ನಾಲತವಾಡ: ಲೊಟಗೇರಿ ಗ್ರಾಮದಲ್ಲಿ ಕಳೆದ 6 ತಿಂಗಳಿಂದ ಅರ್ಧಕ್ಕೆ ನಿಲ್ಲಿಸಿದ ಡಾಂಬರ್ ರಸ್ತೆ ಬಾಯೆರೆದ ಪರಿಣಾಮ ವೃದ್ಧರು, ರೈತರು ಹಾಗೂ ಜಾನುವಾರುಗಳ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದ್ದು ಶೀಘ್ರವೇ ಡಾಂಬರೀಕರಣ ಪ್ರಾರಂಭಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಳೆದ ಸುಮಾರು 8 ತಿಂಗಳಿಂದ ಜಿಪಂ ಅನುದಾನದ 80 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದ ವಿವಿಧೆಡೆ ಚರಂಡಿ ಹಾಗೂ ರಸ್ತೆ ಕಾಮಗಾರಿ ಕೈಗೊಳ್ಳಲಾಗಿತ್ತು. ಗ್ರಾಮದ ಹಲವಡೆ ಚರಂಡಿಗಳನ್ನು ನಿರ್ಮಿಸಲಾಗಿದೆ. ನಂತರ ಡಾಂಬರ್ ರಸ್ತೆ ನಿರ್ಮಿಸುವ ಉದ್ದೇಶದಿಂದ ರಸ್ತೆಯಲ್ಲಿ ಜಲ್ಲಿಗಳನ್ನು ಹಾಕಿ ಹೋಗಿದ್ದಾರೆ. ಸದ್ಯ ರೈತರು ನಿತ್ಯ ಕೃಷಿ ಚಟುವಟಿಕೆಗಳಿಗೆ ಚಕ್ಕಡಿ ಮೂಲಕ ಸಂಚರಿಸಲು ತೀವೃ ತೊಂದರೆಯಾಗಿದ್ದು ಜಾನುವಾರಗಳ ಸಂಚಾರಕ್ಕೆ ಕಂಟಕ ಉಂಟು ಮಾಡಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಅವೈಜ್ಞಾನಿಕ ಚರಂಡಿಗಳು: ಗ್ರಾಮದಲ್ಲಿ ಅವೈಜ್ಞಾನಿಕ ಪದ್ಧತಿಯಲ್ಲಿ ಚರಂಡಿಗಳನ್ನು ನಿರ್ಮಿಸಿದ್ದು ಸಮತಾಳವಾಗಿ ನಿರ್ಮಿಸುವ ಬದಲು ಮನ ಬಂದಂತೆ ಏರಿಳಿತವಾಗಿ ನಿರ್ಮಿಸಲಾಗಿದೆ. ಉಪಯೋಗಿಸಿದ ನೀರು ಚರಂಡಿ ಮೂಲಕ ಮುಂದೆ ಸಾಗದೆ ನಿಂತಲ್ಲೇ ನಿಂತು ಕ್ರಿಮಿ ಕೀಟಗಳ ಹಾವಳಿ ಉಲ್ಬಣಗೊಂಡಿವೆ. ಇದಕ್ಕೆ ಕಾಮಗಾರಿ ವೇಳೆ ಸ್ಥಾನಿಕವಾಗಿ ಇರದ ಜಿಪಂ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಧೋರಣೆ ಎಂದು ಸ್ಥಳೀಯರು ದೂರಿದ್ದಾರೆ.
ಅನುದಾನ ಕೊರತೆ: ಈಗಾಗಲೇ ಚರಂಡಿ ನಿರ್ಮಿಸಿ ಕೈ ತೊಳೆದುಕೊಂಡ ಗುತ್ತಿಗೆದಾರರು ನನಗೆ ಇನ್ನೂ ಬಿಲ್ ಬರಬೇಕಿದೆ, ಅಲ್ಲಿವರೆಗೂ ರಸ್ತೆ ನಿರ್ಮಿಸಲು ಅಸಾಧ್ಯ. ಇನ್ನೂ 36 ಲಕ್ಷ ರೂ. ಅನುದಾನ ನನಗೆ ನೀಡಬೇಕಿದೆ. ನಂತರ ರಸ್ತೆ ನಿರ್ಮಿಸುತ್ತೇನೆ ಎಂದು ಗುತ್ತಿಗೆದಾರರು ತಮ್ಮ ಸಮಸ್ಯೆಯನ್ನುಯ ತೋಡಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತೆರವಿಗೆ ಆಗ್ರಹ: ಬಿಲ್ ಆಗುವವರೆಗೂ ಡಾಂಬರ್ ರಸ್ತೆ ನಿರ್ಮಿಸಲು ಹಿಂದೇಟು ಹಾಕುವ ಗುತ್ತಿಗೆದಾರರು, ಈಗಾಗಲೇ ಜಲ್ಲಿಗಳನ್ನು ಮನ ಬಂದಂತೆ ಸುರುವಿದ್ದಾರೆ. ನಿತ್ಯ ಅಲೆದಾಡಲು ಸಂಕಷ್ಟ ಅನುಭವಿಸಬೇಕಿದೆ. ಬಿಲ್ ಆಗುವವರೆಗೂ ರಸ್ತೆಯಲ್ಲಿನ ಜೆಲ್ಲೆಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಜಿಪಂ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.