Advertisement
ರಾತ್ರಿ ದೇವಸ್ಥಾನ ಆವರಣದಲ್ಲಿ ಭಕ್ತರು ಇರಲು ಅವಕಾಶ ಕೊಡುತ್ತಿಲ್ಲ. ದರ್ಶನ ಮುಗಿಸಿದ ತಕ್ಷಣ ಅಲ್ಲಿಂದ ಕಳುಹಿಸಲಾಗುತ್ತಿದೆ. ವಿರೋಧ ವ್ಯಕ್ತಪಡಿಸಿದರೆ ಬಂಧಿಸಲಾಗುತ್ತಿದೆ ಎಂಬುದೇ ಇದಕ್ಕೆ ಕಾರಣ. ರಾಜ್ಯದಿಂದ ಶಬರಿಮಲೆ ಯಾತ್ರೆ ಕೈಗೊಂಡಿರುವ ಭಕ್ತರು ಅಲ್ಲಿನ ನಿಜ ಸ್ಥಿತಿ ಅರಿಯಲು ಅಯ್ಯಪ್ಪ ದೇವಾಲಯಗಳ ಗುರುಸ್ವಾಮಿಗಳ ಮೊರೆ ಹೋಗಿದ್ದಾರೆ. ಆದರೆ, ಅಲ್ಲಿನ ಪ್ರಸ್ತುತ ವ್ಯವಸ್ಥೆ ಬಗ್ಗೆ ಗುರುಸ್ವಾಮಿಗಳಿಗೂ ಯಾವುದೇ ಮಾಹಿತಿ ಇಲ್ಲ.
Related Articles
ಪ್ರತಿವರ್ಷ ಮುಜರಾಯಿ ಇಲಾಖೆ ವತಿಯಿಂದ ರಾಜ್ಯದಿಂದ ಶಬರಿಮಲೆಗೆ ಹೋಗುವ ಭಕ್ತರಿಗಾಗಿ ಆರೋಗ್ಯ ಸೇವೆಗೆ ತಂಡ ರವಾನೆ, ತುರ್ತು ಸಂದರ್ಭಗಳಲ್ಲಿ ಸಂಪರ್ಕಕ್ಕಾಗಿ ಕರ್ನಾಟಕದ ಪೊಲೀಸರ ನಿಯೋಜನೆ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದಾರೂ ಈ ಬಾರಿ ಯಾವುದೇ ಕ್ರಮ ಆಗಿಲ್ಲ.
Advertisement
ಕರ್ನಾಟಕ ಸೇರಿ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಿಂದ ಪತಿವರ್ಷ 50 ಲಕ್ಷಕ್ಕೂ ಹೆಚ್ಚು ಅಯ್ಯಪ್ಪ ಭಕ್ತರು ಶಬರಿಮಲೆ ಪ್ರವಾಸ ಕೈಗೊಳ್ಳುತ್ತಾರೆ. ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ಉಂಟಾಗಿರುವ ವಿವಾದ, ದೇವಾಲಯ ಆವರಣದಲ್ಲಿ ಉದ್ವಿಗ್ನ ವಾತಾವರಣ ಕುರಿತು ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳಿಂದ ಭಕ್ತ ಸಮೂಹ ಭಯ ಬಿದ್ದಿದೆ.
ಟ್ರಾವೆಂಕೂರ್ ದೇವಸ್ವಂ ಮಂಡಳಿ ಜತೆ ಸಂಪರ್ಕ ಹೊಂದಿರುವ ಬೆಂಗಳೂರಿನ ಕೆಲವು ಅಯ್ಯಪ್ಪ ದೇವಾಲಯಗಳ ಗುರುಸ್ವಾಮಿಗಳು ಅಲ್ಲಿನ ಮುಖ್ಯ ಅರ್ಚಕರನ್ನು ಸಂಪರ್ಕಸಿದಾಗ, ಭಕ್ತರಿಗೆ ಏನೂ ತೊಂದರೆ ಇಲ್ಲ, ಕಳುಹಿಸಿ ಎಂದು ಅಭಯ ನೀಡಿದ್ದಾರೆ. ಆದರೆ, ಎರಡು ದಿನಗಳ ಹಿಂದೆ ರಾತ್ರಿ ದೇವಸ್ಥಾನ ಆವರಣದಲ್ಲಿ ಭಕ್ತರು ಇರಲು ಬಿಟ್ಟಿಲ್ಲ. ವಿರೋಧಿಸಿದ ಕೆಲವರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಯಾತ್ರೆ ಕೈಗೊಂಡಿರುವವರಲ್ಲಿ ಆತಂಕ ಹೆಚ್ಚಿಸಿದೆ.
ತಗ್ಗಿದ ಬೇಡಿಕೆಈ ನಡುವೆ, ಶಬರಿಮಲೆಯಲ್ಲಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಭಕ್ತರು ಈ ವರ್ಷ ಶಬರಿಮಲೆಗೆ ಹೋಗುವ ಭಕ್ತರ ಸಂಖ್ಯೆಯೂ ಇಳಿಮುಖವಾಗಿದೆ. ಬಾಡಿಗೆ ವಾಹನ ಮುಂಗಡ ಕಾಯ್ದಿರಿಸುವವರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ ಎಂದು ಟ್ಯಾಕ್ಸಿ ಮಾಲೀಕರ ಸಂಘದವರು ಹೇಳುತ್ತಾರೆ.
ಟ್ಯಾಕ್ಸೂ ಹೆಚ್ಚಳ
ಶಬರಿಮಲೆಗೆ ಕರ್ನಾಟಕದಿಂದ ಹೋಗುವ ಟ್ಯಾಕ್ಸಿ , ಮಿನಿ ಬಸ್ ಸೇರಿದಂತೆ ಆಲ್ ಇಂಡಿಯಾ ಪರ್ಮಿಟ್ ಹೊಂದಿರುವ ವಾಹನಗಳಿಗೂ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ ಎಂಬುದು ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಅವರ ಆರೋಪ. 2014-15, 2015-16 ನೇ ಸಾಲಿನಲ್ಲಿ ಶಬರಿಮಲೆಗೆ ಹೋಗಿದ್ದರೆ ಆಗ ವಾರದ ಮಟ್ಟಿಗೆ ಶುಲ್ಕ ನೀಡಿ ಪರ್ಮಿಟ್ ಪಡೆದಿದ್ದರೂ ಇದೀಗ ಅದಕ್ಕೆ ದಂಡದ ರೂಪದಲ್ಲಿ ಸಾವಿರಾರು ರೂಪಾಯಿ ಸಂಗ್ರಹಿಸಲಾಗುತ್ತಿದೆ. ಇದೇ ಮೊದಲ ಬಾರಿ ಕೇರಳಕ್ಕೆ ಹೋಗುವ ಸ್ಟೇಟ್ ಪರ್ಮಿಟ್ ಬಾಡಿಗೆ ವಾಹನಗಳಿಗೂ ವಾರದ ಮಟ್ಟಿಗೆ ಪರ್ಮಿಟ್ ನೀಡಿ ತೆರಿಗೆ ಪಡೆಯಲಾಗುತ್ತಿದೆ. ಸಚಿವರ ಅಭಯ
ಕರ್ನಾಟಕದಿಂದ ಶಬರಿಮಲೆ ಯಾತ್ರೆ ಕೈಗೊಳ್ಳುವ ಭಕ್ತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವ ರಾಜಶೇಖರ ಪಾಟೀಲ್ ಹುಮ್ನಾಬಾದ್ ಅಭಯ ನೀಡಿದ್ದಾರೆ. ಆ ನಿಟ್ಟಿನಲ್ಲಿ ಕೇರಳ ಮುಖ್ಯಮಂತ್ರಿಯವರ ಜತೆಯೂ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ. ಮುಜರಾಯಿ ಇಲಾಖೆಯಿಂದಲೂ ಅಯ್ಯಪ್ಪ ಭಕ್ತರ ಅನುಕೂಲಕ್ಕಾಗಿ ಸಹಾಯವಾಣಿ ಸ್ಥಾಪನೆ, ವೈದ್ಯರ ತಂಡ ಕಳುಹಿಸುವುದು, ಭದ್ರತೆ ಪೊಲೀಸ್ ಹಾಗೂ ಗೃಹರಕ್ಷಕ ದಳ ಸಿಬ್ಬಂದಿ ನಿಯೋಜನೆ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಪ್ರತಿವರ್ಷದಂತೆ ಈ ವರ್ಷವೂ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಗುರುವಾರ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದೇನೆ ಎಂದು ಹೇಳಿದ್ದಾರೆ. – ಎಸ್. ಲಕ್ಷ್ಮಿನಾರಾಯಣ