ಬೆಂಗಳೂರು: ಲಘು ಯುದ್ಧ ವಿಮಾನ ಹಾಗೂ ಹೆಲಿಕಾಪ್ಟರ್‌ಗಳಾದ, ತೇಜಸ್, ಸಾರಂಗ್, ಧ್ರುವ್, ನೇತ್ರಾ, ರುದ್ರ, ಧನುಷ್ ಜತೆಗೆ ಸೂರ್ಯ ಕಿರಣ ತಂಡ ಕೂಡ ಶನಿವಾರ ನಭದಲ್ಲಿ ನರ್ತನ ಮಾಡಿದೆ. ತಾಲೀಮು ವೇಳೆಯಲ್ಲಿ ಸಂಭವಿಸಿದ್ದ ದುರಂತದಿಂದ ಈ ಬಾರಿಯ ಏರೋ ಇಂಡಿಯಾ ಶೋನಲ್ಲಿ ಸೂರ್ಯ ಕಿರಣ ಹಾರಾಟ ಅನುಮಾನ ಎಂದು ಅಂದಾಜಿಸಲಾಗಿತ್ತು. ಆದರೆ, ಶನಿವಾರ ಸೂರ್ಯಕಿರಣ ತಂಡ ಏಳು ವಿಮಾನಗಳ ಹಾರಾಟದ ಮೂಲಕ ಎಲ್ಲರನ್ನು ರಂಜಿಸಿದ್ದರು.
ಸಾಮಾನ್ಯವಾಗಿ ಏರ್ ಶೋಗಳಲ್ಲಿ ಸಾರಂಗ್, ಸಾರಸ್ ಹಾಗೂ ಸೂರ್ಯಕಿರಣ್‌ನ ಹಾರಾಟವೇ ಪ್ರೇಕ್ಷಕರಿಗೆ ಹೆಚ್ಚು ಖುಷಿ ಕೊಡುತ್ತದೆ. ಕಾರಣ, ಇವುಗಳು ಮಾತ್ರ ಆಕಾಶದಲ್ಲಿ ನರ್ತನ ಮಾಡ ಬಲ್ಲವು. ಸೂರ್ಯಕಿರಣ ತಂಡ ಶನಿ ವಾರ 7 ವಿಮಾನಗಳ ಮೂಲಕ ಸುಮಾರು 10 ನಿಮಿಷ ವಿವಿಧ ಆಯಾಮಗಳಲ್ಲಿ ಹಾರಾಟ ನಡೆಸಿ, ಎಲ್ಲರನ್ನು ನಿಬ್ಬೆರಗಾಗಿಸಿತು.
ಸೂರ್ಯಕಿರಣ್ 9 ವಿಮಾನಗಳೊಂದಿಗೆ ಹಾರಾಟ ನಡೆಸಲಾಗುತ್ತಿದೆ. ಆದರೆ, ಈ ಬಾರಿ ಏಳು ವಿಮಾನಗಳು ಮಾತ್ರ ಹಾರಾಟ ನಡೆಸಿವೆ. ಎದುರು ಬದುರಾದ ಹಾರಾಟ, ಹಕ್ಕಿಗಳಂತೆ ಒಂದರ ಹಿಂದೆ ಒಂದು ಸಾಗುವುದು ಸೇರಿದಂತೆ ಆಕಾಶದಲ್ಲೇ ಚಮತ್ಕಾರ ನಡೆಸಿದವು. ಬೆಳಗ್ಗೆ ಮತ್ತು ಮಧ್ಯಾಹ್ನ ಏಳು ವಿಮಾನ ಹಾರಾಟ ನಡೆಸಿವೆ.
ಜನ ಸಾಗರ: ಲೋಹದ ಹಕ್ಕಿಗಳ ಹಾರಾಟ ವೀಕ್ಷಣೆಗೆ ಶನಿವಾರ ಸಾರ್ವಜನಿಕರಿಗೂ ಅವಕಾಶ ನೀಡಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದರು. ವಾಯನೆಲೆಯ ಮಧ್ಯ ಭಾಗದಲ್ಲಿ ಸಾರ್ವಜನಿಕರ ವೀಕ್ಷಣೆಗಾ ಗಿಯೇ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 9 ಗಂಟೆಗೆ ವಿಮಾನಗಳ ಹಾರಾಟ ಆರಂಭವಾಗುತ್ತಿದ್ದಂತೆ ಪ್ರೇಕ್ಷಕರ ಗ್ಯಾಲರಿ ಭರ್ತಿಯಾಗಿತ್ತು.
ಪ್ರತಿ ವಿಮಾನವೂ ಹಾರಾಡುತ್ತಿದ್ದಾಗ ಸೆಲ್ಪಿ, ವಿಡಿಯೋಗಳು ತೆಗೆದುಕೊಳ್ಳುತ್ತಿದ್ದರು. ರನ್ ವೇಗೆ ಸಮೀಪದಲ್ಲಿ ನಿಲ್ಲಿಸಿದ್ದ ಧ್ರುವ್, ರುದ್ರ ಹೆಲಿಕ್ಯಾಪ್ಟರ್, ತೇಜಸ್ ಮೊದಲಾದ ವಿಮಾನಗಳ ಮುಂದೆ ನಿಂತು ಫೋಟೋ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಎಂದಿನಂತೆ ನಡೆದ ಪ್ರದರ್ಶನ ಮಧ್ಯಾಹ್ನ 12 ಗಂಟೆಗೆ ಸಂಭವಿಸಿದ್ದ ಅಗ್ನಿ ದುರಂತದಿಂದ ಪಾರ್ಕಿಂಗ್ ಪ್ರದೇಶದಲ್ಲಿ ದಟ್ಟಹೊಗೆ ಕಾಣಿಸಿಕೊಂಡಿದ್ದರಿಂದ ತಾತ್ಕಾಲಿಕವಾಗಿ ಕೆಲವು ನಿಮಿಷ ವಿಮಾನ ಹಾರಾಟ ಪ್ರದರ್ಶನ ನಿಲ್ಲಿಸಲಾಗಿತ್ತಾದರೂ, ಮಧ್ಯಾಹ್ನ ಶೋ ಎಂದಿನಂತೆ ಸರಿಯಾದ ಸಮಯಕ್ಕೆ ಆರಂಭವಾಗಿ ಗ್ಲೋಬ್-1, ಸುಕೊಯಿ, ಡಕೊಟ, ಪ್ರೊಟೊ, ಯಾಕ್, ನೇತ್ರಾ, ರಫೆಲ್, ಧನುಷ್, ತೇಜಸ್, ಸಾರಸ್ ಹಾಗೂ ಸೂರ್ಯಕಿರಣ್ ಹಾರಾಟ ನಡೆದಿದೆ