ವಾಡಿ: ಹೂಳೆತ್ತುವ ಜೆಸಿಬಿ ಹೊಡೆತಕ್ಕೆ ಮುಖ್ಯ ಚರಂಡಿಯೊಂದು ಧ್ವಂಸಗೊಂಡಿದ್ದು, ಖರ್ಚು ಮಾಡಲಾಗಿದ್ದ ಕೋಟಿ ರೂ. ಅನುದಾನ ಚರಂಡಿ ಪಾಲಾದಂತಾಗಿದೆ.
ಪಟ್ಟಣದ ಶ್ರೀನಿವಾಸ ಗುಡಿ ವೃತ್ತದಿಂದ ಚೌಡೇಶ್ವರ ವೃತ್ತದ ವರೆಗೆ ಮುಖ್ಯ ರಸ್ತೆ ಬದಿ ನಿರ್ಮಿಸಲಾಗಿರುವ ಮುಖ್ಯ ಚರಂಡಿಯ ಹೂಳೆತ್ತುವ ಹಾಗೂ ಮುಚ್ಚಳ ಹಾಕುವ ಕಾರ್ಯಕ್ಕೆ ಪುರಸಭೆ ಆಡಳಿತ ಚಾಲನೆ ನೀಡಿದ್ದು, 2016/17ನೇ ಸಾಲಿನ 14ನೇ ಹಣಕಾಸಿನ ಅನುದಾನದಡಿ ಚರಂಡಿ ಅಭಿವೃದ್ಧಿ ಮಾಡಲಾಗುತ್ತಿದೆ.
ಚರಂಡಿ ನಿರ್ಮಿಸಿದ ಐದು ವರ್ಷಗಳ ನಂತರ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಮೇಲ್ಛಾವಣಿ ಭಾಗ್ಯ ಒದಗಿಬಂದಿದೆ. ಶ್ರೀನಿವಾಸಗುಡಿ ವೃತ್ತದಿಂದ ಬಳಿರಾಮ ಚೌಕ್ ವರೆಗಿನ ಚರಂಡಿ ಕಾಮಗಾರಿಗೆ ಒಂದು ಕೋಟಿ ರೂ. ಖರ್ಚು ಮಾಡಲಾಗಿದೆ.
ಬಹುತೇಕ ಕಡೆ ಚರಂಡಿ ಗೋಡೆ ಕುಸಿದುಬಿದ್ದು ಕಳಪೆ ಕಾಮಗಾರಿ ಎಂದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಹೂಳೆತ್ತುವ ಕಾರ್ಯದಲ್ಲೂ ಜೆಸಿಬಿ ಹೊಡೆತಕ್ಕೆ ಚರಂಡಿ ಗೋಡೆ ಪುಡಿಪುಡಿಯಾಗಿದ್ದು, ಇದ್ದ ಚರಂಡಿಯನ್ನು ನೆಲಸಮ ಮಾಡುತ್ತಿರುವ ಜೆಸಿಬಿ ಯಂತ್ರ, ಗಬ್ಬು ವಾಸನೆ ಹರಡಿ ನೆಮ್ಮದಿ ಕದಡಿದೆ ಎಂದು ಸ್ಥಳೀಯರು ದೂರಿದ್ದಾರೆ.
ಯಂತ್ರದಿಂದ ಅಡ್ಡಾದಿಡ್ಡಿ ಬಗೆಯುತ್ತಿರುವ ಬಾಯೆರೆದ ಚರಂಡಿಯಿಂದ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಕಾಮಗಾರಿ ನನೆಗುದಿಗೆ ಬಿದ್ದರೆ ನೂರಾರು ಕುಟುಂಬಗಳ ಮನೆ ಬಾಗಿಲ ಎದುರು ದುರ್ವಾಸನೆ ಹರಡುವುದು ನಿಶ್ಚಿತ.