Advertisement
ಚಾಮರಾಜಪೇಟೆಯ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ವೆಂಕಟರಮಣ ದೇವಾಲಯ, ವೈಯಾಲಿ ಕಾವಲ್‌ನ ಶ್ರೀ ವೆಂಕಟರಮಣ ದೇವಸ್ಥಾನ, ಜೆಪಿ ನಗರದ ಎರಡನೆ ಹಂತದಲ್ಲಿರುವ ಶ್ರೀ ತಿರುಮಲಗಿರಿ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇಗುಲ, ಇಸ್ಕಾನ್ ಸೇರಿದಂತೆ ಸಿಲಿಕಾನ್ ಸಿಟಿಯ ಹಲವು ದೇವಾಲಯಗಳಲ್ಲಿ ವೈಕುಂಠ ಏಕಾದಶಿಯ ವೈಭವ ಮೇಳೈಸಿತ್ತು.
Related Articles
Advertisement
ದೇವಾಲಯದ ಆಡಳಿತ ಮಂಡಳಿ ಗೋವಿಂದನ ನಾಮಸ್ಮರಣೆಯ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿತ್ತು. ವೆಂಕಟರಮಣನಿಗೆ ವಿವಿಧ ಹೂವುಗಳಿಂದ ಮಾಡಿದ ಅಲಂಕಾರ ಭಕ್ತರ ಚಿತ್ತಾಕರ್ಷಿಸಿತು. ದರ್ಶನದ ಬಳಿಕ ಭಕ್ತರಿಗೆ ಲಾಡು ವಿತರಿಸಲಾಯಿತು. ವೈಯಾಲಿ ಕಾವಲ್‌ನಲ್ಲಿರುವ ತಿರುಮಲ ತಿರುಪತಿ ದೇವಸ್ಥಾನದಲ್ಲೂ ಕೂಡ ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.
ಇಸ್ಕಾನ್‌ನಲ್ಲಿ ವಿಶೇಷ ಪೂಜೆ: ರಾಜಾಜಿನಗರದ ಇಸ್ಕಾನ್ ದೇಗುಲದಲ್ಲಿ ಮಂಗಳವಾರ ಮುಂಜಾನೆ 3 ರಿಂದ ರಾತ್ರಿ 11.5 ರವೆಗೂ ವೈಕುಂಠ ನಾರಾಯಣನಿಗೆ ವಿಶೇಷ ಪೂಜೆ ಜರುಗಿದವು. ಮುಂಜಾನೆ 3 ಗಂಟೆಗೆ ಸುಪ್ರಭಾತ ಸೇವೆಯಿಂದ ಪ್ರಾರಂಭವಾಗಿ ಬೆಳಗ್ಗೆ 5 ಗಂಟೆಗೆ ವೈಕುಂಠ ದ್ವಾರಕ್ಕೆ ಶ್ರೀ ಲಕ್ಷಿನಾರಾಯಣ ಅಲಂಕಾರದಲ್ಲಿ ಶ್ರೀರಾಧಾ ಕೃಷ್ಣ ಪಲ್ಲಕ್ಕಿ ಉತ್ಸವ, ವೈಕುಂಠ ದ್ವಾರ ಪೂಜೆ, ಕಲ್ಯಾಣೋತ್ಸವದ ಜತೆಗೆ ಲಕ್ಷಾರ್ಚನೆ ಸೇವೆ ಕೂಡ ನಡೆಯಿತು. ಸಂಜೆ ನಿತ್ಯಾರ್ಚನೆ ಬಳಿಕ ರಾತ್ರಿ ಶಯನ ಪಲ್ಲಕಿ ಸೇವೆ ಜರುಗಿತು. ಇದೇ ವೇಳೆ ಭಕ್ತರಿಗೆ ಲಾಡು ಮತ್ತು ಸಿಹಿ ಪೊಂಗಲ್ ವಿತರಿಸಲಾಯಿತು.
ವಿವಿಧ ದೇಗುಲಗಲ್ಲಿ ಆರಾಧನೆ: ನಂದಿಗುಡಿ ರಸ್ತೆಯ ಜಯಮಹಲ್ ಬಡಾವಣೆಲ್ಲಿರುವ ಬಂಡೆ ಶ್ರೀಸತ್ಯ ಆಂಜನೇಯಸ್ವಾಮಿ ದೇವಸ್ಥಾನ, ಮಾಗಡಿ ರಸ್ತೆಯಲ್ಲಿರುವ ಶ್ರೀವಿನಾಯಕ ಶ್ರೀವೆಂಕಟೇಶ್ವರ ದೇವಸ್ಥಾನ, ಜೆಪಿ ನಗರದ ಕಲ್ಯಾಣ ವೆಂಕಟಸ್ವಾಮಿ ದೇವಾಲಯ, ಬನಶಂಕರಿ 2ನೇ ಹಂತದಲ್ಲಿರುವ ದೇವಗಿರಿ ಶ್ರೀನಿವಾಸ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಮುಂಜಾನೆಯಿಂದಲೇ ಪೂಜಾ ಕಾರ್ಯಕ್ರಮಗಳು ನಡೆದವು.
ಯಶವಂತಪುರದ ರೈಲ್ವೆ ನಿಲ್ದಾಣದ ಬಳಿ ಇರುವ ರಾಮಭಜನ ಮಂದಿರ, ಶಿವಾಜಿನಗರದ ಆಂಜನೇಯ ಸ್ವಾಮಿ ದೇವಸ್ಥಾನ, ವಿ.ವಿ ಪುಂರನ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯ ಸೇರಿದಂತೆ ಮುಜರಾಯಿ ದೇಗುಲಗಳಲ್ಲಿ ವೆಂಕಟೇಶ್ವರನ ಆರಾಧನೆ ನಡೆಯಿತು.
ವಿಷ್ಣು ಸಹಸ್ರನಾಮ ಪಾರಾಯಣ: ನಗರದ ಶ್ರೀಪಾಂಡುರಂಗ ವಿಷ್ಣು ಸಹಸ್ರಾನಾಮ ಮಂಡಳಿ ವತಿಯಿಂದ ಮಲ್ಲೇಶ್ವರದ ಆಟದ ಮೈದಾನದ ಎದಿರು ಶ್ರೀನಿವಾಸ ಕಲ್ಯಾಣೋತ್ಸವದ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಂಗಳವಾರ ಮುಂಜಾನೆ 5 ಗಂಟೆಯಿಂದ ಬುಧವಾರ ಬೆಳಗ್ಗೆ 8 ಗಂಟೆಯವರೆಗೂ ನಡೆದ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣದಲ್ಲಿ ಕೆಲಕಾಲ ಪೇಜಾವರ ಶ್ರೀಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಅಖಂಡ ಸಹಸ್ರನಾಮ ಪಾರಾಯಣದಲ್ಲಿ ಬೆಂಗಳೂರಿನ ನಾನಾ ಭಾಗಗಳಲ್ಲಿರುವ ವಿಷ್ಣು ಸಹಸ್ರನಾಮ ಮಂಡಳಿಗಳು ಪಾಲ್ಗೊಂಡಿದ್ದವು.
ವೈಕುಂಠ ಏಕಾದಶಿಯ ಹಿನ್ನೆಲೆಯಲ್ಲಿ ತಿರುಮಲಗಿರಿಯ ಶ್ರೀವೆಂಕಟೇಶ್ವರನ ಸನ್ನಿಧಿಯನ್ನು ದೇವಸ್ಥಾನದ ಆಡಳಿತ ಮಂಡಳಿ ವಿಭಿನ್ನ ರೀತಿಯಲ್ಲಿ ಅಲಂಕಾರ ಮಾಡಿದೆ. ಲಕ್ಷ್ಮೀವೆಂಕಟೇಶ್ವರ ಸ್ವಾಮಿಯನ್ನು ನೋಡಿದಾಗ ತಿರುಪತಿಗೆ ತೆರಳಿದ ಅನುಭವವಾಯಿತು.-ಕವಿತಾ, ಬಿಟಿಎಂ ಲೇಔಟ್ ನಿವಾಸಿ ಪ್ರತಿ ವರ್ಷವು ವೈಕುಂಠ ಏಕಾದಶಿ ವೇಳೆ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯುತ್ತೇನೆ. ಆತನನ್ನು ಕಣ್ತುಂಬಿಕೊಳ್ಳುವುದೇ ಆನಂದ.
-ವೆಂಕಟಮ್ಮ, ಜೆಪಿ ನಗರ ನಿವಾಸಿ. ತಿರುಪತಿ ತಿಮ್ಮಪ್ಪನ ಬಗ್ಗೆ ನನಗೆ ಬಹಳ ನಂಬಿಕೆ. ಏನೇ ಕಷ್ಟ ಬಂದರೂ ಆತ ಪರಿಹರಿಸುತ್ತಾನೆ ಎಂದು ನಂಬಿದ್ದೇನೆ. ತಿರುಪತಿಗೆ ಹೋಗಲು ಆಗುತ್ತಿಲ್ಲ ಹೀಗಾಗಿ ಇಲ್ಲೇ ಆತನ ದರ್ಶನ ಪಡೆದಿದ್ದೇನೆ.
-ರೆಡ್ಡಿ, ತಿಮ್ಮಪ್ಪನ ಭಕ್ತ. ಪ್ರತಿ ದಿನ ತಿರುಮಲಗಿರಿ ಸನ್ನಿಧಿಗೆ ಭೇಟಿ ನೀಡುತ್ತೇನೆ. ಏಕಾದಶಿ ವೇಳೆ ವಿಭಿನ್ನ ರೀತಿಯಲ್ಲಿ ಶ್ರೀಮನ್ನಾರಾಯಣನನ್ನು ಅಲಂಕಾರ ಮಾಡಲಾಗುತ್ತದೆ. ಈ ಬಾರಿಯೂ ವಿಶೇಷ ಅಲಂಕಾರ ಮಾಡಿದ್ದು, ಆತನ ದರ್ಶನ ಪಡೆಯುವುದೇ ಒಂದು ಸೌಭಾಗ್ಯ.
-ಪಾಟೀಲ್, ಜೆಪಿ ನಗರ 2ನೇ ಹಂತದ ನಿವಾಸಿ.