Advertisement

ಸಿಎಂ ನಿದ್ದೆಗೆಡಿಸಿದ ಗುಪ್ತಚರದ ಭಿನ್ನ ವರದಿ

11:07 PM May 03, 2019 | Team Udayavani |

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ದೇಶದ ಗಮನವನ್ನು ಕೇಂದ್ರೀಕರಿಸಿಕೊಂಡಿರುವ ಮಂಡ್ಯ ಲೋಕಸಭಾ ಚುನಾವಣಾ ಫ‌ಲಿತಾಂಶ ಕುರಿತು ರಾಜ್ಯ ಗುಪ್ತಚರ ಇಲಾಖೆ ನೀಡಿದ ಮೂರು ವಿಭಿನ್ನ ವರದಿಗಳು ಸಿಎಂ ಕುಮಾರಸ್ವಾಮಿ ನಿದ್ದೆಗೆಡಿಸಿವೆ ಎನ್ನಲಾಗಿದೆ. ಜೆಡಿಎಸ್‌ ಭದ್ರಕೋಟೆಯೊಳಗೆ ಲೋಕಸಭಾ ಚುನಾವಣೆಯನ್ನು ಅತ್ಯಂತ ಆತ್ಮವಿಶ್ವಾಸದಿಂದ ಎದುರಿಸಿದ್ದ ಸಿಎಂ ಕುಮಾರಸ್ವಾಮಿ ಚುನಾವಣೆ ಮುಗಿದ ಬಳಿಕ ನೆಮ್ಮದಿ ಕಳೆದುಕೊಂಡಿರುವುದಕ್ಕೆ ಈ ವರದಿಗಳೇ ಕಾರಣ ಎನ್ನಲಾಗಿದೆ.

Advertisement

ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು ಚುನಾವಣೆ ಮುಗಿದ ನಂತರದಲ್ಲಿ ಕುಮಾರಸ್ವಾಮಿ ಅವರಿಗೆ ಫ‌ಲಿತಾಂಶದ ಬಗ್ಗೆ ಮೂರು ವರದಿ ನೀಡಿದ್ದು, ಅವೆಲ್ಲವೂ ಬೇರೆ ಬೇರೆ ರೀತಿಯಲ್ಲಿವೆ. ಗುಪ್ತಚರ ಇಲಾಖೆ ನೀಡಿದ ಮೊದಲ ವರದಿಯಲ್ಲಿ ನಿಖಿಲ್‌ ಭಾರೀ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿತ್ತು. ಇದರಿಂದ ಸಹಜವಾಗಿಯೇ ಕುಮಾರಸ್ವಾಮಿ ಹರ್ಷಚಿತ್ತರಾಗಿ ಎರಡನೇ ಹಂತದ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದರು. ಆದರೆ, ಆ ಸಂತೋಷ ಹೆಚ್ಚು ಸಮಯ ಉಳಿಯಲೇ ಇಲ್ಲ.

ಜೆಡಿಎಸ್‌ ಶಾಸಕರಿಗೆ ತರಾಟೆ: ಆನಂತರ ಮತ್ತೆ ಸಮೀಕ್ಷೆ ನಡೆಸಿದ ಗುಪ್ತಚರ ಇಲಾಖೆ, ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಗೆಲುವು ಸಾಧಿಸುವುದು ಕಷ್ಟ. ನಿಖಿಲ್‌ ಕಡಿಮೆ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. 3 ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಹಿನ್ನಡೆ ಇದೆ. ಅಲ್ಲಿ ಕಳೆದುಕೊಂಡ ಮತಗಳನ್ನು ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್‌ ಪಡೆದುಕೊಳ್ಳಲಿದೆ ಎಂದು ತಿಳಿಸಿತ್ತು.

ಈ ವರದಿಯಿಂದ ಕ್ರುದ್ಧರಾದ ಕುಮಾರಸ್ವಾಮಿ ಮಳವಳ್ಳಿ, ಮದ್ದೂರು, ಮಂಡ್ಯ ಕ್ಷೇತ್ರದ ಜೆಡಿಎಸ್‌ ಶಾಸಕರನ್ನು ತೀವ್ರ ತರಾಟೆ ತೆಗೆದುಕೊಂಡಿದ್ದರು. ಮೂರನೇ ವರದಿ ಕುಮಾರಸ್ವಾಮಿ ಅವರಿಗೆ ಅಕ್ಷರಶಃ ಆಘಾತವನ್ನೇ ನೀಡಿತ್ತು. “ಮಂಡ್ಯ ಕ್ಷೇತ್ರದಲ್ಲಿ ನಿಖಿಲ್‌ ಗೆಲುವು ಕಷ್ಟ. ಇಬ್ಬರ ನಡುವೆ ಸಮನಾದ ಹೋರಾಟವಿದೆ. ಯಾರೇ ಗೆಲುವು ಸಾಧಿಸಿದರೂ ಕಡಿಮೆ ಅಂತರದಲ್ಲಿ ಗೆಲ್ಲುವರು’ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ಗುಪ್ತಚರ ವರದಿ: ಇದು ಕುಮಾರಸ್ವಾಮಿ ಅವರ ಬೇಸರಕ್ಕೆ ಕಾರಣವಾಗಿದ್ದಲ್ಲದೆ, ಸುಮಲತಾ ಜತೆ ಔತಣಕೂಟದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್‌ ಮಾಜಿ ಶಾಸಕರ ವಿರುದ್ಧ ದೂರು ನೀಡುವುದಕ್ಕೆ ಪ್ರಮುಖ ಕಾರಣವೆಂದು ಹೇಳಲಾಗಿದೆ. ಗುಪ್ತಚರ ಇಲಾಖೆಯವರು ತಳಮಟ್ಟಕ್ಕೆ ಇಳಿದು ಸಮೀಕ್ಷೆ ನಡೆಸಿದ್ದಾರೆ ಎನ್ನಲಾಗಿದ್ದು ಆ ಸಂದರ್ಭದಲ್ಲಿ ಜನಮಾನಸದಲ್ಲಿ ವ್ಯಕ್ತವಾದ ಅಭಿಪ್ರಾಯವನ್ನು ಸಿಎಂಗೆ ವರದಿ ಮೂಲಕ ಸಲ್ಲಿಸಿದ್ದಾರೆ. ಈ ಮೂರೂ ವರದಿಗಳ ಸಂಬಂಧ ಗುಪ್ತಚರ ಇಲಾಖೆ ಅಧಿಕಾರಿಗಳನ್ನೂ ಸಿಎಂ ತರಾಟೆ ತೆಗೆದುಕೊಂಡಿದ್ದಾರೆಂದು ಗೊತ್ತಾಗಿದೆ.

Advertisement

ಮಹಿಳೆಯರ ಮತಗಳು ಸುಮಾಗೆ: ಗುಪ್ತಚರ ಇಲಾಖೆ ಗ್ರಾಮೀಣ ಪ್ರದೇಶದಲ್ಲೆಲ್ಲಾ ಸಮೀಕ್ಷೆ ನಡೆಸಿದ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಮತದಾರರು ಸುಮಲತಾ ಕೈ ಹಿಡಿದಿದ್ದಾರೆ. ಬಹುತೇಕರು ಸುಮಲತಾ ಪರ ಹಕ್ಕು ಚಲಾಯಿಸಿರುವುದಾಗಿಯೇ ಹೇಳಿದ್ದಾರೆಂದು ಹೇಳಲಾಗಿದೆ. ಇದರ ಜತೆಗೆ ಮಹಿಳೆಯರು, ಯುವ ಸಮುದಾಯದ ಮತಗಳು ಯಾವ ಕಡೆ ಹರಿದುಹೋಗಿವೆ ಎಂಬುದು ಯಾರ ಗ್ರಹಿಕೆಗೂ ಸಿಗುತ್ತಿಲ್ಲ. ಗುಪ್ತಗಾಮಿನಿಯಂತೆ ಹರಿದಿರುವ ಮತಗಳು ನಿಖಿಲ್‌ ಅಥವಾ ಸುಮಲತಾ ಪರವಾಗಿ ಹರಿದುಹೋಗಿವೆ ಎಂದು ನಿರ್ದಿಷ್ಟವಾಗಿ ಹೇಳಲೂ ಸಾಧ್ಯವಾಗುತ್ತಿಲ್ಲ.

ಲೆಕ್ಕಾಚಾರಕ್ಕೆ ಸಿಗದ ಮತಗಳು: ಮುಖ್ಯಮಂತ್ರಿ ಪುತ್ರನ ರಾಜಕೀಯ ಭವಿಷ್ಯ ನಿರ್ಧರಿಸುವ ಚುನಾವಣೆ ಆಗಿರುವುದರಿಂದ ಫ‌ಲಿತಾಂಶ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಅದರ ಬಗ್ಗೆ ವರದಿ ನೀಡುವಾಗಲೂ ಗುಪ್ತಚರ ಇಲಾಖೆ ಎಚ್ಚರ ವಹಿಸಿದೆ. ಮತಗಳು ಯಾವ ಕಡೆ ಹರಿದುಹೋಗಿವೆ ಎಂಬುದು ಲೆಕ್ಕಕ್ಕೇ ಸಿಗದಿರುವಾಗ ಅವರ ವರದಿಗಳನ್ನೂ ಅನುಮಾನದಿಂದ ನೋಡುವಂತಿದೆ.

* ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next