Advertisement

ಅವ್ಯವಸ್ಥೆ ಆಗರ ಹಸರಗುಂಡಗಿ ಹಾಸ್ಟೆಲ್‌

06:44 AM Jan 19, 2019 | Team Udayavani |

ಅಫಜಲಪುರ: ಹಸರಗುಂಡಗಿ ಪ್ರಾಥಮಿಕ, ಪ್ರೌಢ ಶಾಲಾ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ ಜಿ.ಪಂ ಉಪಾಧ್ಯಕ್ಷೆ ಶೋಭಾ ಶಿರಸಗಿ ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ ಸಮಸ್ಯೆ, ವಿದ್ಯಾರ್ಥಿನಿಯರು ಇಲ್ಲದಿದ್ದರೂ ಸಂಪೂರ್ಣ ಹಾಜರಾತಿ ಸೇರಿದಂತೆ ಇನ್ನಿತರ ಅವವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿದರು.

Advertisement

ಶುಕ್ರವಾರ ವಸತಿ ನಿಲಯಕ್ಕೆ ಭೇಟಿ ನೀಡಿ ಅಡುಗೆ ದಾಸ್ತಾನು, ಊಟದ ವ್ಯವಸ್ಥೆ, ಹಾಜರಾತಿ ಪುಸ್ತಕ, ಶೌಚಾಲಯ ವೀಕ್ಷಣೆ ಮಾಡಿ, ಏನು ಕೆಲಸ ಮಾಡುತ್ತಿದ್ದಿರಿ? ನಿಮಗೆ ನಾಚಿಕೆ ಆಗಲ್ವೆ? ಎಂದು ನಿಲಯ ಪಾಲಕಿಯನ್ನು ತರಾಟೆಗೆ ತೆಗೆದುಕೊಂಡರು.

ಹಬ್ಬದ ರಜೆ ದಿನಗಳಲ್ಲೂ ವಿದ್ಯಾರ್ಥಿನಿಯರ ಹಾಜರಾತಿ ಹಾಕಲಾಗಿದೆ. ಸಿಬ್ಬಂದಿ, ಅಡುಗೆಯವರು ತಮ್ಮ ರಜೆಯನ್ನು ದಾಖಲಾತಿ ಪುಸ್ತಕದಲ್ಲಿ ಹಾಕದೇ ರಜೆ ಪತ್ರ ಬರೆದಿಟ್ಟಿದ್ದಾರೆ. ಹೀಗಾಗಿ ನಿಲಯ ಪಾಲಕಿ ವಿದ್ಯಾರ್ಥಿನಿಯರ ಸುಳ್ಳು ಹಾಜರಾತಿ ಹಾಕಿ, ಹಣ ದುರುಪಯೋಗ ಮಾಡುತ್ತಿದ್ದಾರೆ ಎಂದು ದೂರಿದರು.

50 ವಿದ್ಯಾರ್ಥಿನಿಯರು ಇವರು ವಸತಿ ನಿಲಯದಲ್ಲಿ ರಾತ್ರಿ ವೇಳೆ ವಾಸವಿರುವುದು ಕೇವಲ ಐವರು ವಿದ್ಯಾರ್ಥಿನಿಯರು ಮಾತ್ರ. ಉಳಿದವರೆಲ್ಲ ಶಾಲೆ ಬಿಟ್ಟ ಕೂಡಲೆ ತಮ್ಮ ಮನೆಗಳಿಗೆ ತೆರಳುತ್ತಾರೆ. ಕಾರಣ ಕೇಳಿದರೆ ವಸತಿ ನಿಲಯದಲ್ಲಿ ಇರಲು ವ್ಯವಸ್ಥೆ ಸರಿಯಾಗಿಲ್ಲ, ಕುಡಿಯುವ ನೀರಿಲ್ಲ, ಶೌಚಾಲಯವಿದ್ದರೂ ನೀರಿನ ಸೌಲಭ್ಯವಿಲ್ಲ, ರಾತ್ರಿಯಾದರೆ ಪುಂಡ ಪೋಕರಿಗಳ ಕಾಟವಿದೆ. ಹೀಗಾಗಿ ವಸತಿ ನಿಲಯದಲ್ಲಿ ಇರಲು ಭಯವಾಗುತ್ತದೆ ಎಂದು ವಿದ್ಯಾರ್ಥಿನಿಯರು ತಮ್ಮ ಅಳಲನ್ನು ತೋಡಿಕೊಂಡರು.

ಹಸರಗುಂಡಗಿ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗೆ ನಾಲ್ಕೈದು ಕಿ.ಮೀ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಬರುತ್ತಾರೆ. ಇವರ ಅನುಕೂಲಕ್ಕಾಗಿ ಕಟ್ಟಿರುವ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಯಾವುದೇ ಸೌಕರ್ಯಗಳಿಲ್ಲದೆ ವಸತಿ ನಿಲಯ ಪಾಳು ಬಂಗಲೆಯಂತಾಗಿದೆ. ವಸತಿ ನಿಲಯದಲ್ಲಿ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಇದ್ದು, ವಿದ್ಯಾರ್ಥಿನಿಯರು ಕೇವಲ ಮದ್ಯಾಹ್ನ ಮಾತ್ರ ಊಟ ಮಾಡುತ್ತಿದ್ದಾರೆ. ಬೆಳಗ್ಗೆ ವಿವಿಧ ಹಳ್ಳಿಗಳಿಂದ ಶಾಲೆಗೆ ಬರುವಷ್ಟರಲ್ಲಿ ತರಗತಿಗಳ ಸಮಯ ಆಗಿರುತ್ತದೆ. ಮಧ್ಯಾಹ್ನ ಹಾಸ್ಟೆಲ್‌ಗೆ ಬಂದು ಊಟ ಮಾಡಿ ಸಂಜೆ ಶಾಲೆ ಬಿಟ್ಟ ಕೂಡಲೇ ಕತ್ತಲಾಗುವಷ್ಟರಲ್ಲಿ ಮನೆಗೆ ಹೋಗುತ್ತಾರೆ. ಹೀಗಾಗಿ ವಿದ್ಯಾರ್ಥಿನಿಯರು ಕೇವಲ ಮಧ್ಯಾಹ್ನದ ಊಟ ಮಾಡುತ್ತಿದ್ದಾರೆ. ಆದರೂ ನಿಲಯ ಪಾಲಕಿ ಎಲ್ಲ ವಿದ್ಯಾರ್ಥಿಗಳ ಹಾಜರಾತಿ ಹಾಕಿ ಆಹಾರ ಧಾನ್ಯವನ್ನು ಸಹ ದುರ್ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಈ ಕುರಿತು ಮೇಲಾಧಿಕಾರಿಗಳಿಗೆ ದೂರು ದಾಖಲಿಸುವುದಾಗಿ ಹಾಗೂ ಜ. 19ರಂದು ಜಿ.ಪಂ.ನಲ್ಲಿ ನಡೆಯುವ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ.

Advertisement

ಮುಖಂಡ ಸಿದ್ದು ಶಿರಸಗಿ, ಜಿಲ್ಲಾ ಬಿಸಿಯೂಟ ಅಧಿಕಾರಿ ಬನ್ನಿಕಟ್ಟಿ, ನಿಲಯ ಪಾಲಕಿ ಮಹಾದೇವಿ, ಅಡುಗೆಯವರು ಹಾಗೂ ವಿದ್ಯಾರ್ಥಿನಿಯರು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next