ನವದೆಹಲಿ: ಕರ್ನಾಟಕ ಸೇರಿ ಒಟ್ಟು 7 ರಾಜ್ಯಗಳಲ್ಲಿ ಮಾಧ್ಯಮಿಕ ಮಟ್ಟದಲ್ಲಿ ಶಾಲೆ ತೊರೆಯುವವರ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚಿದೆ. 2021-22ರಲ್ಲಿ ಕರ್ನಾಟಕದಲ್ಲಿ ಶೇ.14.6ರಷ್ಟು ಮಕ್ಕಳು ಶಾಲೆ ತೊರೆದಿದ್ದಾರೆ!
2023-24ಕ್ಕೆ “ಸಮಗ್ರ ಶಿಕ್ಷಾ” ಕಾರ್ಯಕ್ರಮದ ಅನುಷ್ಠಾನ ಕುರಿತ ಚರ್ಚೆಗಾಗಿ ಕೇಂದ್ರ ಶಿಕ್ಷಣ ಸಚಿವಾಲಯ ಹಮ್ಮಿಕೊಂಡಿದ್ದ ಯೋಜನಾ ಅನುಮತಿ ಮಂಡಳಿ(ಪಿಎಬಿ) ಸಭೆಯ ಟಿಪ್ಪಣಿಯಲ್ಲಿ ಈ ಅಂಶ ಬಹಿರಂಗವಾಗಿದೆ. ಮಾರ್ಚ್ ಮತ್ತು ಮೇ ತಿಂಗಳಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಕೇಂದ್ರ ಶಿಕ್ಷಣ ಸಚಿವಾಲಯ ಈ ಸಭೆಯನ್ನು ಹಮ್ಮಿಕೊಂಡಿತ್ತು.
ಈ ವೇಳೆ ತಿಳಿದುಬಂದ ಅಂಶವೇನೆಂದರೆ, 2021-22ರಲ್ಲಿ ಒಟ್ಟು 7 ರಾಜ್ಯಗಳಲ್ಲಿ ಶಾಲೆ ತೊರೆಯುವ ಮಕ್ಕಳ ಪ್ರಮಾಣ ರಾಷ್ಟ್ರೀಯ ಸರಾಸರಿ(ಶೇ.12.6)ಗಿಂತ ಅಧಿಕವಾಗಿದೆ. ಈ ರಾಜ್ಯಗಳೆಂದರೆ, ಮೇಘಾಲಯ, ಬಿಹಾರ, ಅಸ್ಸಾಂ, ಗುಜರಾತ್, ಪಂಜಾಬ್, ಆಂಧ್ರಪ್ರದೇಶ ಮತ್ತು ಕರ್ನಾಟಕ.
ಇನ್ನು, ಮಧ್ಯಪ್ರದೇಶದಲ್ಲಿ ಮಾಧ್ಯಮಿಕ ಮಟ್ಟದಲ್ಲಿ ಶಾಲೆ ತೊರೆಯುವ ಮಕ್ಕಳ ಪ್ರಮಾಣ 2020-21ರಲ್ಲಿ ಶೇ.23.8ರಷ್ಟಿತ್ತು. ಆದರೆ, 2021-22ರಲ್ಲಿ ಅದು ಶೇ.10.1ಕ್ಕೆ ಇಳಿದಿದೆ. ಮೊಬೈಲ್ ಆ್ಯಪ್ ಮೂಲಕ ಮನೆ ಮನೆಯ ಸಮೀಕ್ಷೆ, ಪ್ರತಿ ವರ್ಷ ನಡೆಯುವ ವಿಶೇಷ ಶಾಲಾ ಸೇರ್ಪಡೆ ಅಭಿಯಾನವೇ ಈ ಬದಲಾವಣೆಗೆ ಕಾರಣ. ಮಹಾರಾಷ್ಟ್ರದಲ್ಲಿ ವಾರ್ಷಿಕ ಡ್ರಾಪ್‌ಔಟ್ ಸರಾಸರಿ 2020-21ರಲ್ಲಿ ಶೇ.11.2ರಷ್ಟಿತ್ತು. ಒಂದು ವರ್ಷದ ಅವಧಿಯಲ್ಲಿ ಇದು ಶೇ.10.7ಕ್ಕೆ ಇಳಿದಿತ್ತು. ಉತ್ತರಪ್ರದೇಶದ 8 ಜಿಲ್ಲೆಗಳಲ್ಲಿ ಶಾಲೆ ತೊರೆಯುವವರ ಪ್ರಮಾಣ ಅತ್ಯಧಿಕವಾಗಿದೆ.
ಕಳೆದ ವರ್ಷ ಯುನಿಸೆಫ್ ನಡೆಸಿದ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಶೇ.33ರಷ್ಟು ಹೆಣ್ಣುಮಕ್ಕಳು ಮನೆಕೆಲಸದ ಕಾರಣ ನೀಡಿ ಶಾಲೆ ತೊರೆಯುತ್ತಿದ್ದಾರೆ. ಬಹುತೇಕ ಪ್ರದೇಶಗಳಲ್ಲಿ ಶಾಲೆ ತೊರೆಯುವ ಮಕ್ಕಳು ತಮ್ಮ ಕುಟುಂಬ ಸದಸ್ಯರ ಜತೆ ಸೇರಿ ದುಡಿಯಲು ಹೋಗುತ್ತಾರೆಂಬ ಆಘಾತಕಾರಿ ಮಾಹಿತಿ ತಿಳಿದುಬಂದಿತ್ತು.
……………………………
ಡ್ರಾಪ್‌ಔಟ್: ಎಲ್ಲಿ, ಎಷ್ಟು?
ಮೇಘಾಲಯ- ಶೇ.21.7
ಬಿಹಾರ – ಶೇ.20.46
ಅಸ್ಸಾಂ- ಶೇ.20.3
ಗುಜರಾತ್- ಶೇ.17.85
ಪಂಜಾಬ್ – ಶೇ.17.2
ಆಂಧ್ರಪ್ರದೇಶ – ಶೇ.16.7
ಕರ್ನಾಟಕ – ಶೇ.14.6