ಕನಕಪುರ: ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ತುಂಗಣಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿಯೇ ನಮ್ಮನ್ನು ಟೀಕಿಸುವವರಿಗೆ ಉತ್ತರ ನೀಡಲಿವೆ. ತಾಲೂಕಿನಲ್ಲಿ ನೀರಾವರಿ, ಇಂಧನ, ಆರೋಗ್ಯ, ಶಿಕ್ಷಣ, ಕೃಷಿ, ರೇಷ್ಮೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಜನರಿಗೆ ತಕ್ಕಂತೆ ಅಭಿವೃದ್ಧಿ ಪಥದತ್ತ ಮುನ್ನಡೆದಿದೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ತಾಲೂಕಿನ ತುಂಗಣಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ಪ್ರಾಥಮಿಕ ಪಶುವೈದ್ಯ ಚಿಕಿತ್ಸಾಲಯದ ಉದ್ಘಾಟನೆ, ಗ್ರಾಮ ಪಂಚಾಯ್ತಿ ನೂತನ ಕಟ್ಟಡ, ಹಾಲಿನ ಡೇರಿ ಕಟ್ಟಡ, ಗರಡಿ ಮನೆ ಕಟ್ಟಡಗಳಿಗೆ ಭೂಮಿ ಪೂಜೆ ನೆರವೇರಿಸಿದ ಅವರು ಮಾತನಾಡಿ, ತುಂಗಣಿ ಗ್ರಾಮದಲ್ಲೇ 450 ಕೋಟಿ ರೂ. ವೆಚ್ಚದಲ್ಲಿ ಮೆಡಿಕಲ್ ಕಾಲೇಜಿಗೆ ಸರ್ಕಾರ ಮಂಜೂರಾತಿ ನೀಡಿದೆ. ಇದರ ಕಾಮಗಾರಿ ಪ್ರಾರಂಭವಾಗಲಿದೆ. ಬೆಂಗಳೂರು- ಮೈಸೂರು ರಸ್ತೆಯ ಹನುಮಂತನಗರದ ಮುಂಭಾಗ ಎಸ್‌ಟಿಆರ್‌ಆರ್ ರಿಂಗ್‌ರೋಡ್ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.
ಒಗ್ಗಟ್ಟಿನಿಂದ ಅಭಿವೃದ್ಧಿ ಕಾರ್ಯ: ಜಿಲ್ಲೆಯಲ್ಲಿ ಮತ್ತೂಂದು ತಾಲೂಕು ಘೋಷಿಸಿದ್ದಾರೆ. ನಮ್ಮೆಲ್ಲರ ಒಗ್ಗಟ್ಟಿನಿಂದ ತಾಲೂಕಿನ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ತಾಲೂಕಿನ ಪ್ರತಿ ಗ್ರಾಮಗಳಿಗೂ ಕಾವೇರಿ ನೀರು ಒದಗಿಸುವ ಯೋಜನೆಗೆ ಸರ್ಕಾರ 300 ಕೋಟಿ ರೂ. ಮಂಜೂರಾತಿ ದೊರೆತು ಕಾಮಗಾರಿ ಬಿರುಸಿನಿಂದ ಸಾಗಿದೆ. ಎರಡು ವರ್ಷಗಳಲ್ಲಿ ಈ ಭಾಗಕ್ಕೂ ಕಾವೇರಿ ನೀರು ಸಿಗಲಿದೆ ಎಂದು ತಿಳಿಸಿದರು.
ಬ್ಯಾಂಕ್ ಸೌಲಭ್ಯ ಬಳಸಿಕೊಳ್ಳಿ: ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿ, ಸ್ತ್ರೀಶಕ್ತಿ ಸಂಘಗಳು ವಿಎಸ್‌ಎಸ್‌ಎನ್ ಬ್ಯಾಂಕ್ ಮೂಲಕ 5 ಲಕ್ಷದೊಳಗೆ ಹಣ ಪಡೆದಲ್ಲಿ ಶೇ.ಶೂನ್ಯ ಬಡ್ಡಿ ದರದಲ್ಲಿ ಹಣ ದೊರಕುತ್ತದೆ. ಪ್ರತಿ ಸಂಘಗಳು ತಾವು ಉಳಿಸುವ ಮೊತ್ತಕ್ಕೆ ತಕ್ಕಂತೆ ಬ್ಯಾಂಕ್‌ನಲ್ಲಿ ಸಾಲ ಸಿಗುವುದರಲ್ಲಿ ಸಂಶಯವಿಲ್ಲ. ಪ್ರತಿಯೊಬ್ಬರು ಬ್ಯಾಂಕ್‌ನ ಈ ಸೌಲಭ್ಯವನ್ನು ಬಳಸಿಕೊಂಡು ತಮ್ಮ ಕಸಬುಗಳನ್ನು ಮಾಡುವುದರೊಂದಿಗೆ ತಮ್ಮ ಬದುಕಿನಲ್ಲಿ ಆರ್ಥಿಕವಾಗಿ ಬೆಳಕು ಕಾಣಬಹುದು ಎಂದರು.
ಅಭಿವೃದ್ಧಿ ಕಾಮಗಾರಿಗೆ ಚಾಲನೆ: ರಾಯಸಂದ್ರ, ವರಗೇರಹಳ್ಳಿ, ಅರಳಾಳು ಸಂದ್ರ, ತೊಪ್ಪಗನಹಳ್ಳಿ, ಕುರಿಗೌಡನ ದೊಡ್ಡಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು. ತುಂಗಣಿ, ರಾಯಸಂದ್ರ, ತೊಪ್ಪಗನಹಳ್ಳಿ, ಕುರಿಗೌಡನ ದೊಡ್ಡಿ, ಬೋಪಸಂದ್ರ, ವರಗೇರಹಳ್ಳಿ, ಅರಳಾಳುಸಂದ್ರ, ರಾಂಪುರ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ಉದ್ಘಾಟಿಸಲಾಯಿತು.
ತಾಲೂಕು ಪಂಚಾಯ್ತಿ ಇಒ ಟಿ.ಎಸ್. ಶಿವರಾಮು, ಜಿಪಂ ಅಧ್ಯಕ್ಷ ಎಂ.ಎನ್.ನಾಗರಾಜು, ಸದಸ್ಯೆ ಉಷಾರವಿ, ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷೆ ರತ್ನಮ್ಮ, ಸದಸ್ಯರಾದ ನೀಲಮ್ಮಮುದ್ದೇಗೌಡ, ರಾಜಶೇಖರ್, ರಾಜಗೋಪಾಲ್, ಕುಮಾರ್, ನಾಗೇಶ್, ಸಾಗರ್, ಶಿವನಂಜಯ್ಯ, ಪಾರ್ಥ, ಸುಲೋಚನಮ್ಮ, ತಾಪಂ ಸದಸ್ಯರಾದ ಧನಂಜಯ, ಮಾಜಿ ಅಧ್ಯಕ್ಷೆ ಸುಕನ್ಯ ರಂಗಸ್ವಾಮಿ, ಸಾತನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ವಿಜಯ ದೇವ್, ನಗರಸಭೆ ಅಧ್ಯಕ್ಷ ಕೆ.ಎಂ.ಮಲ್ಲೇಶ್ ಉಪಸ್ಥಿತರಿದ್ದರು.