Advertisement

ಜಿಲ್ಲೆ ಗುರು ಭವನಕ್ಕೆ ಸಿಕ್ತು ನಿವೇಶನ ಬಲ

08:11 AM Jun 29, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಉಪ ವಿಭಾಗವಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ಬರೋಬ್ಬರಿ 13 ವರ್ಷಗಳು ಕಳೆದ ಬಳಿಕ ಜಿಲ್ಲೆಯ ಶಿಕ್ಷಕರಿಗಾಗಿ ನಿರ್ಮಾಣವಾಗುವ ಗುರು ಭವನಕ್ಕೆ ಶುಕ್ರದೆಸೆ ಶುರುವಾಗಿದ್ದು, ಹಲವು ವರ್ಷಗಳ ಶಿಕ್ಷಕರ ಹೋರಾಟ,  ಮನವಿ, ಪ್ರತಿಭಟನೆಗಳಿಗೆ ಜಿಲ್ಲಾಡಳಿತ ಕೊನೆಗೂ ಸ್ಪಂದಿಸಿದ್ದು, ಗುರುಭವನ ನಿರ್ಮಾಣಕ್ಕೆ ಅಗತ್ಯ ಜಮೀನು ಕಾಯ್ದಿರಿಸಿದೆ.

Advertisement

ಹೌದು, ಜಿಲ್ಲೆಯಾಗಿ ಚಿಕ್ಕಬಳ್ಳಾಪುರ ದಶಕ ಕಳೆದರೂ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಗುರು ಭವನ ಇಲ್ಲ ಎಂಬ  ಕೊರಗು ಶಿಕ್ಷಕರನ್ನು ಕಾಡುತ್ತಲೇ ಇತ್ತು. ನಿವೇಶನಕ್ಕಾಗಿ ಪ್ರತಿ ಶಿಕ್ಷಕರ ದಿನಾಚರಣೆ ಯೆಂದು ಜಿಲ್ಲೆಯ ಚುನಾಯಿತ ಜನಪ್ರತಿನಿ ಧಿಗಳಿಗೆ ಕೊಟ್ಟ ಮನವಿಗಳಿಗೆ ಲೆಕ್ಕವಿರಲಿಲ್ಲ. ಸದ್ಯ ಶಿಕ್ಷಕರ ಹೋರಾಟಕ್ಕೆ ಪ್ರತಿಫ‌ಲವಾಗಿ ಜಿಲ್ಲಾಡಳಿತ  ಗುರು ಭವನ ನಿರ್ಮಾಣಕ್ಕೆ ಅಗತ್ಯ 20 ಗುಂಟೆ ಜಮೀನನ್ನು ಗುರುತಿಸಿ ಕಾಯ್ದಿರಿಸಿದೆ.

ಧರಣಿ, ಪ್ರತಿಭಟನೆ: ಜಿಲ್ಲೆಯ ಚಿಂತಾಮಣಿ ಸೇರಿದಂತೆ ಹಲವು ತಾಲೂಕುಗಳಲ್ಲಿ ಗುರು ಭವನ ಇದ್ದರೂ ಜಿಲ್ಲಾ ಕೇಂದ್ರ  ಚಿಕ್ಕಬಳ್ಳಾಪುರದಲ್ಲಿ ಗುರು ಭವನ ಇಲ್ಲದ ಕಾರಣ ಶಿಕ್ಷಕರಿಗೆ ವಿವಿಧ ತರಬೇತಿ, ಕಾರ್ಯಾಗಾರ, ಸಭೆ, ಸಂವಾದ, ವಿಚಾರ ಸಂಕಿರಣ ಸೇರಿದಂತೆ ಶಿಕ್ಷಕರಲ್ಲಿ ವೃತ್ತಿಪರತೆ ಹೆಚ್ಚಿಸುವ ವಿವಿಧ ಸೃಜನಾತ್ಮಕ ಕಾರ್ಯ ಚಟುವಟಿಕೆಗಳ  ಆಯೋಜನೆಗೆ ಸ್ಥಳಾವಕಾಶದ ಕೊರತೆ ಇತ್ತು.

ಕಡೆಗೂ ಜಿಲ್ಲಾಡಳಿತ ಅಗತ್ಯ ಜಾಗವನ್ನು ಸ್ಥಳೀಯ ತಹಶೀಲ್ದಾರ್‌ ಹಾಗೂ ಉಪ ವಿಭಾ ಗಾಧಿ ಕಾರಿಗಳು ಪರಿಶೀಲನೆ ನಡೆಸಿ ಕಂದಾಯ ಇಲಾಖೆ ದಾಖಲೆಗಳನ್ನು ಪರಿಶೀಲಿಸಿ ವರದಿ  ಸಲ್ಲಿಸಿದ್ದರ ಆಧಾರದ ಮೇಲೆ ಮೇಲೆ ಜಿಲ್ಲಾಧಿಕಾರಿಗಳು ಗುರು ಭವನ ನಿರ್ಮಾಣಕ್ಕೆ 20 ಗುಂಟೆ ಜಮೀನು ಕಾಯ್ದಿರಿಸಿ ಆದೇಶ ಹೊರಡಿಸಿರುವುದು ಶಿಕ್ಷಕರಲ್ಲಿ ಸಂತಸ ಮನೆ ಮಾಡಿದೆ. ಗುರು ಭವನ ನಿರ್ಮಾಣಕ್ಕೆ ಜಿಲ್ಲೆಯ ಶಿಕ್ಷಕರ ಕಲ್ಯಾಣ  ಹಾಗೂ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯಿಂದ ಒಂದು ಕೋಟಿ ರೂ. ಅನುದಾನ ಪಡೆಯಲು ಅವಕಾಶ ಇದೆ.

ಗುರು ಭವನಕ್ಕೆ ಜಾಗ ಎಲ್ಲಿ?: ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿಯ ಚೆಲುವತಿಮ್ಮನಹಳ್ಳಿ (ಜಡಲತಿಮ್ಮನಹಳ್ಳಿ) ಗ್ರಾಮದ ಹೊಸ ಸ.ನಂ.108 ರಲ್ಲಿ 1.34 ಎಕರೆ ಜಮೀನನ್ನು ಪ.ಜಾತಿ ಹಾಗೂ ಪ.ಪಗಂಡ ತಾಂತ್ರಿಕ ಕಾಲೇಜು  ಮತ್ತು ವಿದ್ಯಾರ್ಥಿ ನಿಲಯ ಕಟ್ಟಡ ಸ್ಥಾಪನೆಗಾಗಿ ಮಂಜೂರು ಮಾಡಿದ್ದು, ಆ ಪೈಕಿ 0-20 ಗುಂಟೆ ಜಮೀನನ್ನು ಗುರು ಭವನ ಕಟ್ಟಡ ನಿರ್ಮಾಣಕ್ಕಾಗಿ ಕಾಯ್ದಿರಿಸಿ ಜಿಲ್ಲಾಧಿಕಾರಿಗಳು ಕಳೆದ 23 ರಂದು ಆದೇಶ ಹೊರಡಿಸಿದ್ದಾರೆ.

Advertisement

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next