Advertisement

ದಿ| ಡಾ| ಲಕ್ಷ್ಮಣ ಪ್ರಭು ಅವರಿಗೆ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪ್ರದಾನ

01:29 AM May 11, 2024 | Team Udayavani |

ಮಂಗಳೂರು: ಹೆಸರಾಂತ ಮೂತ್ರಾಂಗ ಶಸ್ತ್ರಚಿಕಿತ್ಸಾ ತಜ್ಞ ಮಂಗಳೂರಿನ ಡಾ| ಜಿ.ಜಿ. ಲಕ್ಷ್ಮಣ ಪ್ರಭು ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ಶ್ರೇಷ್ಠತಾ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರದಾನ ಮಾಡಿದರು.

Advertisement

ದಿಲ್ಲಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿಯ (ಎನ್‌ಬಿಇಎಂಎಸ್‌) 22ನೇ ಘಟಿಕೋತ್ಸವದಲ್ಲಿ ದಿ| ಡಾ| ಲಕ್ಷ್ಮಣ ಪ್ರಭು ಅವರ ಪತ್ನಿ ಕವಿತಾ ಪ್ರಭು ಅವರಿಗೆ ಪ್ರಸಿಡೆಂಟ್ಸ್‌ ಅವಾರ್ಡ್‌ ಆಫ್ ಮೆರಿಟ್‌ ದ್ಯೋತಕವಾಗಿ ಚಿನ್ನದ ಪದಕ, ಪ್ರಮಾಣಪತ್ರವನ್ನು ಪ್ರದಾನ ಮಾಡಿದರು.

ಆರೋಗ್ಯ ಕ್ಷೇತ್ರವನ್ನು ಗುಣಾತ್ಮಕವಾಗಿ, ಸಂಖ್ಯಾತ್ಮಕವಾಗಿ ಅಭಿವೃದ್ಧಿಪಡಿಸಲು ವೈದ್ಯ ಜಗತ್ತಿನ ಕೊಡುಗೆ ಅಪಾರವಾದುದು. ವೈದ್ಯಕೀಯ ಪ್ರವಾಸೋದ್ಯಮವನ್ನು ಬೆಳೆಸಿ ಸ್ವಸ್ಥ ಸಮಾಜವನ್ನು ರೂಪಿಸುವ ಹೊಣೆಗಾರಿಕೆ ವೈದ್ಯ ಲೋಕಕ್ಕೆ ಇದೆ ಎಂದು ರಾಷ್ಟ್ರಪತಿಯವರು ಹೇಳಿದರು.

ಎನ್‌ಬಿಇಎಂಎಸ್‌ ಅಧ್ಯಕ್ಷ ಡಾ| ಅಭಿಜಾತ್‌ ಶೇಟ್‌, ಯುರಾಲಜಿಕಲ್‌ ಸೊಸೈಟಿ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಡಾ| ಮಹೇಶ್‌ ದೇಸಾಯಿ, ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ ಉಪಸ್ಥಿತರಿದ್ದರು.

ಡಾ| ಲಕ್ಷ್ಮಣ ಪ್ರಭು ಅವರು ಮಂಗಳೂರು ಕೆಎಂಸಿಯ ಮೂತ್ರಾಂಗ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುವ ಮೂಲಕ ಜನಪ್ರಿಯರಾಗಿದ್ದರು. ಹಲವು ಸಂಕೀರ್ಣ ವೈದ್ಯಕೀಯ ಪ್ರಕರಣಗಳನ್ನು ನಿರ್ವಹಿಸಿದ್ದರು. ಯುರಾಲಜಿಕಲ್‌ ಸೊಸೈಟಿ ಆಫ್ ಇಂಡಿಯಾದ ಕಾರ್ಯದರ್ಶಿಯಾಗಿ ಡಾ| ಪ್ರಭು ಅವರು ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ವೈಜ್ಞಾನಿಕ ಪ್ರಬಂಧಗಳನ್ನು ಮಂಡಿಸಿದ್ದರು. ಡಾ| ಪ್ರಭು ಅವರು ಅಸೌಖ್ಯದಿಂದ 2023ರ ನವೆಂಬರ್‌ 17ರಂದು ನಿಧನ ಹೊಂದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next