Advertisement

ದೇಶದ ಅಭಿವೃದ್ಧಿ ಪ್ರತಿಯೋರ್ವ ಪ್ರಜೆಯ ಕರ್ತವ್ಯವಾಗಲಿ: ಚಂದ್ರಹಾಸ್‌ ಕೆ. ಶೆಟ್ಟಿ

03:32 PM Feb 05, 2021 | Team Udayavani |

ಮುಂಬಯಿ, ಫೆ. 4: ಕೊರೊನಾ ಮುಕ್ತಗೊಂಡು ದೇಶ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ದೇಶದ ಪ್ರಗತಿಗಾಗಿ ಪ್ರತಿಯೊಬ್ಬರು ಸಹಕರಿಸಬೇಕು. ತೆರಿಗೆಯನ್ನು ತಪ್ಪದೆ ಎಲ್ಲರೂ ಕಟ್ಟಿದ್ದಾಗ ಮಾತ್ರ ದೇಶದ ಉನ್ನತಿ ಸಾಧ್ಯ. ಭಾರತವು ಇಂದು ಆತ್ಮನಿರ್ಭರದತ್ತ ಸಾಗುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದೆ. ತೆರಿಗೆಯನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದಾಗ ನಮಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ. ಬಂಟರ ಸಂಘವು ಸಿಎ ಫೋರಂ ಆಫ್‌ ಮುಂಬಯಿ ಬಂಟ್ಸ್‌ ಚಾರ್ಟೆಡ್‌ ಅಕೌಂಟೆಂಟ್ಸ್‌ ಸಂಸ್ಥೆಯ ಎಲ್ಲ ಕಾರ್ಯಕ್ರಮಗಳಿಗೆ ಸಹಕರಿಸಲು ಬದ್ಧವಾಗಿದೆ. ನಾವೆಲ್ಲರೂ ದೇಶಾಭಿಮಾನ ವನ್ನು ಬೆಳೆಸಿಕೊಂಡು, ನಮ್ಮ ಮಕ್ಕಳಿಗೆ ಅದನ್ನು ಕಲಿಸಿ, ಅವರನ್ನು ಸುಸಂಸ್ಕೃತರನ್ನಾಗಿ ಮುನ್ನಡೆಸಬೇಕು ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ ತಿಳಿಸಿದರು.

Advertisement

ಫೆ. 2ರಂದು ಕುರ್ಲಾ ಪೂರ್ವದ ಬಂಟರ ಭವನದ ಸಭಾಗೃಹದಲ್ಲಿ ನಡೆದ ಸಿಎ ಫೋರಮ್‌ ಆಫ್‌ ಮುಂಬಯಿ ಬಂಟ್ಸ್‌ ಚಾರ್ಟೆಡ್‌ ಅಕೌಂಟೆಂಟ್ಸ್‌ ಇದರ ವಾರ್ಷಿಕ
ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಅನಲೈಸಿಸ್‌ ಆಫ್‌ ಯೂನಿಯನ್‌ ಬಜೆಟ್‌ 2021 ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಬಂಟರ ಸಂಘದ ಸಾಧನೆಗಳನ್ನು ವಿವರಿಸಿ, ಅಲ್ಲದೆ 2020ನೇ ಸಾಲಿನ ಟೈಮ್ಸ್‌ ಮೆನ್ಸ್‌ ಆಫ್‌ ದ ಇಯರ್‌ ಪ್ರಶಸ್ತಿಯನ್ನು ಪಡೆದ ಹಿರಿಯ ಲೆಕ್ಕಪರಿಶೋಧಕ ಸಿಎ ಎನ್‌. ಬಿ. ಶೆಟ್ಟಿ ಅವರ ಸಾಧನೆಯನ್ನು ಶ್ಲಾಘಿಸಿದರು.

ಸಮಾರಂಭದಲ್ಲಿ ಸಿಎ ಫೋರಮ್‌ ಆಫ್‌ ಮುಂಬಯಿ ಬಂಟ್ಸ್‌ ಚಾರ್ಟೆಡ್‌ ಅಕೌಂಟೆಂಟ್ಸ್‌ ಇದರ ಅಧ್ಯಕ್ಷ ಕೆ. ಸಿ. ಶೆಟ್ಟಿ, ಆಹಾರ್‌ನ ಮಾಜಿ ಉಪಾಧ್ಯಕ್ಷ ಕೃಷ್ಣ ವಿ. ಶೆಟ್ಟಿ, ಸಿಎ ಫೋರಮ್‌ ಆಫ್‌ ಮುಂಬಯಿ ಬಂಟ್ಸ್‌ ಚಾರ್ಟೆಡ್‌ ಅಕೌಂಟೆಂಟ್ಸ್‌ ಇದರ ಉಪಾಧ್ಯಕ್ಷ ಸಿಎ ವಿಶ್ವನಾಥ್‌ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಅಶೋಕ್‌ ಶೆಟ್ಟಿ, ಕೋಶಾಧಿಕಾರಿ ಸುದೇಶ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನೇರ ತೆರಿಗೆ ವಿಷಯದ ಮೇಲೆ ಸಿಎ ರಾಜೇಶ್‌ ಸಾಂಘಿ ಮಾಹಿತಿ ನೀಡಿದರು. ಪರೋಕ್ಷ ತೆರಿಗೆಯ ಬಗ್ಗೆ ನ್ಯಾಯವಾದಿ ಪ್ರಭಾಕರ್‌ ಶೆಟ್ಟಿ ವಿವರಿಸಿದರು. ಅತಿಥಿಗಳು ಮತ್ತು ಸಿಎ ಫೋರಮ್‌ ಆಫ್‌ ಮುಂಬಯಿ ಬಂಟ್ಸ್‌ ಚಾರ್ಟೆಡ್‌ ಅಕೌಂಟೆಂಟ್ಸ್‌ ಸಂಸ್ಥೆಯ ಪದಾಧಿಕಾರಿಗಳು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಉಪಾಧ್ಯಕ್ಷ ಸಿಎ ವಿಶ್ವನಾಥ್‌ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಹಲವಾರು
ವರ್ಷಗಳಿಂದ ಸಿಎ ಫೋರಮ್‌ ಆಫ್ ಮುಂಬಯಿ ಬಂಟ್ಸ್‌ ಚಾರ್ಟೆಡ್‌ ಅಕೌಂಟೆಂಟ್ಸ್‌ ಸಂಸ್ಥೆಯು ಸಮಾಜಪರ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜ ಬಾಂಧವರ ಪ್ರೀತಿ, ಗೌರವಕ್ಕೆ ಪಾತ್ರವಾಗಿದೆ. ಸಂಸ್ಥೆಯ ಬಂಟ ಲೆಕ್ಕಪರಿಶೋಧಕರ ಒಗ್ಗಟ್ಟಿನ ಪ್ರತೀಕವಾಗಿ ಕಾರ್ಯನಿರ್ವಹಿಸುತ್ತಿದೆ. ಯಾವುದೇ ಸಂಘಟನೆಯಲ್ಲಿ ಸದಸ್ಯರು ಹೆಚ್ಚಿದಾಗ ಸಂಸ್ಥೆಯು ಬಲಾಡ್ಯಗೊಳ್ಳುತ್ತದೆ. ಸಂಸ್ಥೆಯ ಬಲವರ್ಧನೆಗೆ ಸಹಕರಿಸಿದ ಎಲ್ಲ ಬಾಂಧವರಿಗೂ ವಂದನೆಗಳು ಎಂದರು.

ಇದೇ ಸಂದರ್ಭದಲ್ಲಿ ಫೀಲ್ಡ್‌ ಆಫ್‌ ಅಡಿಟ್‌ ಆ್ಯಂಡ್‌ ಫೈನಾನ್ಶಿಯಲ್‌ ಕನ್ಸ ಲ್ಟೆಂಟ್‌ನಲ್ಲಿ ಟೈಮ್ಸ್‌ ಮ್ಯಾನ್‌ ಅಫ್‌ ದ ಇಯರ್‌ 2020 ಅವಾರ್ಡ್‌ ಸ್ವೀಕರಿಸಿದ ನಗರದ ಲೆಕ್ಕಪರಿಶೋಧಕರಾದ ಉದ್ಯಮಿ ಸಿಎ ಎನ್‌. ಬಿ. ಶೆಟ್ಟಿ ಅವರನ್ನು ಅಭಿನಂದಿಸಿ ಸಮ್ಮಾನಿಸಲಾಯಿತು. ಅಲ್ಲದೆ ಬಂಟರ ಸಂಘ ಮುಂಬಯಿ ನೂತನ ಅಧ್ಯಕ್ಷರಾಗಿ
ನೇಮಕಗೊಂಡ ಚಂದ್ರಹಾಸ್‌ ಕೆ. ಶೆಟ್ಟಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕೆ. ಸಿ. ಶೆಟ್ಟಿ, ಕೃಷ್ಣ ವಿ. ಶೆಟ್ಟಿ, ನ್ಯಾಯವಾದಿ ಪ್ರಭಾಕರ್‌ ಶೆಟ್ಟಿ, ಸಿಎ ರಾಜೇಶ್‌ ಸಾಂಗ್ವಿ ಅವರನ್ನು ಗೌರವಿಸಲಾಯಿತು.

Advertisement

ಬಂಟರ ಸಂಘ ಮುಂಬಯಿ, ಇಂಡಿಯನ್‌ ಬಂಟ್ಸ್‌ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟೀಸ್‌ ಹಾಗೂ ಇಂಡಿಯನ್‌ ಹೊಟೇಲ್‌ ಆ್ಯಂಡ್‌ ರೆಸ್ಟೋರೆಂಟ್‌ ಅಸೋಸಿಯೇಶನ್‌ ಆಹಾರ್‌ ಮೊದಲಾದ ಸಂಸ್ಥೆಗಳ ಸಹಯೋಗ ದಲ್ಲಿ ಕಾರ್ಯಕ್ರಮವನ್ನು ಆಯೋಜಿಸ ಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಗರದ ವಿವಿಧ ಸಂಘಟನೆಗಳ ಪದಾಧಿಕಾರಿ ಗಳನ್ನು ಗೌರವಿಸಲಾಯಿತು.

ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಅಶೋಕ್‌ ಶೆಟ್ಟಿ ಮತ್ತು ಕೋಶಾಧಿಕಾರಿ ಸಿಎ ಸುದೇಶ್‌ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಿಎ ವಿಶ್ವನಾಥ್‌ ಶೆಟ್ಟಿ ವಂದಿಸಿದರು. ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಬಂಟರ ಸಂಘ ಮುಂಬಯಿ, ಇಂಡಿಯನ್‌ ಬಂಟ್ಸ್‌ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀಸ್‌, ಇಂಡಿಯನ್‌ ಹೊಟೇಲ್‌ ಆ್ಯಂಡ್‌ ರೆಸ್ಟೋರೆಂಟ್‌ ಅಸೋಸಿಯೇಶನ್‌ ಆಹಾರ್‌ ಮೊದಲಾದ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸದಸ್ಯ ಬಾಂಧವರು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

‌ಸಮ್ಮಾನ ಜವಾಬ್ದಾರಿ ಹೆಚ್ಚಿಸಿದೆ
ಸಮ್ಮಾನ ಸ್ವೀಕರಿಸಿದ ಸಿಎ ಎನ್‌. ಬಿ. ಶೆಟ್ಟಿ ಮಾತನಾಡಿ, ಮುಂಬಯಿಯಂತಹ ಮಹಾನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ಲೆಕ್ಕಪರಿಶೋಧಕನಾಗಿ, ಉದ್ಯಮಿಯಾಗಿ ತುಳು, ಕನ್ನಡಿಗರು ಹಾಗೂ ಇತರ ಸಮಾಜ ಬಾಂಧವರ ಸೇವೆಗೈದಿದ್ದೇನೆ. ಬಂಟರ ಸಂಘ ಮುಂಬಯಿ ಉನ್ನತ ಶಿಕ್ಷಣ ಯೋಜನೆಯ ಕಾರ್ಯಾಧ್ಯಕ್ಷನಾಗಿ, ಸಂಘದ ಇತರ ಸಮಿತಿಗಳಲ್ಲಿ ಪದಾಧಿಕಾರಿಯಾಗಿ ಶ್ರಮಿಸಿದ್ದೇನೆ. ಅನೇಕ ಸಂಘರ್ಷಗಳ ಹಾದಿಯನ್ನು ತುಳಿದು ಮುನ್ನಡೆದಾಗ ಸಮಾಜ ಹಾಗೂ ಇತರರು ನಮ್ಮನ್ನು ಗುರುತಿಸುತ್ತಾರೆ. ನನ್ನ ಸಾಧನೆಗೆ ಟೈಮ್ಸ್‌ ಮೆನ್ಸ್‌ ಆಫ್‌ ಇಯರ್‌ ಪುರಸ್ಕಾರ ಲಭಿಸಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಇದರೊಂದಿಗೆ ಸಿಎ ಫೋರಮ್‌ ಆಫ್‌ ಮುಂಬಯಿ ಬಂಟ್ಸ್‌ ಚಾರ್ಟೆಡ್‌ ಅಕೌಂಟೆಂಟ್ಸ್‌ ಸಂಸ್ಥೆಯು ಮಾಡಿದ ಸಮ್ಮಾನ ಜವಾಬ್ದಾರಿಯನ್ನು ಹೆಚ್ಚಿಸಿದೆ. ನನ್ನ ಸಾಧನೆಯನ್ನು ಗುರುತಿಸಿದ ನಿಮಗೆಲ್ಲರಿಗೂ ಕೃತಜ್ಞತೆಗಳು. ಸಂಸ್ಥೆಗೆ ನನ್ನಿಂದಾಗುವ ಎಲ್ಲ ರೀತಿಯ ಸಹಕಾರ ನೀಡಲು ಬದ್ಧನಾಗಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next