ಬೆಳ್ತಂಗಡಿ: ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ನಕ್ಸಲ್ ಪೀಡಿತ ಪ್ರದೇಶಗಳಾದ ಮಲವಂತಿಗೆ, ಕರಿಯಾಳ, ಕುತ್ಲೂರು, ನಾರಾವಿ, ನಾವರ, ಸುಲ್ಕೇರಿ ಮೊದಲಾದ ಪ್ರದೇಶಗಳಿಗೆ ಮಂಗಳವಾರ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಹಾಗೂ ಎಸ್.ಪಿ. ಡಾ| ರವಿಕಾಂತೇ ಗೌಡ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿ, ನಿರ್ಭೀತಿಯಿಂದ ಮತದಾನ ಮಾಡುವಂತೆ ತಿಳಿಸಿದರು.
ಮಲವಂತಿಗೆ, ಎಳನೀರು, ಕುತ್ಯಡ್ಕ, ಬಡಮನೆ, ಬಂಗಾರಪಲ್ಕೆ ಪ್ರದೇಶಗಳ ಜನತೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗಿರುವುದರಿಂದ ತಾವು ಅನುಭವಿಸುತ್ತಿರುವ ಮೂಲಸೌಕರ್ಯಗಳ ಕೊರತೆಯ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತಂದರು.
ಎಳನೀರು- ದಿಡುಪೆ- ಸಂಸೆಗೆ ಸಂಪರ್ಕ ರಸ್ತೆ ಇಲ್ಲ. ಕಚ್ಚಾರಸ್ತೆಯಿದ್ದರೂ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿದೆ. ತುರ್ತು ಸನ್ನಿವೇಶಗಳಲ್ಲಿ ರಸ್ತೆ ಸಮಸ್ಯೆಯಿಂದ ಸುಮಾರು 150 ಕಿ.ಮೀ.ಗಳಷ್ಟು ದೂರ ಕ್ರಮಿಸಿ ಪಟ್ಟಣಕ್ಕೆ ಬರಬೇಕಾಗಿದೆ. ಕೇವಲ 7 ಕಿ.ಮೀ.ಗಳ ರಸ್ತೆ ನಿರ್ಮಿಸಿದಲ್ಲಿ ಸಮಸ್ಯೆ ಬಗೆಹರಿಯಲಿದೆ. ಇದನ್ನು ಬಗೆಹರಿಸುವಂತೆ ಜನರು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ವಾರದೊಳಗಾಗಿ ಅರಣ್ಯ ರಕ್ಷಣಾಧಿಕಾರಿ, ಎಸ್‌ಪಿ ಜತೆ ಸಮಸ್ಯೆ ಇರುವ ಪ್ರದೇಶಗಳಿಗೆ ಭೇಟಿ ನೀಡಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ವಾಹನ ವ್ಯವಸ್ಥೆ: ವೃದ್ಧರಿಗೆ, ಅನಾರೋಗ್ಯ ಪೀಡಿತರಿಗೆ ಹಾಗೂ ದುರ್ಗಮ ಪ್ರದೇಶಗಳಲ್ಲಿ ಇರುವವರಿಗೆ ಮತದಾನ ಮಾಡಲು ಸಮಸ್ಯೆ ಉಂಟಾಗುತ್ತಿದೆ ಎಂಬುದನ್ನು ತಿಳಿದು ವಾಹನದ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಪಿಡಿಒಗೆ ಸೂಚಿಸಿದರು.
ಕೊಲ್ಲಿ ಸಮೀಪದ ಕರಿಯಾಳಕ್ಕೆ ಆಗಮಿಸಿದ ವೇಳೆ ಸಾರ್ವಜನಿಕರು ಸುಮಾರು 250 ಜನಸಂಖ್ಯೆ ಇರುವ ಮಕ್ಕಿ ಪ್ರದೇಶದಲ್ಲಿ ಮತಗಟ್ಟೆ ತೆರೆಯಬೇಕು ಎಂದು ಮನವಿ ಮಾಡಿದರು. ಲೋಕಸಭಾ ಚುನಾವಣೆಯೊಳಗೆ ಈಡೇರಿಸುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದರು.
ಬೆಳ್ತಂಗಡಿ ಸಿಐ ಸಂದೇಶ್ ಪಿ.ಜಿ., ಸ್ಥಳೀಯ ಪಿಡಿಒ, ಪೊಲೀಸ್ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಹಾಗೂ ಎನ್‌ಎಎಫ್ ಸಿಬಂದಿ ಉಪಸ್ಥಿತರಿದ್ದರು.