Advertisement

30 ಐಟಿಐ ಸಂಸ್ಥೆಗಳ ಅರ್ಜಿ ತಿರಸ್ಕಾರ ಸಾವಿರಾರು ವಿದ್ಯಾರ್ಥಿಗಳ ಪರದಾಟ

11:51 AM Aug 29, 2017 | Team Udayavani |

ಬೆಂಗಳೂರು: ತಮ್ಮ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ರಾಜ್ಯಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದ್ದ 30ಕ್ಕೂ ಹೆಚ್ಚು ಐಟಿಐ ಶಿಕ್ಷಣ ಸಂಸ್ಥೆಗಳ ಮನವಿಯನ್ನು ಹೈಕೋರ್ಟ್‌ ಸೋಮವಾರ ತಿರಸ್ಕರಿಸಿದೆ.

Advertisement

ರಾಜ್ಯಸರ್ಕಾರಿಂದ ತರಗತಿಗಳನ್ನು ನಡೆಸಲು ಮಾನ್ಯತೆ ಪಡೆದುಕೊಳ್ಳದೆ ಇದ್ದ ಕಾರಣದಿಂದ ಆ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ  ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ್ದ ಉದ್ಯೋಗ ಹಾಗೂ ತರಬೇತಿ ಇಲಾಖೆ ಹಾಗೂ ಆಯುಕ್ತರ ಕ್ರಮ ಪ್ರಶ್ನಿಸಿ ಮೈಸೂರಿನ ಜ್ಞಾನ ಜ್ಯೋತಿ ಇಂಡಸ್ಟ್ರೀಯಲ್‌ ಟ್ರೈನಿಂಗ್‌ ಸೆಂಟರ್‌ ಸೇರಿದಂತೆ ರಾಜ್ಯದ 30ಕ್ಕೂ ಹೆಚು ಐಟಿಐ ಶಿಕ್ಷಣ ಸಂಸ್ಥೆಗಳು ಹಾಗೂ 1000ಕ್ಕೂ ಅಧಿಕ ಐಟಿಐ ವಿದ್ಯಾರ್ಥಿಗಳು  ರಿಟ್‌ ಅರ್ಜಿಗಳನ್ನು ಸಲ್ಲಿಸಿ ಹೈಕೋರ್ಟ್‌ ಮೊರೆಹೋಗಿದ್ದರು.

ಈ ರಿಟ್‌ ಅರ್ಜಿಗಳ  ವಿಚಾರಣೆ ಸೋಮವಾರ ನ್ಯಾಯಮೂರ್ತಿ  ಜಿ. ನರೇಂದರ್‌ ಅವರಿದ್ದ  ಏಕಸದಸ್ಯ ಪೀಠದ ಮುಂದೆ ನಡೆಯಿತು. ವಿಚಾರಣೆ  ವೇಳೆ ವಾದ ಮಂಡಿಸಿದ ರಾಜ್ಯಸರ್ಕಾರದ ಪರ ವಕೀಲರು, ಅರ್ಜಿದಾರ ಶಿಕ್ಷಣ ಸಂಸ್ಥೆಗಳು ನಿಯಮಾವಳಿಗಳಂತೆ ಮಾನ್ಯತೆ ಪಡೆದುಕೊಂಡಿಲ್ಲ. ಅಲ್ಲದೆ ಎಷ್ಟು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂಬ ಮಾಹಿತಿಯನ್ನು ಸಲ್ಲಿಸಿಲ್ಲ.

ಅಲ್ಲದೆ ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿವೆ. ಹೀಗಾಗಿ ಅರ್ಜಿದಾರ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ. ಇದಕ್ಕೆ ಆ ಶಿಕ್ಷಣ ಸಂಸ್ಥೆಗಳೇ ಹೊಣೆಯಾಗಿವೆ. ಜೊತೆಗೆ ಆಗಸ್ಟ್‌ 28ರಿಂದ ( ಸೋಮವಾರದಿಂದ) ಪರೀಕ್ಷೆಗಳು ಆರಂಭವಾಗಿವೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಈ ವಾದ ಪುರಸ್ಕರಿಸಿದ ನ್ಯಾಯಪೀಠ, ಈಗಾಗಲೇ  ಪರೀಕ್ಷೆಗಳು ನಡೆಯುತ್ತಿರುವುದರಿಂದ ಈ ಹಂತದಲ್ಲಿ ಅರ್ಜಿದಾರರ ಅಪೇಕ್ಷೆಯಂತೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲು ಸಾಧ್ಯವಿಲ್ಲ. ಈ ರಿಟ್‌ಅರ್ಜಿಗಳ ಸಂಬಂಧ ಆಕ್ಷೇಪಣೆ ಸಲ್ಲಿಸಿ ಎಂದು ಸರ್ಕಾರಿ ವಕೀಲರಿಗೆ ಸೂಚನೆ ನೀಡಿ ಸೆಪ್ಟೆಂಬರ್‌ 8ಕ್ಕೆ ವಿಚಾರಣೆ ಮುಂದೂಡಿತು.

Advertisement

126 ವಿದ್ಯಾರ್ಥಿಗಳಿಗಿಲ್ಲ ಪರೀಕ್ಷೆ ಬರೆಯುವ ಭಾಗ್ಯ
ಕೊರಟಗೆರೆ: ಐಟಿಐ ಕಾಲೇಜುಗಳ ಆಡಳಿತ ಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯದಿಂದ 126 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಪ್ರವೇಶ ಪತ್ರ ದೊರೆಯದೆ ಪಟ್ಟಣದ ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಆವರಣದಲ್ಲಿ ಸೋಮವಾರ ಮುಂಜಾನೆಯಿಂದ ಸಂಜೆಯ ವರೆಗೆ ಕಾದುಕುಳಿತು ಮನೆಗೆ ಹಿಂದಿರುಗಿದ ಘಟನೆ ನಡೆಯಿತು. ತುಮಕೂರು ಗ್ರಾಮಾಂತರ ತಾಲೂಕಿನ ಹೆಬ್ಬೂರು ಬಳಿಯ ಕುಶಾಲ್‌ ಐಟಿಐ ಕಾಲೇಜಿನ 44 ಮಂದಿ ವಿದ್ಯಾರ್ಥಿಗಳು ಮತ್ತು ತುರುವೆಕರೆ ತಾಲೂಕಿನ ಶ್ರೀ ಸತ್ಯಸಾಯಿ ಸಾಗರ್‌ ತರಬೇತಿ ಕೇಂದ್ರದ 82 ಮಂದಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರವೇಶ ಪತ್ರ ಸಿಗದೆ ನಿರಾಶೆಗೊಂಡರು. 

ಮಾಹಿತಿ ನೀಡದ ಕಾಲೇಜುಗಳು: ತುರುವೇಕೆರೆಯ ಶ್ರೀ ಸತ್ಯಸಾಗರ್‌ ಕೈಗಾರಿಕಾ ತರಬೇತಿ ಕೇಂದ್ರ ವಿದ್ಯಾರ್ಥಿ ಚರಣ್‌ ಮಾತನಾಡಿ, ನಾವು ಕಳೆದ ಎರಡು ವರ್ಷದಿಂದ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದೇವೆ. ಕಾಲೇಜು ಆಡಳಿತ ಮಂಡಳಿ ನಮಗೆ ಸಮರ್ಪಕವಾದ ಮಾಹಿತಿ ನೀಡದೆ ನಮ್ಮ ಜೀವನದ ಜೊತೆಯಲ್ಲಿ ಚೆಲ್ಲಾಟ ವಾಡುತ್ತಿದೆ. ನಮಗೆ ದು ಯಾವ ವಿಷಯದ ಬಗ್ಗೆ ಪರೀಕ್ಷೆ ಇದೆ ಎಂಬುದರ ಮಾಹಿತಿಯೂ ಸಹ ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next