ದಾವಣಗೆರೆ: ಸಂಘಟಿತರಾಗದಿದ್ದಲ್ಲಿ ಶ್ರಮಿಕ ವರ್ಗದವರು ಮುಂದಿನ ದಿನಗಳಲ್ಲಿ ಬದುಕುವುದೇ ಕಷ್ಟವಾಗಲಿದೆ ಎಂದು ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಪಿ.ಷಣ್ಮುಖ ಸ್ವಾಮಿ ಎಚ್ಚರಿಸಿದ್ದಾರೆ.
ಶನಿವಾರ ದೇವರಾಜ ಅರಸು ಬಡಾವಣೆಯ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಎಸ್.ಎಂ. ವಿಶ್ವೇಶರಾಯ ಕಟ್ಟಡ ನಲ್ಲಿ ಮತ್ತು ಸ್ಯಾನಿಟರಿ ಕಾರ್ಮಿಕರ ಸಂಘದ ವಿಶ್ವ ಪ್ಲಂಬರ್ ದಿನಾಚರಣೆ, ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇವತ್ತು ಸಂಪತ್ತಿನ ಅಸಮಾನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಶ್ರೀಮಂತರು ಶೀಮಂತರಾಗುತ್ತಾಹೋಗುತ್ತಿದ್ದರೆ, ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ. ಮತ ಹಾಕಲು ಮಾತ್ರ ನಮ್ಮ ದೇಶದಲ್ಲಿ ಸಮಾನತೆಇದೆ ಎಂದರು. ದುಡಿಯುವ ವರ್ಗವನ್ನು ಸಮಾಜ, ಸರ್ಕಾರ ಹಾಳು ಮಾಡುತ್ತಿವೆ. ಇದರ ವಿರುದ್ಧ ಸಂಘಟಿತರಾಗಿ ಹೋರಾಟ ಮಾಡಬೇಕಿದೆ.
ಮತ ಚಲಾವಣೆಗೆ ಇರುವ ಸಮಾನತೆ ಸಂಪತ್ತಿಗೆ ಯಾಕೆ ಇಲ್ಲ ದುಡಿಯುವ ವರ್ಗವು ಸಂಪತ್ತನ್ನು ಕ್ರೊಢೀಕರಿಸುತ್ತಿದ್ದರೆ ಸರ್ಕಾರಗಳು ಕಾರ್ಪೋರೇಟ್ ವಲಯಗಳಿಗೆ ಇದೇ ಸಂಪತ್ತನ್ನು ಹಂಚುತ್ತಿವೆ. ಶ್ರಮಿಕರಿಗೆ ಸೂಕ್ತ ಸವಲತ್ತು ಕಲ್ಪಿಸುತ್ತಿಲ್ಲ ಎಂದು ಅವರು ಹೇಳಿದರು.
ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಹೊಡೆಯುವ ಕ್ವಾರಿ ಕಾರ್ಮಿಕರಸಂಘದ ಜಿಲ್ಲಾ ಕಾರ್ಯಧ್ಯಕ್ಷ ಪಿ.ಕೆ.ಲಿಂಗರಾಜ್ ಮಾತನಾಡಿ, ಕಾರ್ಮಿಕ ವಲಯದಲ್ಲಿ 36 ಬಗೆಯ ಕೆಲಸಗಳು ಇದ್ದು, ರಾಜ್ಯದಲ್ಲಿ ಈ ವಿಭಾಗಗಳಲ್ಲೇ ದುಡಿಯುವ ವರ್ಗವೇ ಹೆಚ್ಚಿದೆ. ಈ 36 ಬಗೆಯಕಾರ್ಮಿಕರಿಗೆ ಸಿಗಬೇಕಾದ ಹಕ್ಕುಗಳಲ್ಲಿ ಶೇ.30ರಷ್ಟು ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಹೋರಾಟದ ಮೂಲಕ ಉಳಿದ ಹಕ್ಕುಗಳನ್ನು ಪಡೆದುಕೊಳ್ಳಬೇಕಿದೆ ಎಂದರು.
ಕಟ್ಟಡ ಕಟ್ಟುವ ಮತ್ತು ಕಲ್ಲುಒಡೆಯುವ ಕ್ವಾರಿ ಕಾರ್ಮಿಕರ ಸಂಘದ ವಿ.ಲಕ್ಷ್ಮಣ್, ಎಸ್.ಎಸ್. ಗೋವಿಂದರಾಜ್, ಎಂ.ಪಿ.ಸಾಗರ್,ಶಿವಕುಮಾರ್ ಡಿ.ಶೆಟ್ಟರ್, ಎಸ್. ಕೆ.ಗಿರೀಶ್, ಎಸ್.ಎಂ. ಸಿದ್ದಲಿಂಗಪ್ಪ, ದಯಾನಂದ ಶಂಕರ್, ಸಿದ್ಧವಿನಾಯಕ್ ಇತರರು ವೇದಿಕೆಯಲ್ಲಿದ್ದರು. ಹಲವಾರು ವರ್ಷ ಸೇವೆ ಸಲ್ಲಿಸಿದ ಪ್ಲಂಬರ್‌ಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.