ಮೈಸೂರು: ಕಳೆದ ಕೆಲ ವರ್ಷಗಳಿಂದ ಸ್ಥಗಿತಗೊಂಡಿರುವ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನಾರಂಭಿಸಲು ರಾಜ್ಯ ಸರ್ಕಾರದ ಖಾತರಿಯೊಂದಿಗೆ 20 ಕೋಟಿ ರೂ. ಸಾಲ ನೀಡುವಂತೆ ಜಿಲ್ಲಾಧಿಕಾರಿ ರಂದೀಪ್ ಡಿ., ವಿವಿಧ ಬ್ಯಾಂಕ್‌ಗಳ ವ್ಯವಸ್ಥಾಪಕರಲ್ಲಿ ಮನವಿ ಮಾಡಿದರು.
ಶ್ರೀರಾಮ ಸಕ್ಕರೆ ಕಾರ್ಖಾನೆ ಪುನಾರಂಭಿಸುವ ಸಲುವಾಗಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ವಿವಿಧ ಬ್ಯಾಂಕ್‌ಗಳ ಮುಖ್ಯಸ್ಥರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ಕಳೆದ ನಾಲ್ಕೈದು ವರ್ಷಗಳಿಂದ ಶ್ರೀರಾಮ ಸಕ್ಕರೆ ಕಾರ್ಖಾನೆ ಬಾಗಿಲು ಮುಚ್ಚಿದ್ದು, ಇದನ್ನು ಪುನಾರಂಭಿಸಲು ನಾಲ್ಕು ಬಾರಿ ಟೆಂಡರ್ ಕರೆದರೂ ಸಹ ಯಾರು ಮುಂದೆ ಬಂದಿಲ್ಲ. ಇದರಿಂದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 300 ನೌಕರರು ಆರ್ಥಿಕ ಸಂಕಷ್ಟದಲ್ಲಿದ್ದು, ಇವರಿಗೆ ಬರಬೇಕಾದ ಬಾಕಿ ಹಣ ಪಾವತಿಸಬೇಕಾದ ಹಿನ್ನೆಲೆ ಬ್ಯಾಂಕ್‌ಗಳು ಸಾಲ ನೀಡಿದರೆ ಅನುಕೂಲವಾಗಲಿದೆ.
ಈ ಹಿನ್ನೆಲೆಯಲ್ಲಿ ಕಾರ್ಖಾನೆಯ ಜಮೀನಿನನ್ನು ಬ್ಯಾಂಕಿನಲ್ಲಿ ಒತ್ತೆಯಾಗಿಟ್ಟು ಸರ್ಕಾರದ ಖಾತರಿಯೊಂದಿಗೆ ಜಿಲ್ಲೆಯ ಬ್ಯಾಂಕ್‌ಗಳಲ್ಲಿ 14.70 ಕೋಟಿ ರೂ. ಆರ್ಥಿಕ ನೆರವು ಪಡೆಯಲು ಉದ್ದೇಶಿಸಲಾಗಿದೆ. ಆದ್ದರಿಂದ ಬ್ಯಾಂಕಿನವರು ಇದಕ್ಕೆ ಪೂರಕವಾಗಿ ಸ್ಪಂದಿಸಬೇಕಿದೆ ಎಂದು ಕೋರಿದರು.
ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ಉಮೇಶ್ ಮಾತನಾಡಿ, ಕಾರ್ಖಾನೆಯಲ್ಲಿ 13,634 ಮಂದಿ ಪೂರ್ಣ ಪ್ರಮಾಣದ ಷೇರುದಾರರು ಹಾಗೂ 6020 ಅಪೂರ್ಣ ಷೇರು ಪಾವತಿದಾರರು ಸೇರಿದಂತೆ ಒಟ್ಟು 19,654 ಮಂದಿ ಸದಸ್ಯರಿದ್ದಾರೆ. ಹೀಗಾಗಿ ಬ್ಯಾಂಕಿನವರು ಸಾಲ ನೀಡಿದರೆ ಹೆಚ್ಚಿನ ಅನುಕೂಲವಾಗಲಿದ್ದು, ಮುಂದಿನ ಒಂದು ವಾರದೊಳಗೆ ಸಾಲ ನೀಡಿದರೆ, ಕಾರ್ಖಾನೆ ಪುನಾರಂಭಿಸುವ ಬಗ್ಗೆ ಟೆಂಡರ್ ಕರೆದು ಇತ್ಯರ್ಥ ಮಾಡುವುದಾಗಿ ತಿಳಿಸಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎನ್.ಶಿವಲಿಂಗಯ್ಯ ಮಾತನಾಡಿ, ಕಾರ್ಖಾನೆಯ ಜಮೀನಿನ ಪೈಕಿ ಭಾಗಶಃ ಜಮೀನಿಗೆ ಮಾರುಕಟ್ಟೆ ಬೆಲೆ ಹೇಗಿದೆ ಎಂಬುದರ ಅನ್ವಯ ಸಾಲ ನೀಡಲಾಗುವುದು. ಆದರೆ, ಈ ಬಗ್ಗೆ ಬ್ಯಾಂಕಿನ ನಿಯಮಗಳಿಗೆ ಅನುಗುಣವಾಗಿ ಕ್ರಮವಹಿಸಲಾಗುವುದು ಎಂದರು. ಸಕ್ಕರೆ ಕಾರ್ಖಾನೆ ಷೇರುದಾರರಾದ ಪುಂಡಲೀಕ ಗಾಂಧಿ, ಕೆ.ವಿ.ಅಶೋಕ್, ಎಚ್.ವಿ.ಸಣ್ಣಪ್ಪಾಜಿ ಇತರರು ಇದ್ದರು.