Advertisement
ಚಾಮುಂಡೇಶ್ವರಿ ದೇವಸ್ಥಾನದ ಬಾಗಿಲನ್ನು ಶನಿವಾರ ಬೆಳಗ್ಗೆ 6ಗಂಟೆಗೆ ತೆರೆದು ಶುದ್ಧಿ ಕಾರ್ಯದ ನಂತರ ದೇವಸ್ಥಾನದ ಪ್ರಧಾನ ಆಗಮಿಕರಾದ ಶಶಿಶೇಖರ ದೀಕ್ಷಿತ್‌ರ ನೇತೃತ್ವದಲ್ಲಿ ಗ್ರಹಣ ಶಾಂತಿ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಯಿತು.
Related Articles
Advertisement
ಶಿವರಾಂಪೇಟೆಯ ಶ್ರೀ ತ್ರಿಪುರ ಭೈರವಿ ಮಠದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕ ಹರೀಶ್ ಭಾರದ್ವಾಜ್ ನೇತೃತ್ವದಲ್ಲಿ ಬೆಳಗ್ಗೆ 8 ರಿಂದ 9ಗಂಟೆವರೆಗೆ ಗ್ರಹಣ ಶಾಂತಿ ಹೋಮ ಹಾಗೂ ಸಂಕಲ್ಪ, 9.30 ರಿಂದ ಮಧ್ಯಾಹ್ನ 12ಗಂಟೆವರೆಗೆ ವಿಶೇಷ ಪೂಜೆ, ಹೋಮ ನಡೆಸಲಾಯಿತು.
ಮೈಸೂರು ನಗರದ ಅಗ್ರಹಾರದ 110 ಗಣಪತಿ ದೇವಸ್ಥಾನದಲ್ಲಿ ಆಗಮಿಕ ಡಾ.ಸುನೀಲ್ ಕುಮಾರ್ ಶಾಸ್ತ್ರೀ ಅವರ ನೇತೃತ್ವದಲ್ಲಿ ಶನಿವಾರ ಬೆಳಗ್ಗೆ 7ಗಂಟೆಗೆ ಸಾಮೂಹಿಕ ಗ್ರಹಣ ಶಾಂತಿ ಹೋಮ ಮಾಡಲಾಯಿತು. ಗ್ರಹಣ ದೋಷವಿರುವ ನಕ್ಷತ್ರ-ರಾಶಿಯವರು ದೋಷ ಪರಿಹಾರಕ್ಕಾಗಿ ಈಶ್ವರ ದೇವಾಲಯಕ್ಕೆ ದೀಪಕ್ಕೆ ಎಣ್ಣೆ ತಂದು ಒಪ್ಪಿಸಿ, ದೇವರಿಗೆ ಪ್ರದಕ್ಷಿಣೆ ನಮಸ್ಕಾರ ಮಾಡಿದರು.
ಇನ್ನೂ ಕೆಲವರು ಬಿಳಿಬಟ್ಟೆಯಲ್ಲಿ ಅಕ್ಕಿ(ಚಂದ್ರ), ಚಿತ್ರದ ಬಟ್ಟೆಯಲ್ಲಿ ಹುರುಳಿ(ಕೇತು) ಧಾನ್ಯಗಳನ್ನು ದಾನ ಮಾಡಿದರು. ಆಸ್ತಿಕರು ಗ್ರಹಣ ಸ್ಪರ್ಶ ಕಾಲದಲ್ಲಿ ಸ್ನಾನ ಮಾಡಿ, ಮನೆಯಲ್ಲಿ ದೇವರಿಗೆ ದೀಪ ಹಚ್ಚಿ ನಮಸ್ಕಾರ ಮಾಡಿ, ದೇವರ ಸ್ತೋತ್ರ ಪಠಿಸಿ, ಗ್ರಹಣ ಮೋಕ್ಷದ ಕಾಲದ ನಂತರ ಮತ್ತೆ ಸ್ನಾನ ಮಾಡಿದರು.
ಸೆರೆಹಿಡಿದು ಸಂಭ್ರಮ: ಶತಮಾನದ ಅಚ್ಚರಿಯನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾದಿದ್ದ ಹಲವರು ಮಧ್ಯರಾತ್ರಿಯಲ್ಲಿ ಮೋಡಗಳ ಮರೆಯಲ್ಲಿ ಅಸ್ಪಷ್ಟವಾಗಿ ಗೋಚರಿಸಿದ ಚಂದ್ರಗ್ರಹಣವನ್ನು ಕಣ್ತುಂಬಿಕೊಂಡು, ಕ್ಯಾಮರಾ, ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಸಂಭ್ರಮಿಸಿದರು.
ಜಾಗೃತಿ: ಗ್ರಹಣದಿಂದ ಯಾವುದೇ ತೊಂದರೆಯಾಗುವುದಿಲ್ಲ. ಇದೆಲ್ಲಾ ಮೂಢನಂಬಿಕೆ ಎಂದು ಪ್ರಜ್ಞಾವಂತರ ತಂಡವೊಂದು ಶುಕ್ರವಾರ ಮಧ್ಯರಾತ್ರಿ ಚಾಮುಂಡಿಬೆಟ್ಟದ ತಪ್ಪಲಿನ ಸ್ಮಶಾನದಲ್ಲಿ ಯೋಧ ಹೇಮಚಂದ್ ಅವರ ಸಮಾಧಿ ಎದುರು ಸಮಾವೇಶ ಗೊಂಡರು.
ಇತಿಹಾಸ ತಜ್ಞ ಪ್ರೊ.ನಂಜರಾಜ ಅರಸು, ಮಾಜಿ ಮೇಯರ್ ಪುರುಷೋತ್ತಮ್, ಸೋಸಲೆ ಸಿದ್ದರಾಜು, ಭಾನು ಮೋಹನ್, ಸಾಹಿತಿ ಬನ್ನೂರು ಕೆ.ರಾಜು ಮೊದಲಾದವರು ಪಾಲ್ಗೊಂಡರು. ಗಾಯಕ ಅಮ್ಮಾ ರಾಮಚಂದ್ರ ತಂಡ ಜಾಗೃತಿ ಗೀತೆಗಳನ್ನು ಹಾಡಿದರು.