Advertisement

ಬೆಂಗಳೂರು ಕೃಷಿ ವಿವಿಯಿಂದ 8 ಹೊಸ ತಳಿಗಳ ಆವಿಷ್ಕಾರ

07:05 AM Oct 24, 2017 | |

ಬೆಂಗಳೂರು: ಬರಗಾಲದ ಸಂದರ್ಭದಲ್ಲೂ ಕಡಿಮೆ ನೀರಿನಲ್ಲಿ ಬೆಳೆಯುವ ಅತ್ಯಧಿಕ ಇಳುವರಿ ನೀಡುವ, ಅತಿ ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿರುವ ಕಬ್ಬು, ಮೇವಿನ ಅಲಸಂದೆ, ಜಂಬುನೇರಳೆ, ಮುಸುಕಿನ ಜೋಳ, ತೊಗರಿ ಸೇರಿ ಸುಧಾರಿತ
ತಳಿಗಳನ್ನು ಬೆಂಗಳೂರು ಕೃಷಿ ವಿವಿ ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರೆ.

Advertisement

ನವೆಂಬರ್‌ನಲ್ಲಿ ಜಿಕೆವಿಕೆಯಲ್ಲಿ ನಡೆಯುವ ಕೃಷಿ ಮೇಳದಲ್ಲಿ ಹೊಸದಾಗಿ ಸಂಶೋಧಿಸಲ್ಪಟ್ಟ ಸುಧಾರಿತ ತಳಿಗಳ ಬಿಡುಗಡೆಗೊಳಿಸಿ ರೈತ ಸಮುದಾಯಕ್ಕೆ ಇವುಗಳ ಉಪಯೋಗವನ್ನು ಪರಿಚಯಿಸಲು ಬೆಂಗಳೂರು ಕೃಷಿ ವಿವಿ ಸಜ್ಜಾಗಿದೆ. ಮಂಡ್ಯದ ವಿ.ಸಿ.ಫಾರಂನ ಕೃಷಿ ವಿಜ್ಞಾನಿಗಳಾದ ಸಿ.ಲೋಹಿತಾಶ್ವ ಮತ್ತು ಡಾ.ಪುಟ್ಟರಾಮನಾಯ್ಕ (ಮುಸುಕಿನಜೋಳ), ಚಿಂತಾಮಣಿ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ವೆಂಕಟರಮಣ (ಜಂಬು ನೇರಳೆ), ಜಿಕೆವಿಕೆಯ ಕೃಷಿ ವಿಜ್ಞಾನಿಗಳಾದ ಡ.ಬೈರೇಗೌಡ, ಡಾ.ಟಿ.ಓಂಕಾರಪ್ಪ, ಡಾ.ಎಚ್‌. ಕೆ.ರಾಮಪ್ಪ (ತೊಗರಿ), ಡಾ.ಡಿ.ಎಲ್‌.ಸಾವಿತ್ರಮ್ಮ (ಅಲಸಂದೆ), ಡಾ.ನಿರಂಜನಮೂರ್ತಿ (ಬೀಜದ ದಂಟಿನ ಸೊಪ್ಪು), ಡಾ.ಎಂ.ವಸುಂಧರಾ (ಔಷಧಿ ಸಸ್ಯ-ಸ್ಕೀವಿಯಾ), ಮಂಡ್ಯದ ವಿ.ಸಿ.ಫಾರಂನ ಡಾ.ಎಸ್‌.ಎನ್‌.ಸ್ವಾಮಿಗೌಡ‌ ( ಕಬ್ಬು) , 
ಡಾ.ಬಿ.ಜಿ.ಶೇಖರ್‌ (ಮೇವಿನ ಅಲಸಂದೆ) ಎಂಬುವರು ಸುಧಾರಿತ ತಳಿಗಳನ್ನು ನಾಲ್ಕೈದು ವರ್ಷಗಳ ಕಾಲ ಸತತವಾಗಿ ಅಧ್ಯಯನ ನಡೆಸಿ ಅಭಿವೃದ್ಧಿ ಪಡಿಸಿದ್ದಾರೆ.

ಹೊಸದಾಗಿ ಸಂಶೋಧಿಸಲ್ಪಟ್ಟ ಸುಧಾರಿತ ತಳಿಗಳನ್ನು ಸುಲಭವಾಗಿ ಗುರುತಿಸಲು ವೈಜ್ಞಾನಿಕ ಹೆಸರುಗಳನ್ನು ಸಹ ನೀಡಲಾಗಿದೆ. ಕಬ್ಬು (ವಿಸಿಎಫ್ 0517), ಮೇವಿನ ಅಲಸಂದೆ (ಎಂಎಫ್ಸಿ 09.1): ಬೀಜದ ದಂಟಿನ ಸೊಪ್ಪು (ಕೆಬಿಜಿಎ 4), ಅಲಸಂದೆ (ಎವಿ 6), ಜಂಬು ನೇರಳೆ (ಚಿಂತಾಮಣಿ ಸೆಲೆಕ್ಷನ್‌ 1), ಔಷಧಿ ಸಸ್ಯ (ಸ್ಕೀವಿಯಾ ರೆಬೌಡಿಯನಾ), ಮುಸುಕಿನ ಜೋಳ (ಎಂಎಎಚ್‌ 14.5), ತೊಗರಿ (ಬಿಆರ್‌ಜಿ 3) ಇವು ರೈತರು ಸಾಮಾನ್ಯವಾಗಿ ಬಳಸುವ ತಳಿಗಳಿಗಿಂತ ದುಪ್ಪಟ್ಟು ಮತ್ತು ಅದಕ್ಕಿಂತ ಹೆಚ್ಚು ಇಳುವರಿ ನೀಡುತ್ತವೆ. ಇದರಿಂದ ಕಡಿಮೆಯಾಗಿರುವ ಕೃಷಿ ಭೂಮಿ, ಹವಾಮಾನದ ಏರುಪೇರಿನಿಂದ ಕೃಷಿ ಉತ್ಪನ್ನಗಳ ಪ್ರಮಾಣ 
ಕಡಿಮೆಯಾಗುತ್ತಿದೆ ಎಂಬ ಆತಂಕವನ್ನು ದೂರಮಾಡಲಿವೆ ಎಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಜನಸಂಖ್ಯೆ ಹೆಚ್ಚುತ್ತಿದ್ದಂತೆ ಅದಕ್ಕೆ ಅನುಗುಣವಾಗಿ ಕೃಷಿ ಉತ್ಪನ್ನಗಳ ಪ್ರಮಾಣ ಏರುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ರೈತರು ಸಾಂಪ್ರದಾಯಿಕ ಮತ್ತು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ತಳಿಗಳನ್ನು ಬಳಸುತ್ತಿರುವುದು. ಸ್ಥಳೀಯ ತಳಿಗಳು ಹೆಚ್ಚು ಗೊಬ್ಬರ
ಬಳಸಿಕೊಂಡರೂ ಇಳುವರಿ ಮಾತ್ರ ಕಡಿಮೆ ನೀಡುತ್ತಿವೆ. ಜತೆಗೆ ಕೆಲವು ತಳಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಆಗಾಗ ರೋಗಬಾಧೆಗೆ ಒಳಗಾಗುತ್ತಿವೆ. ಇದು ಇಳುವರಿ ಮೇಲೆ ಪರಿಣಾಮ ಬೀರುತ್ತಿದ್ದು, ರೈತರು ಆರ್ಥಿಕವಾಗಿ ಸಮಸ್ಯೆಗೆ ತುತ್ತಾಗುತ್ತಿದ್ದರು. ಆದ್ದರಿಂದ ಕೃಷಿ ವಿವಿ ವಿಜ್ಞಾನಿಗಳು, ಹೊಸ ಸುಧಾರಿತ ಹೆಚ್ಚು ಇಳುವರಿ ನೀಡುವ ತಳಿಗಳ ಆವಿಷ್ಕಾರಕ್ಕೆ ಆದ್ಯತೆ
ನೀಡಿದ್ದು, ಸುಮಾರು ಎಂಟು ತಳಿಗಳನ್ನು ಕಳೆದ ಐದು ವರ್ಷಗಳ ಸತತ ಶ್ರಮದಿಂದ ಸಂಶೋಧಿಸಿದ್ದಾರೆ. ಸುಧಾರಿತ ತಳಿಗಳ ಬೀಜಗಳು ಬೆಂಗಳೂರು ಕೃಷಿ ವಿವಿ ಆವರಣದಲ್ಲಿ ಇರುವ ಬೀಜ ಸಂಸ್ಕರಣ ಕೇಂದ್ರ ಮತ್ತು ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದಲ್ಲಿ ಸಿಗುತ್ತವೆ.  

ಕಳೆದ ವರ್ಷ ಅಂತಾರಾಷ್ಟ್ರೀಯ ಕೃಷಿ ಮೇಳದಲ್ಲಿ ಸುಧಾರಿತ 5 ತಳಿಗಳನ್ನು ಬಿಡುಗಡೆ ಮಾಡಿದ್ದೆವು. ಈ ಬಾರಿ 8 ತಳಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಸಮಗ್ರ ಕೃಷಿ, ಸಮರ್ಪಕ ನೀರು ನಿರ್ವಹಣೆ ಹಾಗೂ ಸಿರಿಧಾನ್ಯ ಈ ಮೂರು ವಿಷಯಕ್ಕೆ ಮೇಳದಲ್ಲಿ ಆದ್ಯತೆ ನೀಡಲಾಗುವುದು. 
 ●ಡಾ.ಶಿವಣ್ಣ, ಕುಲಪತಿ, ಕೃಷಿ ವಿವಿ, ಬೆಂಗಳೂರು 

Advertisement

 ●ಸಂಪತ್‌ ತರೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next