ಮಂಗಳೂರು/ ಉಡುಪಿ: ರಜಾದಿನಗಳ ಕಾರಣ ಕರಾವಳಿಯ ದೇವಸ್ಥಾನಗಳಲ್ಲಿ ಶನಿವಾರ ಮತ್ತು ರವಿವಾರ ಭಾರೀ ಜನಸಂದಣಿ ಕಂಡುಬಂತು. ಕೊಲ್ಲೂರು, ಧರ್ಮಸ್ಥಳ, ಸುಬ್ರಹ್ಮಣ್ಯ, ಉಡುಪಿ ದೇವಸ್ಥಾನಗಳಲ್ಲಿ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.
ಕೊಲ್ಲೂರಿನಲ್ಲಿ ರವಿವಾರ ಅಪಾರ ಸಂಖ್ಯೆಯ ಭಕ್ತರು ಶ್ರೀ ದೇವಿಯ ದರ್ಶನ ಪಡೆದರು. ಶನಿವಾರ ಹಾಗೂ ರವಿವಾರದಂದು 20,000ಕ್ಕೂ ಮಿಕ್ಕಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಜನಸಂದಣಿ ನಿಯಂತ್ರಿಸುವಲ್ಲಿ ಸಿಬಂದಿ ಹರಸಾಹಸಪಡಬೇಕಾಯಿತು. ವಾಹನ ನಿಲುಗಡೆ ಹಾಗೂ ರಸ್ತೆ ಸಂಚಾರ ಸ್ವಲ್ಪ ಕಾಲ ಅಸ್ತವ್ಯಸ್ತಗೊಂಡಿತು.
ಉಡುಪಿ ಶ್ರೀಕೃಷ್ಣ ಮಠದಲ್ಲಿಯೂ ಪರ ರಾಜ್ಯಗಳು, ಪರವೂರುಗಳಿಂದ ಬಂದ ಮತ್ತು ಸ್ಥಳೀಯ ಭಕ್ತರು ಅಪಾರ ಸಂಖ್ಯೆಯಲ್ಲಿ ದೇವರ ದರ್ಶನ ಪಡೆದರು.
ಸುಬ್ರಹ್ಮಣ್ಯದಲ್ಲಿ ಶನಿವಾರ ಮತದಾನ ಹಿನ್ನೆಲೆಯಲ್ಲಿ ಜನಸಂದಣಿ ಕಡಿಮೆ ಇತ್ತಾದರೆ ರವಿವಾರ ಸಾಕಷ್ಟು ಭಕ್ತಸಂದಣಿ ಕಂಡುಬಂದಿತು. ಕಟೀಲು ದೇವಸ್ಥಾನದಲ್ಲಿ 90 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮವೂ ಇದ್ದು, ಭಾರೀ ಜನಸಂದಣಿ ಏರ್ಪಟ್ಟಿತ್ತು. ಸಂಚಾರ ಸ್ವಲ್ಪ ಕಾಲ ಬಾಧಿತವಾಗಿತ್ತು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ರವಿವಾರ ಜನಸಂದಣಿ ಕಂಡುಬಂದಿತು. ಚುನಾವಣೆ ರಜೆ, ರವಿವಾರದ ರಜೆ ಜತೆಗೆ ಸೋಮವಾರ ವೃಷಭ ಸಂಕ್ರಮಣ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದರು.