Advertisement

ಅಗಲ ಕಿರಿದಾದ ಕಡಬ-ಪಂಜ ರಸ್ತೆಯ ಅಭಿವೃದ್ಧಿ ಆರಂಭ

05:21 PM Nov 08, 2017 | Team Udayavani |

ಕಡಬ: ಸುಳ್ಯ ತಾಲೂಕಿನಿಂದ ಪ್ರಸ್ತಾವಿತ ಕಡಬ ತಾಲೂಕನ್ನು ಸಂಪರ್ಕಿಸುವ ಪ್ರಮುಖ ಜಿಲ್ಲಾ ರಸ್ತೆಯಾಗಿರುವ ಕಡಬ-ಪಂಜ ರಸ್ತೆಯನ್ನು ವಿಸ್ತರಿಸಿ ಉನ್ನತೀಕರಿಸುವ ಕಾಮಗಾರಿ ಆರಂಭಗೊಂಡಿದ್ದು, ಪರಿಸರದ ಜನರ ಬಹುಕಾಲದ ಬೇಡಿಕೆಯೊಂದು ಈಡೇರುತ್ತಿದೆ.

Advertisement

ಹಲವು ಸಮಯದ ಬೇಡಿಕೆ
ಕಡಬದಿಂದ ಪಂಜ, ನಿಂತಿಕಲ್‌, ಬೆಳ್ಳಾರೆ ಮೂಲಕ ಸುಳ್ಯಕ್ಕೆ ಪ್ರಯಾಣಿಸುವ ಜನರಿಗೆ ಕಡಬ-ಪಂಜ ನಡುವಿನ ಪ್ರಯಾಣ ಅತ್ಯಂತ ತ್ರಾಸದಾಯಕ ಪ್ರಯಾಣ ಎನ್ನುವ ಕಾರಣದಿಂದಾಗಿ ಈ ರಸ್ತೆಯ ಅಭಿವೃದ್ಧಿಗೆ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿಗಳನ್ನು ಸಲ್ಲಿಸಲಾಗಿತ್ತು. ಅಗಲ ಕಿರಿದಾದ ಈ ರಸ್ತೆಯಲ್ಲಿ ವಾಹನ ಚಲಾಯಿಸಲು ಚಾಲಕರು ಹರಸಾಹಸ ಪಡಬೇಕಾಗಿತ್ತು. ಈಗಾಗಲೇ ಪಂಜದಿಂದ ಬೆಳ್ಳಾರೆ ಮೂಲಕ ಸುಳ್ಯದತ್ತ ಸಂಚರಿಸುವ ರಸ್ತೆಗಳು ಅಭಿವೃದ್ಧಿಯಾಗಿದ್ದು, ಇದೀಗ ಕಡಬ-ಪಂಜ ರಸ್ತೆಯೂ ಅಭಿವೃದ್ಧಿಗೊಳ್ಳುತ್ತಿರುವುದು ಈ ರಸ್ತೆಯ ಮೂಲಕ ದಿನಂಪ್ರತಿ ಸಂಚರಿಸುವ ಜನರಿಗೆ ಖುಷಿ ತಂದಿದೆ.

ಕಡಬದಿಂದ ಪಂಜವನ್ನು ಸಂಪರ್ಕಿಸುವ 9.7 ಕಿ.ಮೀ. ಉದ್ದದ ರಸ್ತೆಯಲ್ಲಿ ಕಡಬದಿಂದ ಕೋಡಿಂಬಾಳದ ಓಂತ್ರಡ್ಕ ಶಾಲೆಯ ತನಕ (2.4 ಕಿ.ಮೀ) ರೂ. 1.2 ಕೋಟಿ ಅನುದಾನದಲ್ಲಿ ರಸ್ತೆಯನ್ನು ಈಗಾಗಲೇ ವಿಸ್ತರಿಸಿ ಅಭಿವೃದ್ಧಿಪಡಿಸಲಾಗಿದೆ.  ಇದೀಗ 5.7 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಗೊಳಿಸಲು 4 ಕೋಟಿ ರೂ. ಅನುದಾನ ಬಿಡುಗಡೆಯಾಗಿ ಕಾಮಗಾರಿ ಆರಂಭಗೊಂಡಿದೆ. ಈ ಕಾಮಗಾರಿ ಮುಗಿಯುವ ವೇಳೆಗೆ ಪಂಜವನ್ನು ಸೇರುವ ಹಂತದಲ್ಲಿ ಬಾಕಿ ಉಳಿಯುವ 1.5 ಕಿ.ಮೀ. ರಸ್ತೆಯನ್ನು ವಿಸ್ತರಿಸಿ ಅಭಿವೃದ್ಧಿಪಡಿಸುವುದಕ್ಕಾಗಿ 1 ಕೋಟಿ ರೂ. ಅನುದಾನ ವ್ಯವಸ್ಥೆಗೊಳಿಸಲಾಗುವುದು ಎಂದು ಶಾಸಕ ಅಂಗಾರ ಅವರು ತಿಳಿಸಿದ್ದಾರೆ.

ನಿತ್ಯ ಸಂಚಾರಿಗಳಿಗೆ ಸಂತಸ
ಅಗಲ ಕಿರಿದಾದ ಸದ್ರಿ ರಸ್ತೆಯಲ್ಲಿ ಸಂಚರಿಸುವುದು ಬಹಳ ತ್ರಾಸದ ವಿಚಾರವಾಗಿತ್ತು. ದ್ವಿಚಕ್ರ ವಾಹನ ಸವಾರರಂತೂ ಬಹಳ ಕಷ್ಟದಿಂದ ಸಂಚರಿಸುವ ಪರಿಸ್ಥಿತಿ. ಪಂಜದಿಂದ ಕಡಬಕ್ಕೆ ದಿನಂಪ್ರತಿ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಸಂಚರಿಸುತ್ತಾರೆ. ಶಾಲಾ ವಾಹನಗಳು, ಸರಕಾರಿ ಬಸ್‌ ಹಾಗೂ ಖಾಸಗಿ ವಾಹನಗಳು ನಿರಂತರವಾಗಿ ಸಂಚರಿಸುವ ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಹಲವಾರು ಬಾರಿ ಮನವಿಗಳನ್ನು ಸಲ್ಲಿಸಲಾಗಿತ್ತು. ಅಭಿವೃದ್ಧಿಯಾಗುತ್ತಿರುವುದು ಈ ರಸ್ತೆಯಲ್ಲಿ ನಿತ್ಯ ಸಂಚರಿಸುವ ನಮ್ಮಂತಹ ಉದ್ಯೋಗಿಗಳಿಗೆ ಖುಶಿ ತಂದಿದೆ ಎಂದು ಶಿಕ್ಷಕ ಸತೀಶ್‌ ಪಂಜ ಅವರು ಅಭಿಪ್ರಾಯ ಹಂಚಿಕೊಂಡರು.

ಬಾಕಿ ಅನುದಾನ ಶೀಘ್ರ ಬಿಡುಗಡೆ
ಈಗಾಗಲೇ ಕಳೆದ ಅವಧಿಯಲ್ಲಿ ಕಡಬದಿಂದ ಕೋಡಿಂಬಾಳದ ಮಡ್ಯಡ್ಕದ ತನಕ ಕಡಬ-ಪಂಜ ರಸ್ತೆಯನ್ನು ವಿಸ್ತರಿಸಿ ಅಭಿವೃದ್ಧಿಗೊಳಿಸಲಾಗಿದೆ. ಇನ್ನು ಬಾಕಿ ಉಳಿದಿರುವ 7.2 ಕಿ.ಮೀ. ಉದ್ದದ ರಸ್ತೆಯನ್ನು ಒಟ್ಟು 5 ಕೋಟಿ ರೂ. ಅನುದಾನದಲ್ಲಿ ವಿಸ್ತರಿಸಿ, ಏರು ರಸ್ತೆಯನ್ನು ತಗ್ಗುಗೊಳಿಸಿ, ತಿರುವುಗಳನ್ನು ಸರಿಪಡಿಸಿ ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ 4 ಕೋಟಿ. ರೂ. ಅನುದಾನ ಬಿಡುಗಡೆಯಾಗಿ ಕಾಮಗಾರಿ ಆರಂಭಗೊಂಡಿದೆ. ಪಂಜ ಕಡೆಯಿಂದ ಬಾಕಿ ಉಳಿಯುವ 1.5 ಕಿ.ಮೀ. ಉದ್ದ ರಸ್ತೆಯನ್ನು ಅಭಿವೃದ್ಧಿಗೊಳಿಸಲು 1 ಕೋಟಿ. ರೂ. ಅನುದಾನ ಶೀಘ್ರ ಬಿಡುಗಡೆಯಾಗಲಿದೆ.
ಎಸ್‌. ಅಂಗಾರ,
   ಸುಳ್ಯ ಶಾಸಕ

Advertisement

3 ತಿಂಗಳಲ್ಲಿ ಕಾಮಗಾರಿ ಪೂರ್ತಿ
ರಸ್ತೆಯಲ್ಲಿನ ತಿರುವುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ನೇರಗೊಳಿಸಿ ಏರು ರಸ್ತೆಯನ್ನು ತಗ್ಗುಗೊಳಿಸಿ 5.5 ಮೀ. ವಿಸ್ತರಿಸಿ ರಸ್ತೆ ನಿರ್ಮಿಸಲಾಗುವುದು. ಕೋಡಿಂಬಾಳ ಮತ್ತು ಪುಳಿಕುಕ್ಕು ಸೇತುವೆಯ ನಡುವೆ ಬರುವ ಮುರಚೆಡವಿನ ತಿರುವನ್ನು ನೇರಗೊಳಿಸಿ ಏರುರಸ್ತೆಯನ್ನು ತಗ್ಗಿಸಲಾಗುವುದು. ಈಗಾಗಲೇ ಮಣ್ಣಿನ ಕೆಲಸಗಳು ಭರದಿಂದ ನಡೆಯುತ್ತಿವೆ. 3 ತಿಂಗಳೊಳಗೆ ಕಾಮಗಾರಿ ಪೂರ್ತಿಗೊಳಿಸುವ ಗುರಿ ಇರಿಸಿಕೊಳ್ಳಲಾಗಿದೆ. ರಸ್ತೆಯ ಅಕ್ಕಪಕ್ಕದಲ್ಲಿ ಜಮೀನು ಹೊಂದಿರುವವರು ಕಾಮಗಾರಿಗೆ ಪೂರಕವಾಗಿ ಸ್ಪಂದಿಸಿ ಸಹಕರಿಸಿದರೆ ಮುಂದಿನ ಜನವರಿ ತಿಂಗಳ ಕೊನೆಗೆ ಕಾಮಗಾರಿ ಮುಗಿದು ಸುಂದರ ರಸ್ತೆ ನಿರ್ಮಾಣಗೊಳ್ಳಲಿದೆ.
ಸಣ್ಣೇಗೌಡ,
  ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಸುಳ್ಯ

 ನಾಗರಾಜ್‌ ಎನ್‌.ಕೆ. ಕಡಬ

Advertisement

Udayavani is now on Telegram. Click here to join our channel and stay updated with the latest news.

Next