Advertisement

ಜೋಡಿ ಕೊಲೆ: ಆರೋಪಿಗಳಿಗೆ ಜೀವಾವಧಿ ಸಜೆ

12:11 PM Feb 26, 2017 | Team Udayavani |

ಪುತ್ತೂರು: ನಾಲ್ಕೂವರೆ ವರ್ಷಗಳ ಹಿಂದೆ ಕೋಡಿಂಬಾಳ ಉಂಡಿಲ ನಿವಾಸಿಗಳಾದ ಬೇಬಿ ಥಾಮಸ್‌ ಮತ್ತು ಅವರ ಪತ್ನಿ ಮೇರಿ ಥಾಮಸ್‌ ದಂಪತಿಯನ್ನು ಬರ್ಬರವಾಗಿ ಕೊಲೆಗೈದ ಪ್ರಕರಣದ ಇಬ್ಬರು ಆರೋಪಿಗಳಿಗೆ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಪೀಠ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

Advertisement

ಸೋಮವಾರಪೇಟೆ ತಾಲೂಕಿನ ಮಹಮ್ಮದ್‌ ರಫೀಕ್‌ ಅಲಿಯಾಸ್‌ ರಫೀಕ್‌ ಮತ್ತು ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ನುರಿಯಾಳು ನಿವಾಸಿ ಮಹಮ್ಮದ್‌ ಕಮಲುದ್ದೀನ್‌ ಯಾನೆ ಸೈದು ಜೀವಾವಧಿ ಶಿಕ್ಷೆಗೊಳಗಾದ ಆರೋಪಿಗಳು.
2012ರ  ಸೆ. 25ರಂದು ರಾತ್ರಿ ಆರೋಪಿಗಳು ಉಂಡಿಲದ ಬೇಬಿ ಥಾಮಸ್‌ ಅವರ ಮನೆ ಮುಂಭಾಗಕ್ಕೆ ಬಂದು ಬೈಕ್‌ ಹಾಳಾಗಿದ್ದು, ಪತ್ನಿಯ ಮನೆಗೆ ಹೋಗಬೇಕಾಗಿರುವುದಾಗಿ ಹೇಳಿದ್ದರು. ಬೇಬಿ ಥಾಮಸ್‌ ಅವರು ತನ್ನ ಇಂಡಿಕಾ ಕಾರಿನಲ್ಲಿ ಈ ಇಬ್ಬರನ್ನು ಕರೆದುಕೊಂಡು ಹೋಗಿದ್ದರು. ಬೊಳ್ಳೂರು ಕ್ರಾಸ್‌ ಸಮೀಪ ಕಾರಿನೊಳಗೆ ಬೇಬಿ ಥಾಮಸ್‌ ಅವರನ್ನು ಮತ್ತು ಉಂಡಿಲದ ಮನೆಯಲ್ಲಿ ಬೇಬಿ ಥಾಮಸ್‌ ಅವರ ಪತ್ನಿ ಮೇರಿ ಥಾಮಸ್‌ ಅವರ ಕುತ್ತಿಗೆ ಇರಿದು ಕೊಲೆ ಮಾಡಿದ್ದರು. 

ಅನಂತರ ಆರೋಪಿಗಳು 90,800 ರೂ. ಮೌಲ್ಯದ ಚೈನ್‌, ಬೆಂಡೋಲೆ ಮನೆಯ ಕಪಾಟಿ ನಲ್ಲಿದ್ದ ನಗದು, ಮೊಬೈಲ್‌ ಅನ್ನು ಎಗರಿಸಿ ಪರಾರಿ ಆಗಿದ್ದರು. ಒಂದು ತಿಂಗಳ ಅನಂತರ ಆರೋಪಿಗಳು ಕೊಲೆಯಾದ ಮನೆಯಿಂದ ಕದ್ದೊಯ್ದ ಮೊಬೈಲ್‌ ಸಂಖ್ಯೆಯ ಜಾಡು ಹಿಡಿದು ಬಂಧಿಸಲಾಗಿತ್ತು. ಫೆ. .22 ರಂದು ಆರೋಪಿಗಳಿಬ್ಬರು ಅಪರಾಧಿಗಳು ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಫೆ. 25ರಂದು ಶಿಕ್ಷೆ ಪ್ರಕಟಿಸಿದೆ.

ಶಿಕ್ಷೆಯ ಪ್ರಮಾಣ
ದರೋಡೆ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ದಂಡ ಸಂಹಿತೆ 302 ರ ಪ್ರಕಾರ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

3,000 ರೂ. ದಂಡ, ದಂಡ ಪಾವತಿಗೆ ವಿಳಂಬವಾದರೆ 3 ತಿಂಗಳು ಹೆಚ್ಚುವರಿ ಜೈಲು,  449 ಕಲಂ ಅಡಿ 10 ವರ್ಷ ಕಠಿನ ಶಿಕ್ಷೆ, 5 ಸಾವಿರ ದಂಡ, ದಂಡ ಪಾವತಿಸಿಸಲು ವಿಳಂಬವಾದರೆ 5 ತಿಂಗಳು ಹೆಚ್ಚುವರಿ ಜೈಲುವಾಸ, 392 ಕಲಂ ಅಡಿ 10 ವರ್ಷ ಕಠಿನ ಶಿಕ್ಷೆ, 5 ಸಾವಿರ ರೂ. ದಂಡ, ದಂಡ ಪಾವತಿಗೆ ವಿಳಂಬವಾದರೆ 5 ತಿಂಗಳು ಹೆಚ್ಚುವರಿ ಜೈಲು 
ಶಿಕ್ಷೆ ವಿಧಿಸಿದೆ. ಸರಕಾರದ ಪರ  ಸರಕಾರಿ ಅಭಿಯೋಜಕ ಎಂ. ಉದಯಕುಮಾರ್‌ ಅವರು ವಾದ ಮಂಡಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next