ಬೆಂಗಳೂರು: ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದಂತೆ ರಾಜ್ಯದ ನಾನಾ ಭಾಗಗಳಲ್ಲಿದ್ದ 1.09 ಲಕ್ಷ ವಲಸೆ ಕಾರ್ಮಿಕರು ರಾಜ್ಯದಲ್ಲಿನ ತಮ್ಮ ಸ್ವಂತ ಊರುಗಳಿಗೆ ತೆರಳಿದ್ದರೆ, 9578 ಮಂದಿ ವಲಸಿಗರು ತಮ್ಮ ರಾಜ್ಯಗಳಿಗೆ ಮರಳಿದ್ದಾರೆ.
ದಿಢೀರ್ ಲಾಕ್‌ಡೌನ್ ಜಾರಿ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ನಾನಾ ಭಾಗಗಳಲ್ಲಿದ್ದ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಪೈಕಿ ಬಹಳಷ್ಟು ಕಾರ್ಮಿಕರಿಗೆ ಊಟ, ದಿನಸಿ ಸೇರಿದಂತೆ ಇತರೆ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿತ್ತು. ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದಂತೆ ಬಹಳಷ್ಟು ವಲಸಿಗ ಕಾರ್ಮಿಕರು ತಮ್ಮ ಊರುಗಳಿಗೆ ಮರಳಿದ್ದಾರೆ.
ಮೇ 2ರಿಂದ ಮೇ 7ರವರೆಗೆ ಬೆಂಗಳೂರು ಸೇರಿದಂತೆ ನಾನಾ ಭಾಗಗಳಿಂದ ಒಟ್ಟು 3,647 ಬಸ್‌ಗಳಲ್ಲಿ ರಾಜ್ಯದ 1.09 ಲಕ್ಷ ವಲಸೆ ಕಾರ್ಮಿಕರು ತಮ್ಮ ಊರು ತಲುಪಿದ್ದಾರೆ. ಬೆಂಗಳೂರಿನಿಂದ 2350 ಬಸ್ ಹಾಗೂ ನಾನಾ ಭಾಗಗಳಿಂದ 1297 ಬಸ್ ಗಳಲ್ಲಿ ಕಾರ್ಮಿಕರು ತಮ್ಮ ಊರು ಸೇರಿದ್ದಾರೆ.
ಇನ್ನೊಂದೆಡೆ ಬಿಹಾರ, ಒಡಿಶಾ, ಜಾರ್ಖಂಡ್, ರಾಜಸ್ತಾನ, ಉತ್ತರ ಪ್ರದೇಶದ ವಲಸೆ ಕಾರ್ಮಿಕರು ಮೇ. 3ರಿಂದ 5ರವರೆಗೆ ಎಂಟು ರೈಲುಗಳಲ್ಲಿ 9578 ಕಾರ್ಮಿಕರು ತಮ್ಮ ಊರುಗಳಿಗೆ ಮರಲಿದ್ದಾರೆ. ರಾಜ್ಯದ ವಲಸೆ ಕಾರ್ಮಿಕರು ಕೂಲಿ ಕೆಲಸ, ಸಣ್ಣ ಕೈಗಾರಿಕೆ ಇತರೆಡೆ ಕಾರ್ಯ ನಿರ್ವಹಿಸುತ್ತಿದ್ದರು. ಉತ್ತರ ಭಾರತದ ವಲಸೆ ಕಾರ್ಮಿಕರು ಕಟ್ಟಡಗಳ ಮೂಲ ಸೌಕರ್ಯ, ಒಳಾಂಗಣ ವಿನ್ಯಾಸ ಸೇರಿದಂತೆ ಕುಶಲಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ದೊಡ್ಡ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ನಿರ್ಗಮಿಸಿರುವುದರಿಂದ ಪ್ರಮುಖ ನಗರಗಳಲ್ಲಿ ರಿಯಲ್ ಎಸ್ಟೇಟ್, ಕಟ್ಟಡ ನಿರ್ಮಾಣ, ಕೈಗಾರಿಕೆ ಹಾಗೂ ಇತರೆ ಆರ್ಥಿಕ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ಎದುರಾಗಿದೆ.