ಮೈಸೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಬಜೆಟ್‌ನಲ್ಲಿ ಬಿಸಿಯೂಟ ಕಾರ್ಯಕರ್ತೆಯರಿಗೆ ಬಿಡಿಗಾಸೂ ನೀಡದೆ ವಂಚಿಸಿವೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಬಿಸಿಯೂಟ ಕಾರ್ಯಕರ್ತೆ ಯರು ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು.
ಪುರಭವನ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಎಐಯುಟಿಯುಸಿ ಸಂಘಟನೆಯ ಬಾವುಟ, ಘೋಷಣಾ ಫಲಕಗಳನ್ನು ಕೈಯಲ್ಲಿ ಹಿಡಿದು ರ್ಯಾಲಿ ಹೊರಟ ಬಿಸಿಯೂಟ ಕಾರ್ಯಕರ್ತೆಯರು ನಗರದ ಹಾರ್ಡಿಂಜ್ ವೃತ್ತದಲ್ಲಿ ಸಮಾವೇಶ ನಡೆಸಿ ಸರ್ಕಾರಗಳ ಕ್ರಮ ಖಂಡಿಸಿದರು.
ದೇಶಾದ್ಯಂತ 27 ಲಕ್ಷಕ್ಕೂ ಹೆಚ್ಚು, ಕರ್ನಾಟಕದಲ್ಲಿ ಸುಮಾರು 1.20 ಲಕ್ಷಕ್ಕೂ ಹೆಚ್ಚು ಬಿಸಿಯೂಟ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರ, ಅನುದಾನಿತ ಶಾಲೆಗಳಲ್ಲಿ ಅಡುಗೆ ಮಾಡಿ ಲಕ್ಷಾಂತರ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಾ ಬಂದಿದ್ದಾರೆ.
ಪ್ರಸ್ತುತ ಈ ಕಾರ್ಯಕರ್ತೆಯರಿಗೆ ತಿಂಗಳಿಗೆ ಕೇಂದ್ರ ಸರ್ಕಾರ ಒಂದು ಸಾವಿರ ರೂ., ರಾಜ್ಯ ಸರ್ಕಾರ 1600 ರೂ. ಸೇರಿದಂತೆ ಒಟ್ಟಾರೆ 2600 ರಿಂದ 2700 ರೂ. ಗೌರವ ಧನ ನೀಡಲಾಗುತ್ತಿದೆ. ಅತ್ಯಂತ ಕನಿಷ್ಠ ಮೊತ್ತದ ಈ ಗೌರವಧನದಿಂದ ಒಬ್ಬ ವ್ಯಕ್ತಿ ಗೌರವಯುತವಾಗಿ ಬದುಕು ಸಾಗಿಸಲು ಆಗುವುದಿಲ್ಲ. ಇನ್ನು ಕುಟುಂಬವನ್ನು ಹೇಗೆ ಸಾಕಬೇಕು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಇತ್ತೀಚೆಗೆ ಮಂಡನೆಯಾದ ಕೇಂದ್ರ ಮತ್ತು ರಾಜ್ಯಸರ್ಕಾರಗಳ ಎರಡೂ ಬಜೆಟ್‌ನಲ್ಲೂ ಬಿಸಿಯೂಟ ಕಾರ್ಯಕರ್ತೆಯರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಕ್ಷಾಂತರ ಮಕ್ಕಳಿಗೆ ಅನ್ನ ನೀಡಿದ ಮಹಾ ತಾಯಂದಿರಿಗೆ ಮೋಸ ಮಾಡಿವೆ.
ಸರ್ಕಾರದ ಈ ಧೋರಣೆ ವಿರುದ್ಧ ಕಳೆದ ಕೆಲ ವರ್ಷಗಳಿಂದ ಎಐಯುಟಿಯುಸಿ ನೇತೃತ್ವದಲ್ಲಿ ಬಿಸಿಯೂಟ ಕಾರ್ಯಕರ್ತೆಯರು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದರೂ ಸರ್ಕಾರಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಮುದ್ದುಕೃಷ್ಣ ದೂರಿದರು.