Advertisement

ಕಾಂಗ್ರೆಸ್‌ನಲ್ಲಿ ತಾರಕಕ್ಕೇರಿದ ಸಚಿವಾಕಾಂಕ್ಷಿಗಳ ಅತೃಪ್ತಿ

06:20 AM Jun 08, 2018 | Team Udayavani |

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಸಚಿವಾಕಾಂಕ್ಷಿಗಳ ಅತೃಪ್ತಿ, ಅಸಮಾಧಾನ, ಆಕ್ರೋಶ ತಾರಕಕ್ಕೇರಿದ್ದು, ಬಂಡಾಯದ ಸ್ವರೂಪ ಪಡೆದಿದೆ. ಎಚ್‌.ಕೆ. ಪಾಟೀಲ್‌, ಎಂ.ಬಿ.ಪಾಟೀಲ್‌, ಸತೀಶ್‌ ಜಾರಕಿಹೊಳಿ, ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ನಾಲ್ಕು ಕಡೆಗಳಲ್ಲಿ ಪ್ರತ್ಯೇಕ ಗುಂಪುಗಳು ಹುಟ್ಟಿಕೊಂಡಿದ್ದು, ಪಕ್ಷದ ನಾಯಕರ ನಿರ್ಧಾರದ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ಪ್ರತಿರೋಧ ವ್ಯಕ್ತಪಡಿಸಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ.

Advertisement

ಎಂ.ಬಿ.ಪಾಟೀಲ್‌: ಸದಾಶಿವನಗರದಲ್ಲಿರುವ ಎಂ.ಬಿ.ಪಾಟೀಲ್‌ ಅವರ ಮನೆ ಗುರುವಾರ ಇಡೀ ದಿನ ಚಟುವಟಿಕೆಗಳ ಕೇಂದ್ರವಾಗಿತ್ತು. ಸಚಿವ ಸಂಪುಟದಲ್ಲಿ ಸ್ಥಾನವಂಚಿತ ಸತೀಶ್‌ ಜಾರಕಿಹೊಳಿ ಸಹ ಎಂ.ಬಿ.ಪಾಟೀಲ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಜತೆಗೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಎಂ.ಟಿ.ಬಿ. ನಾಗರಾಜ್‌, ಡಾ. ಸುಧಾಕರ್‌, ಸಿ.ಎಸ್‌.ಶಿವಳ್ಳಿ, ಡಾ.ಅಜಯ್‌ ಸಿಂಗ್‌ ಸೇರಿ ಹಲವು ಶಾಸಕರು ಭೇಟಿ ನೀಡಿ ನಾಯಕತ್ವ ವಹಿಸಿಕೊಳ್ಳುವಂತೆ ಮನವಿ ಮಾಡಿದರು. ಇದರ ನಡುವೆ, ಎಂ.ಬಿ.ಪಾಟೀಲ್‌ರನ್ನು ಸಮಾಧಾನಪಡಿಸುವ ನಿಟ್ಟಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಚಿವ ಜಮೀರ್‌ ಅಹಮದ್‌ ಸೇರಿ ಹಲವು ನಾಯಕರು ಪ್ರಯತ್ನಿಸಿದರು.

ಎಚ್‌.ಕೆ.ಪಾಟೀಲ್‌: ಎಚ್‌.ಕೆ.ಪಾಟೀಲ್‌ ಸಹ ತಮ್ಮ ನಿವಾಸದಲ್ಲಿ ಪಕ್ಷದ ಶಾಸಕರ ಜತೆ ಮುಂದಿನ ಕಾರ್ಯತಂತ್ರ ಕುರಿತು ಸಮಾಲೋಚನೆ ನಡೆಸಿದರು. ಸಚಿವ ಸ್ಥಾನ ವಂಚಿತ ಶರಣ ಬಸಪ್ಪ ದರ್ಶನಾಪುರ, ಎಸ್‌.ಆರ್‌. ಪಾಟೀಲ್‌, ಯಶವಂತರಾಯಗೌಡ ಪಾಟೀಲ್‌, ಸಿ.ಎಸ್‌.ಶಿವಳ್ಳಿ, ತನ್ವೀರ್‌ ಸೇs…, ಈಶ್ವರ್‌ ಖಂಡ್ರೆ, ರೋಷನ್‌ ಬೇಗ್‌, ಎಚ್‌.ಎಂ. ರೇವಣ್ಣ, ಎಚ್‌.ಸಿ. ಮಹದೇವಪ್ಪ ಸೇರಿ ಅತೃಪ್ತರು ಭೇಟಿ ನೀಡಿ, ಬಂಡಾಯದ ನಾಯಕತ್ವ ವಹಿಸಿಕೊಳ್ಳುವಂತೆ ಒತ್ತಡ ಹೇರಿದರು.

ಸತೀಶ್‌ ಜಾರಕಿಹೊಳಿ: ರೇಸ್‌ಕೋರ್ಸ್‌ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಸತೀಶ್‌ ಜಾರಕಿಹೊಳಿ, ಅತೃಪ್ತ ಶಾಸಕರ ಜತೆ ಪ್ರತ್ಯೇಕ ಚರ್ಚೆ ನಡೆಸಿದರು. ಬಳ್ಳಾರಿಯ ಆನಂದ್‌ಸಿಂಗ್‌, ತುಕಾರಾಂ,ನಾಗೇಂದ್ರ ಸೇರಿ ಹಲವು ಶಾಸಕರು ಈ ಸಭೆಯಲ್ಲಿ ಹಾಜರಾಗಿದ್ದರು.

ಶಾಮನೂರು ಶಿವಶಂಕರಪ್ಪ: ಹಿರಿಯ ಮುಖಂಡ ಶಾಮನೂರು ಶಂಕರಪ್ಪ ನಿವಾಸದಲ್ಲಿಯೂ ಅಸಮಾಧಾನಿತರ ಸಭೆ ನಡೆಯಿತು. ಈಶ್ವರ್‌ ಖಂಡ್ರೆ, ಅಮರೇಗೌಡ ಬಯ್ನಾಪುರ ಸಹಿತ ಕೆಲವು ಶಾಸಕರು ಭಾಗವಹಿಸಿದ್ದರು. ಬಿ.ಸಿ.ಪಾಟೀಲ್‌ ಸಹಿತ ಕೆಲವು ಸಚಿವ ಸ್ಥಾನ ವಂಚಿತರು ಶ್ಯಾಮನೂರು ಶಂಕರಪ್ಪ ಅವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.

Advertisement

ದಲಿತ ಎಡಗೈ ನಾಯಕರ ಸಭೆ: ಮಾಜಿ ಸಚಿವ ಎಚ್‌.ಆಂಜನೇಯ ನಿವಾಸದಲ್ಲಿ ಸಭೆ ಸೇರಿದ ಸಂಸದ ಚಂದ್ರಪ್ಪ ಹಾಗೂ ವಿಧಾನ ಪರಿಷತ್‌ ಸದಸ್ಯ ಧರ್ಮಸೇನ್‌ ಸೇರಿ ಎಡಗೈ ಪಂಗಡದ ದಲಿತ ಮುಖಂಡರು, ತಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವಂತೆ ಪಕ್ಷದ ನಾಯಕರ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ. ಅನೇಕ
ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಿರುವುದಾಗಿ ಹೇಳಿದ್ದರೂ, ಒತ್ತಡ ತಂತ್ರ ಅನುಸರಿಸಿ ಹೈ ಕಮಾಂಡ್‌ ಮಣಿಸುವ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಸಿದ್ದು ವಿರುದ್ಧ ಎಚ್‌.ಎಂ.ರೇವಣ್ಣ
ಆಕ್ರೋಶ, ಬಿಜೆಪಿ ಜತೆ ಸಂಪರ್ಕ?

ಸಂಪುಟದಲ್ಲಿ ಸ್ಥಾನ ಸಿಗದ ಬಗ್ಗೆ ಸಿದ್ದರಾಮಯ್ಯ ವಿರುದ್ಧವೇ ಮಾಜಿ ಸಚಿವ ಎಚ್‌.ಎಂ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿ, ಅವರಿಂದಲೇ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂದು ದೂರಿದ್ದಾರೆ. ಬಿಜೆಪಿ ಮುಖಂಡರು ತಮ್ಮನ್ನು ಸಂಪರ್ಕಿಸಿರುವುದು ನಿಜ,ಸಮುದಾಯಕ್ಕೆ ಲಾಭ ಆಗುವುದಾದರೆ ನೋಡೋಣ ಎಂದೂ ಹೇಳಿದ್ದಾರೆ. 

ಮತ್ತೂಂದೆಡೆ ಕುರುಬ ಸಮುದಾಯದ ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜ್‌, ಎಚ್‌.ಎಂ.ರೇವಣ್ಣ  ವಿರುದ್ಧ 
ಕಿಡಿಕಾರಿದ್ದು ಎರಡು ಬಾರಿ ಶಾಸಕರಾಗಿ ಮೂರು ಸಲ ಸಚಿವರಾಗಿರುವ ಎಚ್‌.ಎಂ.ರೇವಣ್ಣ ಎರಡನೇ ಹಂತದ ನಾಯಕರಾದ ನಮ್ಮನ್ನು ಸಚಿವರನ್ನಾಗಿ ಮಾಡಿಸುವ ಬದಲು ತಾವೇ ಸಚಿವರಾಗಲು ಹೊರಟಿದ್ದಾರೆ. ನನಗೆ ಸಚಿವ ಸ್ಥಾನ ತಪ್ಪಲು ಅವರೂ ಕಾರಣ ಎಂದು ಆರೋಪ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next