Advertisement

ವಿರಾಮ ರಾಜ್ಯದ ಕನಸು

02:02 AM Feb 17, 2021 | Team Udayavani |

4 ದಿನ ಕೆಲಸ, 3 ದಿನ ವಿರಾಮ! ಭಾರತದಲ್ಲಿ ಈ ಮಾದರಿಯ ಹೊಸ “ಉದ್ಯೋಗಪರ್ವ’ ಆರಂಭಗೊಳ್ಳುವ ದಿನಗಳು ಹೆಚ್ಚು ದೂರವಿಲ್ಲ. ಕೆಲಸದ ಅವಧಿ ಸಂಬಂಧ ಕೇಂದ್ರ ಸರಕಾರ ಕಾರ್ಮಿಕ ನೀತಿಗಳಿಗೆ ತಿದ್ದುಪಡಿ ತರಲು ಮುಂದಾಗಿದೆ. ವಾರದಲ್ಲಿ 4 ಅಥವಾ 5 ಕರ್ತವ್ಯದ ದಿನಗಳಿಗೆ ನೂತನ ನೀತಿ ಅವಕಾಶ ಮಾಡಿಕೊಡಲಿದೆ. ಈ ಪರಿಕಲ್ಪನೆ ಸುತ್ತಾ ಒಂದು ಇಣುಕುನೋಟ…

Advertisement

2-3 ದಿನ ರಜೆ, ಏನು ಲಾಭ?
– “ವಾರದಲ್ಲಿ ಕೆಲಸ ಅವಧಿ ಕಡಿತಗೊಳಿಸುವುದಿಂದ ಉತ್ಪಾದಕತೆ ಹೆಚ್ಚುತ್ತೆ’ ಅಂತಾರೆ ಕಾರ್ಪೊರೇಟ್‌ ವಲಯ ತಜ್ಞರು.
– ಇಂಥ ನೀತಿಗಳಿಂದ ಸಂಸ್ಥೆ ಹೆಚ್ಚಿನ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಸಾಧ್ಯ.
– 2019ರಲ್ಲಿ ಮೈಕ್ರೋಸಾಫ್ಟ್ ಜಪಾನ್‌ ಈ ನೀತಿಯಿಂದಾಗಿ ಉತ್ಪನ್ನಗಳಲ್ಲಿ ಶೇ.40 ಹೆಚ್ಚು ಮಾರಾಟ ಕಂಡಿತ್ತು. ಅಲ್ಲದೆ ಪ್ರತೀ ತಿಂಗಳು ವಿದ್ಯುತ್‌ ಬಳಕೆ ಶೇ.23ರಷ್ಟು, ಕಾಗದ ಮುದ್ರಣ ಶೇ.59ರಷ್ಟು ಕಡಿಮೆಯಾಗಿತ್ತು.

ಉದ್ದೇಶಿತ ಕಾಯ್ದೆ ಹೇಳುವುದೇನು?
– ಉದ್ಯೋಗಿಗಳಿಗೆ ವಾರದಲ್ಲಿ 48 ಗಂಟೆ ಮಾತ್ರವೇ ಕೆಲಸಕ್ಕೆ ಅವಕಾಶ ನೀಡಬೇಕು.
– ಈ ಪ್ರಕಾರವಾಗಿ, ಉದ್ಯೋಗಿಯ ಒಪ್ಪಿಗೆ ಮೇರೆಗೆ ಆತ ನಿತ್ಯ 9.6 ತಾಸು ದುಡಿದು, ವಾರಾಂತ್ಯದಲ್ಲಿ 2 ದಿನ ರಜೆ ಪಡೆಯಬಹುದು.
– ವಾರಾಂತ್ಯದಲ್ಲಿ 3 ದಿನ ರಜೆ ಬೇಕಿರುವವರು, ನಿತ್ಯ 12 ತಾಸಿನಂತೆ 4 ದಿನ ದುಡಿಯುವುದು ಕಡ್ಡಾಯ.
– 2 ಅಥವಾ 3 ದಿನ ರಜೆ ಕ್ರಮಾನುಗತಿಯಲ್ಲೇ ನೀಡಬೇಕು. ಅಂದರೆ ವಾರದ ಮಧ್ಯದಲ್ಲೊಂದು, ವಾರಾಂತ್ಯದಲ್ಲೊಂದು ಎಂಬಂತೆ ಇಲ್ಲ.
– ವೀಕ್‌ ಡೇಗಳಲ್ಲಿ ಚಹಾ, ಲಂಚ್‌ ವಿರಾಮಗಳನ್ನೂ ಕರ್ತವ್ಯದ ಅವಧಿಯೆಂದೇ ಸಂಸ್ಥೆಗಳು ಪರಿಗಣಿಸುವುದು.

ಎಲ್ಲೆಲ್ಲಿ, ಏನ್‌ ಕಥೆ?
ಫ್ರಾನ್ಸ್‌: ಕೆಲಸದ ಅವಧಿ ಕಡಿತ ನೀತಿಯನ್ನು ಫ್ರಾನ್ಸ್‌ 20 ವರ್ಷಗಳ ಹಿಂದೆಯೇ ಜಾರಿಗೊಳಿಸಿದೆ. ಆದರೆ ಈ ನೀತಿ ಫ್ರೆಂಚ್‌ ಸಂಸ್ಥೆಗಳ ನಡುವೆ ಸ್ಪರ್ಧೆ ತಗ್ಗಿಸಿದೆ.

ನೆದರ್‌ಲ್ಯಾಂಡ್‌: 2000ದಿಂದ ವಾರಕ್ಕೆ 29 ಗಂಟೆ ಕೆಲಸದ ಅವಧಿ ನಿಗದಿಪಡಿಸಿತ್ತು.

Advertisement

ನ್ಯೂಜಿಲ್ಯಾಂಡ್‌ಫಿನ್ ಲ್ಯಾಂಡ್‌: ಕಾರ್ಯಾವಧಿ ಕಡಿತ ಕುರಿತು ನಿರ್ಧರಿಸುವ ಹೊಣೆಯನ್ನು ಸಂಸ್ಥೆ ಮುಖ್ಯಸ್ಥರಿಗೆ ನೀಡಿವೆ.

ಸವಾಲುಗಳೇನು?
– ವೀಕ್‌ ಡೇಗಳು ಸಂಕುಚಿತಗೊಂಡು, ನೌಕರನಿಗೆ ಹೆಚ್ಚು ಒತ್ತಡ ಸೃಷ್ಟಿ .
– ಎಲ್ಲ ರೀತಿಯ ಉದ್ಯಮಗಳಿಗೆ ಇದು ಹೊಂದಿಕೆ ಆಗದು. ಉದಾ: ವಾರದಲ್ಲಿ ಏಳೂ ದಿನ ಆಹಾರ ಸೇವೆ ನೀಡುವ ರೆಸ್ಟಾರೆಂಟ್‌, ನಿತ್ಯವೂ ಪತ್ರಿಕೆ ಪ್ರಕಟಿಸುವ ಪತ್ರಿಕೋದ್ಯಮಕ್ಕೆ ಇದು ಸವಾಲು.
– ಪ್ರಸ್ತುತ ಭಾರತದಲ್ಲಿ ಹೆಚ್ಚಿನ ನೌಕರರು ಶಿಫ್ಟ್ಗಳಿಗೇ ಒಗ್ಗಿ ಹೋಗಿದ್ದಾರೆ.

ಭಾರತ ಈಗ ಎಷ್ಟು ಕೆಲಸ ಮಾಡ್ತಿದೆ?
ಇತರೆ ದೇಶಗಳಿಗೆ ಹೋಲಿಸಿದರೆ, ಭಾರತೀಯರು ವರ್ಷದಲ್ಲಿ ಸುದೀರ್ಘ‌ ಕೆಲಸ ಮಾಡುತ್ತಿದ್ದಾರೆ. ವರ್ಷದಲ್ಲಿ 35 ವಾರ ಮಾತ್ರವೇ ದುಡಿಸಿಕೊಳ್ಳುವ ಫ್ರಾನ್ಸ್‌ ಈ ವಿಚಾರದಲ್ಲಿ ನಂ.1 ಸ್ಥಾನ ಪಡೆದಿದೆ.

ಟ್ರೆಂಡ್‌ ಆರಂಭ
1908ರಲ್ಲಿ ಅಮೆರಿಕದ ನ್ಯೂ ಇಂಗ್ಲೆಂಡ್‌ ಮಿಲ್‌ ಸಂಸ್ಥೆ ವಾರದಲ್ಲಿ 5 ದಿನ ಕೆಲಸ ಪದ್ಧತಿ ಅಳವಡಿಸಿತು. ಧಾರ್ಮಿಕ ಕಾರಣಗಳಿಗಾಗಿ ಈ ನೀತಿ ಜಾರಿಗೆ ಬಂದಿತ್ತು. ಯಹೂದಿಗಳಿಗೆ ಶನಿವಾರ ಪ್ರಾರ್ಥನಾ ದಿನವಾದ ಕಾರಣ ಅಂದು ರಜೆ ಪಡೆದು, ರವಿವಾರ ಕೆಲಸಕ್ಕೆ ಮರಳುತ್ತಿದ್ದರು. ರವಿವಾರ ಪ್ರಾರ್ಥನೆದಿನವಾಗಿದ್ದರಿಂದ, ಕ್ರಿಶ್ಚಿಯನ್ನರು ಅಂದು ರಜೆ ಪಡೆಯುತ್ತಿದ್ದರು. ಇಬ್ಬರಿಗೂ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಶನಿವಾರ- ರವಿವಾರ ವಾರಾಂತ್ಯದ ರಜೆಗಳಾಗಿ ಘೋಷಿಸಲಾಗಿತ್ತು.

ಕೆಲಸದ ಸಮಯಕ್ಕೆ ಹೊಸ ತಿರುವು ನೀಡಿದ ಫೋರ್ಡ್‌
ಪಶ್ಚಿಮ ರಾಷ್ಟ್ರಗಳಲ್ಲಿ ಕೈಗಾರಿಕಾ ಕ್ರಾಂತಿ ಆರಂಭವಾದ ಸಮಯದಲ್ಲಿ ದಿನಕ್ಕೆ 8 ಗಂಟೆ ಕೆಲಸ ಎನ್ನುವ ಪರಿಕಲ್ಪನೆಯೇ ಇರಲಿಲ್ಲ. ಆಗೆಲ್ಲ ಉದ್ಯೋಗಿಗಳು 10-16 ಗಂಟೆ ಕೆಲಸ ಮಾಡುತ್ತಿದ್ದರು. ಆದರೆ ಸೆಪ್ಟಂಬರ್‌ 25, 1926ರಂದು ಫೋರ್ಡ್‌ ಮೊಟಾರ್‌ ಕಂಪೆನಿಯ ಸ್ಥಾಪಕ ಹೆನ್ರಿ ಫೋರ್ಡ್‌, ತಮ್ಮ ಕಂಪೆನಿಯಲ್ಲಿ ವಾರಕ್ಕೆ 5 ದಿನ ಹಾಗೂ ದಿನಕ್ಕೆ 8 ಗಂಟೆ ಮಾತ್ರ ಕೆಲಸ ಎಂಬ ನವನಿಯಮ ತಂದುಬಿಟ್ಟರು. ಆರಂಭದಲ್ಲಿ ಈ ಸಂಗತಿ ಉದ್ಯಮ ವಲಯಗಳ ಹುಬ್ಬೇರಿಸಿದ್ದು ಸುಳ್ಳಲ್ಲ. ಆದರೆ ಈ ನವ ನಿಯಮದ ಅನಂತರದಿಂದ ಫೋರ್ಡ್‌ ಕಂಪೆನಿಯ ಉತ್ಪಾದಕತೆಯಲ್ಲಿ ಗಣನೀಯ ಬೆಳವಣಿಗೆ ದಾಖಲಾಗತೊಡಗಿತು. ಇದನ್ನು ನೋಡಿ ಕೈಗಾರಿಕಾ ವಲಯಗಳೆಲ್ಲ ಇದೇ ನಿಯಮ ಅಳವಡಿಸಿಕೊಳ್ಳಲಾರಂಭಿಸಿದವು. ಈ ವಿಚಾರವಾಗಿ ಫೋರ್ಡ್‌ ಅವರನ್ನು ಪ್ರಶ್ನಿಸಿದಾಗ, ಇದರಿಂದಾಗಿ ಕಂಪೆನಿಯೊಂದರ ಉತ್ಪಾದಕತೆ ಹೆಚ್ಚುವುದಷ್ಟೇ ಅಲ್ಲದೇ, ವಾರದಲ್ಲಿ ಹೆಚ್ಚು ರಜಾ ದಿನಗಳು ದೊರೆತರೆ, ನೌಕರ ವರ್ಗಕ್ಕೆ ಶಾಪಿಂಗ್‌ಗೆ ಹೋಗಲು ಸಮಯ ದೊರೆಯುತ್ತದೆ. ಇದರಿಂದ ಮಾರುಕಟ್ಟೆಗೂ ಲಾಭ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next