Advertisement

ಭಕ್ತಿ ಅಂತರಂಗದ ಅಭಿವ್ಯಕ್ತಿಯಾಗಲಿ

12:59 PM Apr 18, 2017 | |

ಹರಪನಹಳ್ಳಿ: ಭಕ್ತಿ ಎನ್ನುವುದು ಮನುಷ್ಯನ ಪ್ರದರ್ಶನ ವಸ್ತುವಾಗಬಾರದು ಬದಲಿಗೆ ಅಂತರಂಗದ ಅಭಿವ್ಯಕ್ತಿಯಾಗಬೇಕು ಎಂದು ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿ ಡಾ| ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಸೋಮವಾರ ಶಿವನಾರದಮುನಿ ಸ್ವಾಮಿ ನೂತನ ಬ್ರಹ್ಮರಥ ಲೋಕಾರ್ಪಣೆಗೊಳಿಸಿ ನಂತರ ನಡೆದ ಧಾರ್ಮಿಕ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಆಶೀವರ್ಚನ ನೀಡಿದರು.

Advertisement

ನೂತನ ರಥದ ತೂಕ 50 ಟನ್‌ ಇದೆ. ಆದರೆ ರಥವನ್ನು ಎಳೆಯುವ ಭಕ್ತರ ತೂಕ ಅದಕ್ಕಿಂತಲೂ ದೊಡ್ಡದು. ನೀತಿಯ ನೆಲೆಗಟ್ಟಿನ ಮೇಲೆ ನಿಂತು ಮುನ್ನಡೆಯಬೇಕಾಗಿರುವುದು ಭಕ್ತರ ಕರ್ತವ್ಯವಾಗಿದೆ. ತೇರಿಗೆ ಬ್ರೇಕ್‌ ಅಳವಡಿಸಿರುವಂತೆ ಮನುಷ್ಯನ ದೇಹಕ್ಕೂ ಒಂದು ಬ್ರೇಕ್‌ ಇರಬೇಕು.

ಶರಣರ ನುಡಿಗಳು ಬದುಕಿಗೆ ದಾರಿ ದೀಪವಾಗಬೇಕು. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಲಿ ರೈತರ ಬದುಕು ಹಸನಾಗಲಿ ಎಂದು ಹರಿಸಿದರು.  ಶಿವನಾರದಮುನಿ ಮಹಾದ್ವಾರ ಉದ್ಘಾಟಿಸಿದ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ದೇಶದಲ್ಲಿಯೇ ನಾರದಮುನಿ ದೇವಸ್ಥಾನ ಚಿಗಟೇರಿಯಲ್ಲಿದೆ.

ಶಿವ ಮತ್ತು ವಿಷ್ಣುವಿನ ಅಪರೂಪದ ದರ್ಶನ ನೀಡುವ ವಿಶಿಷ್ಠ ಕೇಂದ್ರವಾಗಿದೆ. ಮನುಷ್ಯನಿಗೆ ಕೇವಲ ಭಕ್ತಿಯಿದ್ದರೇ ಸಾಲದು, ಭಗವಂತನ ಮೇಲೆ ನಂಬಿಕೆ ಇದ್ದಾಗ ಪ್ರಾರ್ಥನೆ ಹೆಚ್ಚಾಗುತ್ತದೆ. ಅಂತರಂಗ ಶುದ್ಧಿಯಾಗಲು ಭಕ್ತಿಯಿಂದ ಪ್ರಾರ್ಥನೆ ಮಾಡಬೇಕು. ವಿಶ್ವಾಸದಿಂದ ಭಗವಂತನದಲ್ಲಿ ಬೇಡಿಕೊಂಡಲ್ಲಿ ಒಳ್ಳೆಯ ಮಳೆ ಕೊಡುತ್ತಾನೆ ಎಂದರು. 

ಹೂವಿನಹಡಗಲಿ ಗವಿಸಿದ್ದೇಶ್ವರ ಮಠದ ಶಾಂತವೀರ ಸ್ವಾಮೀಜಿ ಮಾತನಾಡಿ, ಭಕ್ತರು ಮುತ್ತಿನಂಥ ಬದುಕು ಸಾಗಿಸಲು ಮುತ್ತಿನಂತ ಗಟ್ಟಿತನದ ಭಾವನೆ ಬೇಕು. ಉತ್ತಮ ಬದುಕು ಸಾಗಿಸಲು ಶರಣರು ಭಕ್ತಿ ಮಾರ್ಗ ತೋರಿದ್ದಾರೆ. ಸ್ವಾಭಿಮಾನದ ಬದುಕು ಪ್ರೀತಿಸುವುದನ್ನು ಕಲಿಸುತ್ತದೆ. ಇನ್ನೊಬ್ಬರಿಗೆ ತೊಂದರೆ ಕೊಡದಂತೆ ಜೀವಿಸುವುದೇ ನಿಜವಾದ ಧರ್ಮವಾಗಿದೆ ಎಂದರು.  

Advertisement

ಶಾಸಕ ಎಂ.ಪಿ.ರವೀಂದ್ರ ಮಾತನಾಡಿ, ದೇವಸ್ಥಾನದಲ್ಲಿ ಶಾಂತಿ, ನೆಮ್ಮದಿ ದೊರೆಯುತ್ತದೆ. ದೇವರ ಅಶೀರ್ವಾದದಿಂದ ಉತ್ತಮ ಮಳೆ ಬಂದು ರೈತರು ಉತ್ತಮ ಬೆಳೆ ಬೆಳೆಯುವಂತಾಗಬೇಕು. ದಾವಣಗೆರೆ ನಗರದಂತೆ ಹರಪನಹಳ್ಳಿ ಪಟ್ಟಣದಲ್ಲಿಯೂ ಸಂಪೂರ್ಣ ಕಾಂಕ್ರಿಟ್‌ ರಸ್ತೆ ನಿರ್ಮಿಸಲು ಅನುದಾನ ಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದೇನೆ.

371ಜೆ ಲಂ ಸೌಲಭ್ಯದಿಂದ ವಂಚಿತರಾಗಿರುವುದರಿಂದ  ವಿಪ ಸದಸ್ಯ ಕೊಂಡಯ್ಯ ಅವರು ತಮ್ಮ ಶೇ.50ರಷ್ಟು ಅನುದಾನದವನ್ನು ಹರಪನಹಳ್ಳಿ ನೀಡುವುದಾಗಿ ಭರವಸೆ ನೀಡಿದ್ದು, ಸದ್ಯ 1 ಕೋಟಿ ರೂ. ಅನುದಾನ ನೀಡಿದ್ದಾರೆ ಎಂದು ತಿಳಿಸಿದರು. ವಿಪ ಸದಸ್ಯ ಕೆ.ಸಿ.ಕೊಂಡಯ್ಯ ಮಾತನಾಡಿ, 

ರೈತರ ಖಾತೆಗೆ ನೇರವಾಗಿ ಬರ ಪರಿಹಾರ ಹಣ ಹೋಗುವಂತೆ ತಂತ್ರಾಂಶ ರಚಿಸಿ ಕೊಟ್ಟಿರುವ ತರಳಬಾಳು ಶ್ರೀಗಳು ಗ್ರಾಮೀಣ ಅಭಿವೃದ್ದಿ ಹಿತದೃಷ್ಟಿಯಿಂದ ಸರ್ಕಾರದ  ಹತ್ತಾರು ಯೋಜನೆಗಳು ಜನರಿಗೆ ಮನವರಿಕೆ ಮಾಡಿಕೊಡುವಂತಹ ತಂತ್ರಾಂಶ ರಚಿಸಿ ಕೊಟ್ಟಲ್ಲಿ ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಜನರಿಗೆ ತಲುಪಿಸಲು ಸಾಧ್ಯವಾಗುತ್ತದೆ ಎಂದು ಶ್ರೀಗಳಲ್ಲಿ ಮನವಿ ಮಾಡಿಕೊಂಡರು.  

Advertisement

Udayavani is now on Telegram. Click here to join our channel and stay updated with the latest news.

Next