Advertisement
ಕಚೇರಿಯ ಕರ್ತವ್ಯದ ವೇಳೆಯಲ್ಲಿ ಶಿಸ್ತು ಹಾಗೂ ವಸ್ತ್ರಸಂಹಿತೆ ಕಡ್ಡಾಯವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಆದೇಶ ಹೊರಡಿಸಿದ್ದು, ವಸ್ತ್ರಸಂಹಿತೆ ಪಾಲಿಸದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಶಿಸ್ತು ಕ್ರಮಕ್ಕೆ ಸೂಚಿಸಿದ್ದಾರೆ. ಕೇಂದ್ರ ಕಚೇರಿ, ವಿಭಾಗೀಯ ಕಚೇರಿ, ಪ್ರಾದೇಶಿಕ ಹಾಗೂ ವಿಭಾಗೀಯ ಕಾರ್ಯಾಗಾರಗಳು, ಪ್ರಾದೇಶಿಕ ತರಬೇತಿ ಕೇಂದ್ರ ಸೇರಿ ಸಂಸ್ಥೆಯ ಎಲ್ಲ ಕಚೇರಿಗಳಲ್ಲಿ ಕಡ್ಡಾಯವಾಗಿ ವಸ್ತ್ರ ಸಂಹಿತೆಯನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲಿಸಬೇಕು.
Related Articles
ವಸ್ತ್ರ ಸಂಹಿತೆ ಪಾಲಿಸದವರಿಗೆ ದಂಡ, ಶಿಸ್ತು ಪ್ರಾಧಿಕಾರದ ಮುಖ್ಯಸ್ಥರು ವಾಗ್ಧಂಡನೆ ಕೂಡ ಮಾಡಬಹುದು. ಪುನರಾವರ್ತನೆಯಾದರೆ ತೀವ್ರ ಸ್ವರೂಪದ ಕ್ರಮ ಎದುರಿಸಬೇಕಾಗುತ್ತದೆ. ಸಮವಸ್ತ್ರ ಹೊಂದಿರುವ ಸಿಬ್ಬಂದಿ ಹಾಗೂ ಅಧಿಕಾರಿಗಳು ನಿಯಮ ಉಲ್ಲಂಘನೆಗೆ ನಿಯಮಾವಳಿ ಪ್ರಕಾರ ಕ್ರಮ ಎದುರಿಸಬೇಕಾಗುತ್ತದೆ. ಕರ್ತವ್ಯದ ವೇಳೆಯಲ್ಲಿ ವಸ್ತ್ರಸಂಹಿತೆ ಕಾಪಾಡಬೇಕು ಎನ್ನುವ ಬಗ್ಗೆ ಸರ್ಕಾರದ ಸುತ್ತೋಲೆಯಿದೆ. 2013ರಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ ಕಚೇರಿಗೆ ಬರುವಾಗ ಗೌರವ ತರುವಂತಹ ವಸ್ತ್ರಗಳನ್ನು ಧರಿಸಬೇಕೆಂದು ಎಲ್ಲ ಇಲಾಖೆಗಳ ಸಿಬ್ಬಂದಿಗೆ ಆದೇಶದ ಮೂಲಕ ಸೂಚಿಸಿತ್ತು. ಆರಂಭದಲ್ಲಿ ಇದು ಪಾಲನೆಯಾದರೂ ನಂತರ ಹೊಸದಾಗಿ ನೇಮಕಾತಿ ಹೊಂದಿದವರು ಪಾಲನೆ ಮಾಡಲಿಲ್ಲ. ಆದರೆ ಇದೀಗ ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ಈ ಸುತ್ತೋಲೆಯನ್ನು ಕಡ್ಡಾಯವಾಗಿ ಪಾಲನೆ ಮಾಡುವ ನಿಟ್ಟಿನಲ್ಲಿ ವ್ಯವಸ್ಥಾಪಕ ನಿರ್ದೇಶಕರು ಕೈಗೊಂಡಿರುವ ಕ್ರಮಕ್ಕೆ ಸಿಬ್ಬಂದಿ ವರ್ಗದಿಂದ ಮೆಚ್ಚುಗೆ ವ್ಯಕ್ತವಾಗಿದೆ.
Advertisement
ಸರ್ಕಾರದ ಹಿಂದಿನ ಆದೇಶದಂತೆ ಸಂಸ್ಥೆಯಲ್ಲಿ ಶಿಸ್ತು ತರುವ ನಿಟ್ಟಿನಲ್ಲಿ ಆರಂಭಿಕವಾಗಿ ವಸ್ತ್ರಸಂಹಿತೆ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಆದೇಶವನ್ನು ಸಿಬ್ಬಂದಿ ಪಾಲನೆ ಮಾಡುತ್ತಾರೆ ಎನ್ನುವ ನಂಬಿಕೆಯಿದೆ. ಪಾಲನೆ ಮಾಡದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು.– ರಾಜೇಂದ್ರ ಚೋಳನ್, ವ್ಯವಸ್ಥಾಪಕ ನಿರ್ದೇಶಕರು – ಹೇಮರಡ್ಡಿ ಸೈದಾಪುರ