Advertisement

ಕೆರೆ ಹೂಳೆತ್ತುವ ಕಾರ್ಯ ರಾಜ್ಯಾದ್ಯಂತ ನಡೆಯಲಿ

10:04 AM Feb 02, 2019 | Team Udayavani |

ರಾಯಚೂರು: ಇಂದು ಎಲ್ಲ ಕಡೆಯೂ ನೀರಿನ ಸಮಸ್ಯೆ ಎದುರಾಗಿದೆ. ಇಂಥ ವೇಳೆ ಭಾರತೀಯ ಜೈನ ಸಂಘ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ಈ ಕಾರ್ಯ ಇಡೀ ರಾಜ್ಯಾದ್ಯಂತ ನಡೆಯಲಿ ಎಂದು ಸಹಕಾರ ಖಾತೆ ಸಚಿವ ಬಂಡೆಪ್ಪ ಖಾಶೆಂಪುರ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಕಟ್ಲಟ್ಕೂರು ಗ್ರಾಮದ ಹೊರ ವಲಯದ 96 ಹೆಕ್ಟೇರ್‌ ಪ್ರದೇಶದ ಕೆರೆಯಲ್ಲಿ ನೀತಿ ಆಯೋಗದಡಿ ರಾಜ್ಯ ಸರ್ಕಾರದ ಬೆಂಬಲದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಭಾರತೀಯ ಜೈನ್‌ ಸಂಘಟನೆ ಹಮ್ಮಿಕೊಂಡಿರುವ ಹೂಳೆತ್ತುವ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಬೀದರ ಜಿಲ್ಲೆಯಲ್ಲೂ 120 ಸಣ್ಣ ಕೆರೆಗಳಿವೆ. ಹೂಳೆತ್ತುವ ಕಾರ್ಯವನ್ನು ಜಿಲ್ಲಾಡಳಿತವೇ ಕೈಗೊಂಡಿದೆ. ಈ ಯೋಜನೆ ಬಗ್ಗೆ ನಮ್ಮೊಟ್ಟಿಗೆ ಚರ್ಚಿಸಿದಾಗ ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರು ತಕ್ಷಣವೇ ಒಪ್ಪಿಗೆ ಸೂಚಿಸಿದ್ದಾರೆ. ಬೀದರನಲ್ಲಿ ಡಿಸಿಯೊಬ್ಬರು ಇದೇ ರೀತಿ ಕೆಲಸ ಮಾಡಿದ್ದರಿಂದ ಸುತ್ತಲೂ ಅಂತರ್ಜಲ ಹೆಚ್ಚಾಗಿತ್ತು. ಇಂದು ಅವರು ನಮ್ಮೊಂದಿಗಿಲ್ಲ. ಆದರೆ, ಅವರು ಮಾಡಿದ ಕೆಲಸವನ್ನು ಎಲ್ಲರೂ ಸ್ಮರಿಸುತ್ತಾರೆ. ಒಳ್ಳೆಯ ಕೆಲಸ ಯಾರು ಮಾಡಿದರೂ ಅದು ಶ್ಲಾಘಿಸಲ್ಪಡುತ್ತದೆ. ಅಂಥ ಕೆಲಸ ಮಾಡಿದ ಭಾರತೀಯ ಜೈನ ಸಂಘ ಅಭಿನಂದನೆಗೆ ಅರ್ಹ. ಇನ್ನೂ ಹೆಚ್ಚಿನ ಕೆಲಸ ಅವರಿಂದ ಆಗಲಿ ಎಂದು ಹೇಳಿದರು.

ಭಾರತೀಯ ಜೈನ ಸಂಘದ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಲುಂಖಡ ಮಾತನಾಡಿ, ಶಿಕ್ಷಣ, ಸಮಾಜ ಸೇವೆ ಉದ್ದೇಶದಿಂದ ಸ್ಥ್ಫಾಪನೆಯಾದ ನಮ್ಮ ಸಂಘ 2 ದಶಕದಲ್ಲಿ ಈ ಮಟ್ಟಕ್ಕೆ ಬೆಳೆದಿದೆ. ಈಗ ಕೈಗೊಂಡ ಈ ಕಾರ್ಯ ರಾಜಕೀಯ ಪ್ರೇತರಿತವಾಗಲಿ, ಪ್ರತಿಫಲಾಕ್ಷೆಯಿಂದ ಕೂಡಿಲ್ಲ. ಕೇವಲ ಸೇವಾಭಾವದಿಂದ ಕೈಗೊಂಡಿದ್ದೇವೆ ಎಂದು ವಿವರಿಸಿದರು.

ಈಗ ನೀರಿನ ಅಭಾವ ಎಲ್ಲೆಡೆ ಶುರುವಾಗಿದೆ. ಹೀಗಾಗಿ ನೀರಿನ ರಕ್ಷಣೆಗೆ ನಾವು ಆದ್ಯತೆ ನೀಡಿದ್ದೇವೆ. ಬೇರೆ ರಾಜ್ಯಗಳಲ್ಲೂ ಈ ಯೋಜನೆ ಜಾರಿಗೊಳಿಸಿದ್ದೇವೆ. ಆದರೆ, ಕರ್ನಾಟಕದಲ್ಲಿ ಸಿಕ್ಕಂಥ ಸಹಕಾರ ಎಲ್ಲೂ ಸಿಕ್ಕಿಲ್ಲ. ಇದೊಂದು ಪಾರದರ್ಶಕ ಯೋಜನೆಯಾಗಿದೆ. ಸರ್ಕಾರ ಮತ್ತು ಜನರ ಸಹಭಾಗಿತ್ವದಡಿ ನಡೆಯಲಿದೆ. ಮಳೆಗಾಲಕ್ಕೆ ಇನ್ನೂ ನಾಲ್ಕು ತಿಂಗಳಿದ್ದು, ಅಷ್ಟರೊಳಗೆ ಹೂಳೆತ್ತಬೇಕಿದೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

Advertisement

ಜಿಲ್ಲಾ ಉಸ್ತುವಾರಿ ವೆಂಕಟರಾವ್‌ ನಾಡಗೌಡ, ಸಂಸದ ಬಿ.ವಿ.ನಾಯಕ, ಶಾಸಕ ಶಿವನಗೌಡ ನಾಯಕ ಮಾತನಾಡಿದರು. ಗ್ರಾಮೀಣ ಶಾಸಕ ದದ್ದಲ್‌ ಬಸನಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಚಿವರಾದ ಸತೀಶ ಜಾರಕಿಹೊಳಿ, ಪ್ರಿಯಾಂಕ್‌ ಖರ್ಗೆ, ರಾಜಶೇಖರ ಪಾಟೀಲ, ಶಾಸಕರಾದ ಡಾ| ಶಿವರಾಜ ಪಾಟೀಲ, ಪ್ರತಾಪಗೌಡ ಪಾಟೀಲ, ರಾಜಾವೆಂಕಟಪ್ಪ ನಾಯಕ, ಎನ್‌.ಎಸ್‌.ಬೋಸರಾಜ್‌, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಜಿಲ್ಲಾಧಿಕಾರಿ ಶರತ್‌ ಬಿ., ಜಿಪಂ ಸಿಇಒ ನಲಿನ್‌ ಅತುಲ್‌, ಎಸ್‌ಪಿ ಡಿ. ಕಿಶೋರಬಾಬು ಸೇರಿ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.

ವಿಶೇಷ ಹೋಮ
ಕೆರೆ ಹೂಳೆತ್ತುವ ಯೋಜನೆ ಜಾರಿಗೂ ಮುನ್ನ ಆಯೋಜಕರು ವಿಶೇಷ ಹೋಮ ನೆರವೇರಿಸಿದರು. ಸುರೇಂದ್ರಾಚಾರ್ಯ ಕೊರ್ತಕುಂದ ಅವರ ನೇತೃತ್ವದಲ್ಲಿ ಹೋಮ ನಡೆಯಿತು. ಗಣ್ಯರು ಪೂಜೆ ಸಲ್ಲಿಸುವ ಮೂಲಕ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದರು. ಇನ್ನೂ ಸುತ್ತಲಿನ ಗ್ರಾಮಗಳ ರೈತರು ಹೂಳು ತುಂಬಿಕೊಂಡು ಹೋಗಲು ಟ್ರಾಕ್ಟರ್‌, ಟಿಪ್ಪರ್‌ಗಳನ್ನು ತಂದಿದ್ದರು.

ಇದೊಂದು ಉತ್ತಮ ಕಾರ್ಯಕ್ರಮ. ಕೆರೆಗಳು ರೈತರ ಜೀವನಾಡಿಗಳು. ಹಿಂದಿನ ಕಾಲಕ್ಕೆ ಅನುಗುಣವಾಗಿ ಕೆರೆಗಳ ನಿರ್ಮಾಣ ಮಾಡಿದ್ದು, ಇಂದು ಅವುಗಳನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ. ಬಿಸಿಲೂರು ರಾಯಚೂರು ಬರಕ್ಕೆ ಸಾಕಷ್ಟು ನಲುಗಿದೆ. ಮಳೆ ಪ್ರಮಾಣ ಕಡಿಮೆಯಾಗಿದೆ. ಜಲಮೂಲಗಳ ಸಂರಕ್ಷಣೆ ಮಾಡದ ಹೊರತು ರೈತರ ಬದುಕು ಬದಲಾಗುವುದಿಲ್ಲ.
•ಶಿವಶಂಕರರೆಡ್ಡಿ ಎನ್‌.ಎಚ್., ಕೃಷಿ ಖಾತೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next