕ್ಕಿಂತ ಮೊದಲು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಬಂದ ಮೇಲೆ ಏನನ್ನೂ ಮಾಡಲಾಗುವುದಿಲ್ಲ. ಎಲ್ಲರೂ ಹಣಗಳಿಸಲು ಹೆಣಗಾಡುತ್ತಿದ್ದಾರೆ. ಯಾರಿಗೂ ಆರೋಗ್ಯದ ನೆನಪೇ ಇಲ್ಲ. ಆರೋಗ್ಯವೇ ಭಾಗ್ಯವೆನ್ನುವುದು ಕೊನೆಯುಸಿರೆಳೆಯುವಾಗ ಮಾತ್ರ ಅರ್ಥವಾಗುತ್ತದೆ.

ಹರ್ಷ: ಆರೋಗ್ಯವೇ ಭಾಗ್ಯ ಎಂದರೇನು? ತಾತ!

ತಾತ : ನೋಡಪ್ಪ ! ನಮ್ಮ ಜೀವವಿದ್ದರೆ ಈ ಜೀವನ. ಈ ಜೀವಕ್ಕೇನು ಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಊಟ, ನಿದ್ದೆ ದೈಹಿಕ ವ್ಯಾಯಾಮ, ಮಾನಸಿಕ ನೆಮ್ಮದಿ ಇವೆಲ್ಲವುಗಳು ನಮ್ಮನ್ನ ಆರೋಗ್ಯವಂತರನ್ನಾಗಿ ಇಡುತ್ತವೆ. ಈ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ತಂತ್ರಜ್ಞಾನ ಎಷ್ಟು ವೇಗವಾಗಿ ಮುಂದುವರೆಯುತ್ತಿದೆಯೋ ಅಷ್ಟೇ ವೇಗವಾಗಿ ಜನರೂ ಕೂಡ ಹಣದ ಮತ್ತು ವೈಯಕ್ತಿಕ ಸಾಧನೆಯ ಹಿಂದೆ ಓಡುತ್ತಿದ್ದಾರೆ. ಹಾಗಾಗಿ ಇವರೆಲ್ಲ ಆರೋಗ್ಯವನ್ನು ಮರೆತು, ತಮ್ಮತನವನ್ನು ಮರೆತು, ಯಾವುದು ಅತ್ಯಾವಶ್ಯವಲ್ಲವೋ ಅದರೆಡೆಗೆ ಹೋಗುತ್ತಿದ್ದಾರೆ.

ಎಷ್ಟೇ ಹಣಗಳಿಸಿ ಶ್ರೀಮಂತರಾದರೂ ಆರೋಗ್ಯ ಸರಿ ಇಲ್ಲದಿದ್ದರೆ ಆ ಶ್ರೀಮಂತಿಕೆಯನ್ನು ತೆಗೆದುಕೊಂಡು ಏನು ಮಾಡುವುದು? ಎಲ್ಲ ಇದ್ದು ನಮಗೆ ಏನು ಬೇಕು ಅದನ್ನು ತಿನ್ನಲಾಗುವುದಿಲ್ಲ, ಮನಸ್ಸಿಗೆ ಬಂದಹಾಗೆ ಇರಲಾಗುವುದಿಲ್ಲ. ಆರೋಗ್ಯ ಇದ್ದರೆ ಮುಂದೆ ಎಲ್ಲ. ನಾನು ಇಂದು ಗಟ್ಟಿಯಾಗಿ ಆರೋಗ್ಯದಿಂದಿದ್ದೇನೆ ಅದಕ್ಕೇ ಎಲ್ಲವನ್ನೂ ಮಾಡುತ್ತಿದ್ದೇನೆ. ಬರೀ ಹಣವನ್ನಿಟ್ಟುಕೊಂಡು ಆಸ್ಪತ್ರೆಗೆ ಆ ಹಣವನ್ನೆಲ್ಲ ಸುರಿಯುತ್ತ ಇರುವುದಕ್ಕಿಂತ ಇರುವಷ್ಟು ದಿನ ಮೂಲಭೂತ ಆವಶ್ಯಕತೆಗಳೊಂದಿಗೆ ಆರೋಗ್ಯವಂತರಾಗಿ ಜೀವನವನ್ನು ಆಸ್ವಾದಿಸುವುದೇ ನಮ್ಮ ಭಾಗ್ಯ. ಅದಕ್ಕೇ ಹಿರಿಯರು ಹೇಳುವುದು ಆರೋಗ್ಯವೇ ಭಾಗ್ಯ ಅಂತ.

ಹರ್ಷ: ಅಬ್ಬಬ್ಟಾ ! ಇಷ್ಟು ದೊಡ್ಡ ಕಥೆ ಇದೆಯಲ್ಲ ತಾತ ಆರೋಗ್ಯದ ಹಿಂದೆ ? ನಾನೂ ಕೂಡ ಇಂದಿನಿಂದ ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡುತ್ತೇನೆ. ಚೆನ್ನಾಗಿ ಪೌಷ್ಟಿಕವಾದ ಊಟ ಮಾಡುತ್ತೇನೆ, ಆಟ ಆಡುತ್ತೇನೆ, ವ್ಯಾಯಾಮ ಮಾಡುತ್ತೇನೆ.

ತಾತ: ಹರ್ಷ ಪುಟ್ಟ ! ನೀನು ಇಷ್ಟು ಬೇಗ ಆರೋಗ್ಯದ ಮಹತ್ವವನ್ನು ಅರಿತುಕೊಂಡೆ ಹೀಗೆಯೇ ಎಲ್ಲರೂ ಮಹತ್ವವನ್ನು ಅರಿತು, ಒಳ್ಳೆಯ ಆರೋಗ್ಯಕರವಾದ ದಿನಚರಿಯನ್ನು ಇಟ್ಟುಕೊಂಡು ಮುಂದಿನ ಪೀಳಿಗೆಯನ್ನೂ ಕೂಡ ಆರೋಗ್ಯದ ಬಗ್ಗೆ ಕಾಳಜಿ ಹೊಂದುವಂತೆ ಮಾಡಬೇಕು.ಹೀಗೆ ತಾತ ಮತ್ತು ಹರ್ಷ ಆರೋಗ್ಯದ ಬಗ್ಗೆ ಚರ್ಚಿಸಿದರು. ಈ ಚರ್ಚೆಯ ನೆನಪು ನನಗೆ ಏಕೆ ಬಂತು? ಏಕೆಂದರೆ ಪ್ರತೀ ವರ್ಷ ಎ.7 ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ನಾವು ನಮ್ಮ ಆರೋಗ್ಯದ ಬಗ್ಗೆ ಕಾಳಜಿಯನ್ನು ಹೇಗೆ ಮಾಡಬೇಕು, ಬೇರೆ ಬೇರೆ ಕಾಯಿಲೆಗಳನ್ನು ಹೇಗೆ ಉಪಚರಿಸಬೇಕು ಎಂದು ಜನರಲ್ಲಿ ಅರಿವು ಮೂಡಿಸುವುದಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವದೆಲ್ಲೆಡೆ ಇರುವ ಆರೋಗ್ಯ ಸಮಸ್ಯೆಗಳನ್ನು ಅಭ್ಯಸಿಸಿ ಅವುಗಳನ್ನು ಹೇಗೆ ನಿಯಂತ್ರಿಸಬೇಕು ಹಾಗೂ ಹೋಗಲಾಡಿಸಬೇಕೆಂದು ತನ್ನದೇ ಆದ ಯೋಜನೆಗಳನ್ನು ಹಾಕುತ್ತ ಪ್ರತೀ ವರ್ಷ ಒಂದೊಂದು ಧ್ಯೇಯದೊಂದಿಗೆ ಅಂದರೆ ಆರೋಗ್ಯದ ಕಾಳಜಿಯ ಬಗ್ಗೆ ವಿಷಯವನ್ನಿಟ್ಟುಕೊಂಡು ವಿಶ್ವ ಆರೋಗ್ಯ ದಿನದಂದು ಜಾಗೃತಿ ಮೂಡಿಸುವ ಕಾರ್ಯನಿರ್ವಹಿಸುತ್ತಿದೆ. ಈ ವರ್ಷದ ವಿಷಯವು ” ನನ್ನ ಆರೋಗ್ಯ , ನನ್ನ ಹಕ್ಕು’ ಎಂದಾಗಿದೆ. ಎಲ್ಲರಿಗೂ ವಿಶ್ವ ಆರೋಗ್ಯ ದಿನದ ಶುಭಾಶಯಗಳು. ಬನ್ನಿ ನಾವೆಲ್ಲ ನಮ್ಮ ಆರೋಗ್ಯದ ಕಾಳಜಿ ವಹಿಸೋಣ ಆರೋಗ್ಯದ ಭಾಗ್ಯವನ್ನು ಗಳಿಸಿ ಅನುಭವಿಸೋಣ.

* ಜಯಾ ಛಬ್ಬಿ, ಮಸ್ಕತ್‌

 

Advertisement

Udayavani is now on Telegram. Click here to join our channel and stay updated with the latest news.

Next