Advertisement

ಕಂಡ ಕನಸುಗಳ ಬೆನ್ನೇರಿ ಸಾಗಬೇಕು

12:37 AM Apr 13, 2019 | Lakshmi GovindaRaju |

ಬೆಂಗಳೂರು: “ನಾನು ಸರ್ಕಾರಿ ಅನುದಾನಿತ ಶಾಲೆಯಲ್ಲಿ ಓದಿ ಬೆಳೆದೆ. ಸಮಾಜ ಸೇವೆ ಮಾಡಬೇಕು, ಐಎಎಸ್‌ ಅಧಿಕಾರಿ ಆಗಬೇಕು ಎಂಬ ಕನಸು ಹೊತ್ತಿದ್ದೆ. ಆ ಕನಸುಗಳ ಬೆನ್ನೇರಿ ಹೋದ ಹಿನ್ನೆಲೆಯಲ್ಲಿ ಯಶಸ್ಸು ಪಡೆದಿದ್ದು, ಸಮಾಜ ಸೇವೆಯೇ ನನ್ನ ಮೊದಲ ಆದ್ಯತೆ’.

Advertisement

ಇದು 2018-19 ಯುಪಿಎಸ್‌ಸಿ ಪರೀಕ್ಷೆಯಲ್ಲಿ 240ನೇ ರ್‍ಯಾಂಕ್‌ ಪಡೆದ ನಗರದ ಆರ್‌.ವಿ.ರಸ್ತೆಯಲ್ಲಿರುವ “ಬೆಂಗಳೂರು ಹೈ ಸ್ಕೂಲ್‌’ ನಲ್ಲಿ ಓದಿ ಬೆಳೆದ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರದ ಕೌಶಿಕ್‌ ಎಚ್‌.ಆರ್‌.ಅವರ ಮನದ ಮಾತು.

ಯೂನಿವರ್ಸೆಲ್‌ ಸ್ಕೂಲ್‌ ಆಫ್ ಆಡ್ಮಿನಿಸ್ಟ್ರೇಷನ್‌ ಶುಕ್ರವಾರ ಸಚಿವಾಲಯ ಕ್ಲಬ್‌ನಲ್ಲಿ ಭವಿಷ್ಯತ್ತಿನ ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಅಭ್ಯರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದ ಅವರು,“ಉದಯವಾಣಿ’ಯೊಂದಿಗೆ ತಮ್ಮ ಯಶೋಗಾಥೆ ಬಗ್ಗೆ ಹಂಚಿಕೊಂಡರು.

ಇದಕ್ಕೆ ಮುನ್ನ ಯುಪಿಎಸ್‌ಸಿ ಪರೀಕ್ಷೆ ಭಿನ್ನವಾಗಿರುತ್ತದೆ. ಈ ಬಗ್ಗೆ ಅಭ್ಯರ್ಥಿಗಳಿಗೆ ಪೂರ್ವ ಸಿದ್ಧತೆಗಳು ಅವಶ್ಯವಾಗಿದೆ. ಕಠಿಣ ಅಭ್ಯಾಸದ ಮೂಲಕ ಯಶಸ್ಸಿನ ಮೆಟ್ಟಿಲೇರಬಹುದಾಗಿದ್ದು, ಆ ನಿಟ್ಟಿನಲ್ಲಿ ನಮ್ಮ ಆಲೋಚನಾ ಲಹರಿ ಮತ್ತು ಪರಿಶ್ರಮ ಇರಬೇಕಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಉಪೇಂದ್ರ ಶೆಟ್ಟಿ ನುಡಿದರು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ 240ನೇ ರ್‍ಯಾಂಕ್‌ ಪಡೆದಿರುವುದು ತುಂಬಾ ಸಂತೋಷ ನೀಡಿದೆ. ಇದು, ನನ್ನ ಶ್ರಮದ ಫ‌ಲ. ಶ್ರೀನಗರದ ಮನೆಯಿಂದ “ಬೆಂಗಳೂರು ಹೈಸ್ಕೂಲ್‌’ಗೆ ಹೋಗುತ್ತಿದ್ದೆ. ಆ ಶಾಲೆಯಲ್ಲಿನ ಓದೇ ನನ್ನಲ್ಲಿ ಛಲ ಹುಟ್ಟಿಸಿತ್ತು.

Advertisement

ಸಮಾಜ ಸೇವೆ ಮಾಡುವ ಪ್ರರೇಪಣೆ ನೀಡಿತು. ಸಮಾಜ ನಮಗೆ ಎಷ್ಟೇಲ್ಲ ಕೊಡುಗೆ ನೀಡಿದೆ. ನಾನು ಕೂಡ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ತೀರ್ಮಾನಿಸಿ ಆಗಲೇ, ಐಎಎಸ್‌ ಅಧಿಕಾರಿಯಾಗಬೇಕೆಂಬ ಛಲದಿಂದ ಮುಂದುವರಿದೆ ಎಂದರು.

ಒಂದೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆಯಾಗದೇ ಇದ್ದರೂ, ನಮ್ಮ ಪ್ರಯತ್ನವನ್ನು ನಾವು ಬಿಡಬಾರದು. ಸತತ ಪ್ರಯತ್ನ ಮುಂದೊಂದು ದಿನ ನಮ್ಮ ಕೈಹಿಡಿಯುತ್ತದೆ ಎಂಬ ನಂಬಿಕೆಯಲ್ಲಿ ಸಾಗಬೇಕು.ನಾನು ಕೂಡ ನಾಲ್ಕನೇ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದೆ ಎಂದು ನುಡಿದರು.

ಸರ್ಕಾರಿ ಶಾಲೆ ಉಳಿಸಬೇಕಿದೆ: ಇವತ್ತು ಸರ್ಕಾರಿ ಶಾಲೆಗಳು ತುಂಬಾ ತೊಂದರೆಯಲಿವೆ. ಯಾರು, ಯಾರು ಸರ್ಕಾರಿ ಶಾಲೆಗಳಲ್ಲಿ ಕಲಿತು ಉನ್ನತ ಹುದ್ದೆ ಅಲಂಕರಿಸಿದ್ದಾರೋ, ಅಂತವರು ತಾವು ಕಲಿತ ಶಾಲೆ ಏಳ್ಗೆಗಾಗಿ ಏನಾದರೂ ಕೊಡುಗೆ ನೀಡಬೇಕು.

ಮೂಲಭೂತ ಸೌಕರ್ಯ ಕಲ್ಪಿಸಲು ಸಹಕಾರ ನೀಡಬೇಕು. ಇಲ್ಲವೆ ವಾರದಲ್ಲಿ ಒಂದು ದಿನ ತಾವು ಕಲಿತಂತ ಶಾಲೆಗೆ ಹೋಗಿ ಪಾಠವನ್ನಾದರೂ ಮಾಡಬೇಕು ಎನ್ನುತ್ತಾರೆ ಕೌಶಿಕ್‌. ಗ್ರಾಮೀಣ ಪ್ರದೇಶದ ಭಾಗಗಳಲ್ಲಿ ಪೋಷಕರು ಹಣ ಕೊಟ್ಟು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವಂತ ಸ್ಥಿತಿಯಲ್ಲಿ ಇರುವುದಿಲ್ಲ.

ಆ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳನ್ನು ನಾವು ಉಳಿಸಿ -ಬೆಳಸಬೇಕು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸೂಕ್ತವಾದ ಮಾರ್ಗದರ್ಶನ ನೀಡಿದರೆ ಅವರು ಕೂಡ ಮುಂದೊಂದು ದಿನ ಉನ್ನತ ಹುದ್ದೆ ಅಲಂಕರಿಸುತ್ತಾರೆ ಎಂಬ ಭರವಸೆ ವ್ಯಕ್ತಪಡಿಸುತ್ತಾರೆ.

ಎಂಜಿನಿಯರಿಂಗ್‌ ನಿಂದ ಯುಪಿಎಸ್‌ಸಿ ವರೆಗೆ: “ನನಗೆ ಎಂಜಿನಿಯರಿಂಗ್‌ ಕ್ಷೇತ್ರದ ಬಗ್ಗೆ ಆಸಕ್ತಿ ಇತ್ತು. ಐಟಿ ಕಂಪನಿಗಳು ಹೇಗೆ ಕೆಲಸ ಮಾಡುತ್ತಿವೆ ಎಂಬ ಬಗ್ಗೆ ತಿಳಿದು ಕೊಳ್ಳುವ ಕೌತುಕವಿತ್ತು. ಹೀಗಾಗಿ ಎಂಜಿನಿಯರಿಂಗ್‌ ಓದಿ ಐಟಿ ಕಂಪನಿ ಸೇರಿದೆ.

ಅಲ್ಲಿ ಕೆಲಸ ಮಾಡುತ್ತಲೇ ಎನ್‌ಜಿಒಗಳ ಜತೆಗೂಡಿ ಸಮಾಜ ಸೇವೆಯಲ್ಲಿ ತೊಡಗಿದೆ.ಆಗ ಇದಕ್ಕಿಂತ ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡಬೇಕೆಂದು ಅನಿಸಿತು. ಐಎಎಸ್‌ ಅಧಿಕಾರಿಯಾದರೆ ಮತ್ತಷ್ಟು ಕೆಲಸ ಮಾಡಬಹುದೆಂಬ ನಂಬಿಕೆ ಇತ್ತು. ಆ ಕನಸು ಈಗ ನೆನಸಾಗಿದೆ’ ಎಂದು ಖುಷಿ ಪಟ್ಟರು.

ಯಾವ ಹುದ್ದೆ ದೊರೆಯುತ್ತದೆಯೋ ಎಂಬ ಬಗ್ಗೆ ಇನ್ನೂ ತಿಳಿದಿಲ್ಲ. ಐಪಿಎಸ್‌ ಅಧಿಕಾರಿ ಹುದ್ದೆ ನೀಡಬಹುದು ಎಂಬ ನಿರೀಕ್ಷೆ ಇದೆ. ಆದರೆ ಯಾವ ಹುದ್ದೆ ನೀಡಿದರೂ, ಸಮಾಜ ಸೇವೆಯೆ ನನ್ನ ಮೊದಲ ಆದ್ಯತೆ ಎಂದರು.

ಎಚ್ಚರಿಸುತ್ತಿದ್ದ ಬದ್ಧನ ಹಿತ ವಚನ: ಓದುವ ಕೋಣೆ ತುಂಬೆಲ್ಲಾ ಬುದ್ಧನ ಹಿತ ವಚನಗಳನ್ನು ಅಂಟಿಸಿದ್ದೆ. ಪದೇ ಪದೇ ಅವು ನನ್ನನ್ನು ಎಚ್ಚರಿಸುತ್ತಿದ್ದವು. ಅಭ್ಯಾಸದತ್ತ ದೂಡುತ್ತಿದ್ದವು. ಯಾವುದೇ ಕೆಲಸ ಮಾಡುವ ಮೊದಲು ನಮ್ಮ ಬಗ್ಗೆ ನಮಗೆ ದೃಢವಾದ ನಂಬಿಕೆ ಇರಬೇಕು. ಇದರ ಜತೆಗೆ ಕಣ್ತುಂಬ ಕನಸುಗಳಿರಬೇಕು ಎಂದು ಕೌಶಿಕ್‌ ಹೇಳುತ್ತಾರೆ.

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next