Advertisement

ಅಭಿವೃದ್ಧಿ ಸೋಗಲ್ಲಿ ಪರಿಸರ ನಾಶ ಸಲ್ಲ

02:54 PM Dec 09, 2018 | Team Udayavani |

ದಾವಣಗೆರೆ: ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಮಾಡುವ ಬದಲು ವೈಜ್ಞಾನಿಕವಾಗಿ ಅಭಿವೃದ್ಧಿ ಕಂಡುಕೊಳ್ಳುವ ಬಗ್ಗೆ ವಿದ್ಯಾರ್ಥಿಗಳು ಆವಿಷ್ಕಾರಗಳಲ್ಲಿ ತೊಡಗಬೇಕಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ ಹೇಳಿದ್ದಾರೆ.

Advertisement

ಶನಿವಾರ, ಶಿರಮಗೊಂಡನಹಳ್ಳಿ ಗ್ರಾಮದ ಅನ್‌ ಮೋಲ್‌ ಶಾಲೆಯಲ್ಲಿ ರಾಜ್ಯ ವಿಜ್ಞಾ ನ ಪರಿಷತ್‌ ಜಿಲ್ಲಾ ಸಮಿತಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ 26ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಉದ್ಘಾಟಿಸಿ, ಅವರು ಮಾತನಾಡಿದರು.
 
ಪ್ರಪಂಚದಲ್ಲಿ ಕೋಟ್ಯಾಂತರ ಪ್ರಾಣಿ, ಪಕ್ಷಿಗಳು ಹುಟ್ಟುತ್ತಿದ್ದರೂ ಅವು ಯಾವುದೇ ರೀತಿ ನಿಸರ್ಗ ಹಾಗೂ ಮನುಷ್ಯನಿಗೆ ತೊಂದರೆ ಕೊಡುತ್ತಿಲ್ಲ. ಆದರೆ, ಬುದ್ಧಿಜೀವಿ ಮಾನವ ತನ್ನ ಸ್ವಾರ್ಥಕ್ಕಾಗಿ ಪಕೃತಿಗೆ ಹಾನಿ ಮಾಡುತ್ತಿದ್ದಾನೆ. ಇದರಿಂದ ಸಾಕಷ್ಟು ಸಮಸ್ಯೆಗಳು ಉಲ್ಬಣ ಆಗುವುದರಿಂದ ಮೊದಲು ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ಹಾಳು ಮಾಡುವುದನ್ನು ನಿಲ್ಲಿಸಬೇಕು. ಅಭಿವೃದ್ಧಿ ಕೆಲಸಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳುವ ಬಗ್ಗೆ ಚಿಂತನೆ ನಡೆಯಬೇಕು ಎಂದರು.

ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಆತ್ಮವಿಶ್ವಾಸವಿಟ್ಟು ಸರಿಯಾದ ಮಾರ್ಗದರ್ಶನ ಪಡೆದು ಹೊಸ ಆವಿಷ್ಕಾರಕ್ಕೆ ಒತ್ತು ನೀಡಬೇಕು. ಸ್ವತ್ಛ ಹಸಿರು ಮತ್ತು ಆರೋಗ್ಯವಂತ ರಾಷ್ಟ್ರ ನಿರ್ಮಾಣಕ್ಕಾಗಿ ವಿಜ್ಞಾನ, ತಂತ್ರಜ್ಞಾನದ ಮೂಲಕ ಉತ್ತಮ ಆವಿಷ್ಕಾರಗಳನ್ನು ಮಾಡುವ ಮೂಲಕ ರಾಜ್ಯ, ರಾಷ್ಟ್ರಮಟ್ಟದಲ್ಲಿ ಜಿಲ್ಲೆಗೆ ಕೀರ್ತಿ ತರುವ ಕೆಲಸವಾಗಬೇಕು ಎಂದು ಹೇಳಿದರು.

ಜಿಲ್ಲಾ ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್‌ ಮಾತನಾಡಿ, ಸ್ವತ್ಛತೆ, ಹಸಿರು, ಆರೋಗ್ಯಕ್ಕೆ ಸಂಬಂಧಿಸಿದಂತೆ ವಿಜ್ಞಾನ, ತಂತ್ರಜ್ಞಾನದ ಆವಿಷ್ಕಾರಗಳು ಹೆಚ್ಚೆಚ್ಚು ಆಗಬೇಕು. ಆ ಮೂಲಕ ದೇಶವನ್ನು ಆರೋಗ್ಯಪೂರ್ಣವಾಗಿಡಲು ಯುವ ವಿಜ್ಞಾನಿಗಳು ಶ್ರಮಿಸಬೇಕು. ಸ್ಥಳೀಯವಾಗಿ ಮನೆ ಕಸ, ಆಸ್ಪತ್ರೆ, ಕೈಗಾರಿಕಾ ತ್ಯಾಜ್ಯ ಮರು ಬಳಕೆ ಕೇಂದ್ರ ಸ್ಥಾಪನೆ ಮಾಡುವ ಕಾರ್ಯ ಆಗಬೇಕಿದೆ ಎಂದರು.

ರಾಜ್ಯದಲ್ಲಿ ಪ್ರತಿನಿತ್ಯ 15 ಸಾವಿರ ಟನ್‌ನಷ್ಟು ತ್ಯಾಜ್ಯ ಉತ್ಪತ್ತಿ ಆಗುತ್ತಿದ್ದು, ಆದರ ಮರು ಬಳಕೆ ಪ್ರಮಾಣ ಕೇವಲ 4 ಸಾವಿರ ಟನ್‌ನಷ್ಟು ಮಾತ್ರ ಆಗುತ್ತಿದೆ. ಉಳಿದ ಕಸವೆಲ್ಲ ಗುಂಡಿಗಳು ಸೇರಿದಂತೆ ಎಲ್ಲೆಂದರಲ್ಲಿ ಉಳಿಯುತ್ತಿದೆ. ಈ ಅನುಪಯುಕ್ತ ತ್ಯಾಜ್ಯಪುನರ್‌ ಬಳಕೆಗೆ ಇಂದಿನ ಯುವ ಸಮೂಹ ಹೊಸ ಆವಿಷ್ಕಾರ ಕೈಗೊಳ್ಳಬೇಕಿದೆ. ಸ್ವತ್ಛ, ಸುಂದರ ನಗರ ನಿರ್ಮಾಣಕ್ಕೆ ತಮ್ಮದೇ ಆದ ಪಾತ್ರ ವಹಿಸಬೇಕಿದೆ ಎಂದು ಹೇಳಿದರು.

Advertisement

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಅಧ್ಯಕ್ಷ ಡಾ| ಬಿ.ಇ. ರಂಗಸ್ವಾಮಿ ಮಾತನಾಡಿದರು. ರಾಜ್ಯ ವಿಜ್ಞಾನ ಪರಿಷತ್‌ನ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಉದಯರತ್ನಕುಮಾರ್‌, ಸಾರ್ವಜನಿಕ ಶಿಕ್ಷಣ ಇಲಾಖೆ ವಿಜ್ಞಾನ ವಿಷಯ ಪರಿವೀಕ್ಷಕ ಆರ್‌.ಬಿ. ವಸಂತಕುಮಾರಿ,ಎನ್‌.ಎಂ.ಕೆ. ಲೋಕೇಶ್‌, ಎನ್‌.ಎಚ್‌. ನಂದಿನಿ ಅನಮೋಲ್‌ ವಿದ್ಯಾಸಂಸ್ಥೆ ಅಧ್ಯಕ್ಷ ಸಿ.ಜಿ. ದಿನೇಶ್‌, ರಾಜ್ಯ ವಿಜ್ಞಾನ ಪರಿಷತ್‌ ಕಾರ್ಯದರ್ಶಿ ಎಂ. ಗುರುಸಿದ್ದಸ್ವಾಮಿ, ಅಂಗಡಿ ಸಂಗಪ್ಪ, ವೆಂಕಟೇಶ್‌ ಮೂರ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next