Advertisement

ಒಳಚರಂಡಿ ಸರಿಯಾಗಿಲ್ಲ; ಕೆರೆಗೆ ಆವರಣಗೋಡೆಯೂ ಇಲ್ಲ

06:05 AM Jun 19, 2018 | Team Udayavani |

ಕುಂದಾಪುರ: ಅರೆಬರೆಯಾಗಿ ಕಾಮಗಾರಿ ಪೂರೈಸಿ ನಡುರಸ್ತೆಯಲ್ಲಿ ತಲೆ ಎತ್ತಿ ನಿಂತ ಫ್ಲೈ ಓವರ್‌ನ ನಂತರದಿಂದ ಆರಂಭವಾಗುವ ಶ್ರೀದೇವಿ ನರ್ಸಿಂಗ್‌ ಹೋಂನಿಂದ ಆರಂಭವಾಗುವ ಶಾಂತಿನಿಕೇತನ ವಾರ್ಡ್‌ ಮೆಸ್ಕಾಂನವರೆಗೂ ವ್ಯಾಪಿಸಿದೆ.

Advertisement

ಆವರಣ ಗೋಡೆಯಿಲ್ಲ
ಈ ವಾರ್ಡ್‌ನಲ್ಲಿ ಹೇಳಿಕೊಳ್ಳುವಂತಹ ಸಮಸ್ಯೆಗಳು ಸ್ಥಳೀಯವಾಗಿ ಇಲ್ಲ. ಆದರೆ ಇಡೀ ಪುರಸಭೆಯಲ್ಲಿ ಎಲ್ಲೆಲ್ಲೂ ಕಂಡುಬಂದಂತೆ ಒಳಚರಂಡಿಯ ಸಮಸ್ಯೆ ಇಲ್ಲಿಯೂ ಇದೆ. ನಾಗಬನ ಬಳಿ ಪತ್ರಿಕೆ ಪ್ರತಿನಿಧಿ ಹೋದಾಗ ಅಲ್ಲಿನ ನಿವಾಸಿಗಳಿಗೆ ಒಳಚರಂಡಿಯ ಸಮಸ್ಯೆ ಇಲ್ಲ ಎಂದು ವೇದ್ಯವಾಯಿತು. ಸ್ಥಳೀಯರು ಕೂಡಾ ಇದಕ್ಕೆ ಪೂರಕವಾಗಿ ಮಾತನಾಡಿದರು. ಒಳಚರಂಡಿ ಕಾಮಗಾರಿ ಆಗಿದೆ, ರಸ್ತೆಯೂ ಆಗಿದೆ ಎಂದು. ಅಲ್ಲೊಂದು ಕೆರೆಯಿದ್ದು ಅದನ್ನು 20 ಲಕ್ಷ ರೂ. ಶಾಸಕರ ನಿಧಿಯಿಂದ ದುರಸ್ತಿ ಮಾಡಲಾಗಿದೆ. ಕೆರೆತುಂಬ ನೀರು. ಆದರೆ ಅದರ ಪಕ್ಕದಲ್ಲಿ ಖಾಸಗಿ ಜಾಗದಲ್ಲಿ ಕ್ರಿಕೆಟ್‌ ಆಡುತ್ತಿದ್ದ ಹುಡುಗರು ಮಾತ್ರ ಕೆರೆಗೆ ಆವರಣ ಗೋಡೆ ಇಲ್ಲ ಎಂದು ಆತಂಕಿತರಾಗಿದ್ದರು. 

ಒಳಚರಂಡಿ ಇಲ್ಲ
ಇಲ್ಲಿಂದು ಐವತ್ತು ಮೀಟರ್‌ ಮುಂದೆ ಹೋದರೆ ಅದನ್ನು ಪುರಸಭೆ ವ್ಯಾಪ್ತಿ ಎಂದು ಯಾರೂ ಹೇಳಲಾರರು. ಹಾಗಿದೆ ಹಸಿರು ಹಚ್ಚಡದ ವರ್ಣವೈಭವ. ಮುಖ್ಯ ರಸ್ತೆಯಿಂದ ಕೇವಲ ಇನ್ನೂರೋ ಇನ್ನೂರೈವತ್ತೋ ಮೀಟರ್‌ ಹೋದರೆ ಹಸಿರು ಗದ್ದೆಗಳು, ಅದರಲ್ಲಿ ಅಲ್ಲಲ್ಲಿ ಗದ್ದೆಗೆ ಮಣ್ಣು ತುಂಬಿ ಕಟ್ಟಿದ ಮನೆಗಳು, ಆ ಗದ್ದೆಯ ನಡುವೆ ಹಾದು ಹೋದ ಕಾಂಕ್ರಿಟ್‌ ರಸ್ತೆ…. ಹೀಗೆ ಕಣ್ಣಿಗೆ ಅಂದಕಟ್ಟುವ ದೃಶ್ಯ ಸಿಗುತ್ತದೆ. ಇಲ್ಲಿನ ಜನರಿಗೆ ಕಾಂಕ್ರಿಟ್‌ ರಸ್ತೆಯಾಗಿದೆ. ಆದರೆ ಅದರ ಆಚೆ ಈಚೆ ಬದಿಗೆ ಯಾವುದೇ ತಡೆ ಇಲ್ಲ ಎಂಬ ಬೇಸರ ಇದೆ. 

ಈ ಭಾಗಕ್ಕೆ ಇನ್ನೂ ಒಳಚರಂಡಿ ಬಂದಿಲ್ಲ ಎಂಬ ಬೇಗುದಿಯಿದೆ. ನಾಗಬನ ಸಮೀಪ ಸ್ವಲ್ಪ ರಸ್ತೆಗೆ ಕಾಂಕ್ರೀಟೂ ಇಲ್ಲ, ಡಾಮರೂ ಇಲ್ಲ. 

ಒಳಚರಂಡಿ ಗುಂಡಿಮೆಸ್ಕಾಂ ಹಿಂದೆ ಒಳಚರಂಡಿಯವರು ಒಂದು ದೊಡ್ಡ ಗುಂಡಿ ಮಾಡಲುದ್ದೇಶಿಸಿದ್ದಾರೆ. ಇದರ ಬಗ್ಗೆ ಅನೇಕ ಹೋರಾಟಗಳಾಗಿವೆ. ಈ ಹೊಂಡ ನೇರ ಕೃಷಿಭೂಮಿಗೆ ಸಂಪರ್ಕ ಹೊಂದಿದೆ. ಆದ್ದರಿಂದ  ಚರಂಡಿ ನೀರು ಸಂಗ್ರಹವಾಗುವ ತ್ಯಾಜ್ಯ ಹೊಂಡ ಇಲ್ಲಿ ಬೇಡ ಎಂದು ಜನರ ಒತ್ತಾಯವಿದೆ. ಶಾಸಕರ ಬಳಿಗೂ ದೂರು ಹೋಗಿದೆ. ಪುರಸಭೆ ಈ ಕುರಿತು ಕ್ರಮ ವಹಿಸಿಲ್ಲ ಎಂಬ ಬೇಸರವನ್ನು ಸ್ಥಳೀಯರು ಹೇಳಿಕೊಳ್ಳುತ್ತಾರೆ. 

Advertisement

ಅನುದಾನ ಕಡಿಮೆ
ನಾನು ಆಯ್ಕೆಯಾಗುವ ಮೊದಲು ಅತ್ಯಂತ ಕಡೆಗಣಿಸಲ್ಪಟ್ಟ ವಾರ್ಡ್‌ ಆಗಿತ್ತು. ಕಳೆದ ಬಾರಿ 1.25 ಕೋ.ರೂ. ಕಾಮಗಾರಿ ಆಗಿದೆ. ಈ ಸಲ ಅನುದಾನವೇ ಕಡಿಮೆ. ಹಾಗಿದ್ದರೂ ಭಗತ್‌ಸಿಂಗ್‌ ರಸ್ತೆ, ಶ್ರೀದೇವಿ ರಸ್ತೆ, ಬಬ್ಬರ್ಯನಕಟ್ಟೆ ರಸ್ತೆಗೆ ಕಾಂಕ್ರಿಟ್‌ ಹಾಕಲಾಗಿದೆ. ಇನ್ನು ಕೆಲವೆಡೆ ಡಾಮರು ಹಾಕಲು ಅನುದಾನ ಮೀಸಲಿಡಲಾಗಿದೆ. 
– ರಾಘವೇಂದ್ರ ದೇವಾಡಿಗ, ಸದಸ್ಯರು ಪುರಸಭೆ

ಮೆಸ್ಕಾಂ ಬಳಿ ಗುಂಡಿ ಬೇಡ
ನಮ್ಮೆಲ್ಲರ ಒತ್ತಾಯ ಒಳಚರಂಡಿಯ ಗುಂಡಿ ಮೆಸ್ಕಾಂ ಬಳಿ ಬೇಡ ಎಂದು. ಅದು ಕೃಷಿಭೂಮಿಗೂ ತೊಂದರೆಯುಂಟು ಮಾಡುತ್ತದೆ. ಪುರಸಭೆ ಈ ಬಗ್ಗೆ ಗಮನ ಕೊಡಬೇಕು.
– ರಾಜೇಶ್‌ ವಿ.,  ಸ್ಥಳೀಯರು 

ಸಮಸ್ಯೆ ಇದೆ
ಭಗತ್‌ಸಿಂಗ್‌ ರಸ್ತೆಗೆ ಕಾಂಕ್ರಿಟ್‌ ಹಾಕಿದ್ದಾರೆ. ಆದರೆ ಚರಂಡಿ ಕಾಮಗಾರಿ ಅಸಮರ್ಪಕವಾದ ಕಾರಣ ಘನವಾಹನಗಳ ಓಡಾಟ ಅಸಾಧ್ಯವಾಗಿದೆ. ಮುಖ್ಯ ರಸ್ತೆಗೆ ಬಂದ ಒಳಚರಂಡಿ ಒಳಭಾಗದ ಮನೆಗಳ ರಸ್ತೆಗೆ ಇನ್ನೂ ಬಂದಿಲ್ಲ.
– ರಾಜ ಮಠದಬೆಟ್ಟು, ಸ್ಥಳೀಯರು

ಒಳಚರಂಡಿ ಆಗಿಲ್ಲ
ಬಸ್ರೂರು ಮೂರುಕೈಯಿಂದ ಸಂಗಮ್‌ವರೆಗೆ ಒಳಚರಂಡಿ ಕಾಮಗಾರಿ ಮಾಡಬೇಕಿತ್ತು. ಇನ್ನೂ  ಅದು ಆಗಿಲ್ಲ. ನಮ್ಮ ಭಾಗದಲ್ಲಿಯೂ ಕೆಲವೆಡೆ ಆಗಿಲ್ಲ.
– ಯೋಗೀಶ್‌ ,  ಸ್ಥಳೀಯರು 

Advertisement

Udayavani is now on Telegram. Click here to join our channel and stay updated with the latest news.

Next