Advertisement

ಜಿಲ್ಲೆಯಲ್ಲಿ ಹವಾ ಎಬ್ಬಿಸಿದ ಕಾಂಕ್ರೇಜ್‌ ಎತ್ತುಗಳ ನಿರ್ಗಮನ 

12:31 PM Dec 07, 2017 | |

ಮಹಾನಗರ: ಕೆಲ ತಿಂಗಳಿನಿಂದ ಜಿಲ್ಲೆಯಲ್ಲೇ ಬೀಡುಬಿಟ್ಟು ಕರಾವಳಿ ಭಾಗದ ಜನರ ಕುತೂಹಲದಿಂದ ಗಮನ ಸೆಳೆದಿದ್ದ ಇಸ್ಕಾನ್‌ನ ಐದು ಗಜ ಗಾತ್ರದ ಎತ್ತುಗಳು ಇದೀಗ ಧರ್ಮಸ್ಥಳದ ಮೂಲ ಬೆಂಗಳೂರಿನ ಕಡೆಗೆ ನಿರ್ಗಮಿಸಿದೆ. ಆ ಮೂಲಕ ಕೇವಲ ಒಂದು ವಾರ ಇಲ್ಲಿ ತಂಗಬೇಕಿದ್ದ ಈ ಎತ್ತುಗಳು ಎರಡೂವರೆ ತಿಂಗಳು ಜಿಲ್ಲೆಯಾದ್ಯಂತ ಸುತ್ತಾಟ ನಡೆಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡವು.

Advertisement

ಇಸ್ಕಾನ್‌ನವರು ಮಂಗಳೂರಿಗೆ ಕರೆ ತಂದಿರುವ ಸುಮಾರು 900 ಕೆಜಿ ವರೆಗಿನ ತೂಕ ಹೊಂದಿದ್ದ ಕಾಂಕ್ರೇಜ್‌ ತಳಿಯಐದು ಎತ್ತುಗಳು ಒಂದೇ ವಾರದಲ್ಲಿ ಜಿಲ್ಲೆಯಿಂದ ನಿರ್ಗಮಿಸಬೇಕಿತ್ತು. ಆದರೆ, ಎತ್ತುಗಳ ಜೊತೆ ಪಾದಯಾತ್ರೆಯಲ್ಲಿ ಆಗಮಿಸಿದ್ದ ಲೋಕನಾಥ್‌ ಮಹಾರಾಜ್‌ ಅವರು ಮಥುರಾಕ್ಕೆ ತೆರಳಿದ ಕಾರಣ, ಮಂಗಳೂರಿನ ಬಳಿಯ ಕುಡುಪುವಿನ ಇಸ್ಕಾನ್‌ ಮಂದಿರದ ಆವರಣದಲ್ಲೇ ಎತ್ತುಗಳು ಬೀಡು ಬಿಟ್ಟಿದ್ದವು. ಮಹಾರಾಜ್‌ ಅವರು ಪಾದಯಾತ್ರೆಯಿಂದ ಆಗಮಿಸಿದ ಬಳಿಕ ಐದೂ ಎತ್ತುಗಳೊಂದಿಗೆ ನ. 8ರಂದು
ಮಂಗಳೂರಿನಿಂದ ಉಡುಪಿಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿತ್ತು.

ಉಡುಪಿಯಲ್ಲಿ ಒಂದು ದಿನ ವಿಶ್ರಾಂತಿ ಪಡೆದು, ಕುಂದಾಪುರ, ಮೈಸೂರು ಮೂಲಕ ಬೆಂಗಳೂರಿಗೆ ತೆರಳಿ, ಪಾದಯಾತ್ರೆ
ಮುಗಿಸಬೇಕಿತ್ತು. ಆದರೆ ಕುಡುಪು ಇಸ್ಕಾನ್‌ ಮಂದಿರದಲ್ಲಿ ಬೀಡುಬಿಟ್ಟಿದ್ದ ಎತ್ತುಗಳನ್ನು ನೋಡಲು ನಿತ್ಯ 200ಕ್ಕೂ ಹೆಚ್ಚಿನ ಮಂದಿ ಆಗಮಿಸುತ್ತಿದ್ದರು. ಕರಾವಳಿಗರು ತೋರಿದ ಪ್ರೀತಿ ಹಾಗೂ ಕುತೂಹಲ ಗಮನಿಸಿ, ಮತ್ತೂಂದು ತಿಂಗಳು ಇಲ್ಲೇ ತಂಗುವುದಕ್ಕೆ ತೀರ್ಮಾನಿಸಿದರು. ಹೀಗಾಗಿ, ಉಡುಪಿಯಲ್ಲಿ ನಡೆದ ಧರ್ಮ ಸಂಸದ್‌ ನಂಥ ದೊಡ್ಡ ಕಾರ್ಯಕ್ರಮದಲ್ಲೂ ಈ ಎತ್ತುಗಳು ಪಾಲ್ಗೊಂಡು ಜನಾಕರ್ಷಣೆಗೆ ಕಾರಣವಾಗಿದ್ದವು. ಆಗಮಿಸಿದ್ದ ಜನರಂತೂ ಒಬ್ಬರ ಬಳಿಕ ಒಬ್ಬರಂತೆ ಎತ್ತುಗಳ ಜತೆ ನಿಂತು ಸೆಲ್ಫಿ ಕ್ಲಿಕ್ಕಿಸುವಲ್ಲಿ ತಲ್ಲೀನರಾಗಿದ್ದರು. ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ್‌ ಆಳ್ವ ‘ಆಳ್ವಾಸ್‌ ನುಡಿಸಿರಿ’ಗೂ ಈ ಎತ್ತುಗಳನ್ನು ಕರೆತರುವಂತೆ ಆಹ್ವಾನ ಕೊಟ್ಟಿದ್ದರು. ಡಿಸೆಂಬರ್‌ ತಿಂಗಳ ಮೊದಲ ಮೂರು ದಿನ ಈ ಎತ್ತುಗಳು ನುಡಿಸಿರಿ ಸಾಹಿತ್ಯ ಹಬ್ಬದಲ್ಲೂ ಲಕ್ಷಾಂತರ ಜನರ ಗಮನ ಸೆಳೆದವು. ಎರಡುವರೆ ತಿಂಗಳ ಕಾಲ ಜಿಲ್ಲೆಯಲ್ಲಿ ಬಿಡುವಿಲ್ಲದಂತೆ ಸುತ್ತಾಡಿದ ಕಾಂಕ್ರೇಜ್‌ ಎತ್ತುಗಳು, ಈಗ ಹೊರಟು ನಿಂತಿವೆ.

ಧರ್ಮಸ್ಥಳಕ್ಕೆ ಪಾದಯಾತ್ರೆ
ಆಳ್ವಾಸ್‌ ನುಡಿಸಿರಿಯಲ್ಲಿ ಪಾಲ್ಗೊಂಡ ಬಳಿಕ ಬುಧವಾರ (ಡಿ. 6) ಗುರುವಾಯನಕೆರೆ, ಬೆಳ್ತಂಗಡಿ ಮೂಲಕ ಧರ್ಮಸ್ಥಳಕ್ಕೆ ಪಾದಯಾತ್ರೆ ಮುಂದುವರಿಸಿವೆ. ಈ ಎತ್ತುಗಳು ಒಂದು ದಿನ ಧರ್ಮಸ್ಥಳದಲ್ಲಿಯೇ ತಂಗಲಿವೆ. ರಥಯಾತ್ರೆಯ ಜೊತೆಗೆ, ಪರಿಚಾರಕರು, ಕಾರ್ಯಕರ್ತರು ಸಹಿತ 30ಕ್ಕೂ ಹೆಚ್ಚಿನ ಮಂದಿ ಪಾದಯಾತ್ರೆಯಲ್ಲಿದ್ದು, ಗಜ ಗಾತ್ರದ ಎತ್ತುಗಳ ಆರೈಕೆ ಮಾಡುತ್ತಾರೆ.

‘ನಂದಕಿಶೋರ್‌’ ಎನ್ನುವ 8 ವರ್ಷದ ಎತ್ತು ಬರೋಬ್ಬರಿ 900 ಕೆ.ಜಿ ತೂಕ ಹೊಂದಿದ್ದು, ‘ನರಸಿಂಹ’ ಎನ್ನುವ 12 ವರ್ಷದ ಎತ್ತು ಕೂಡ 800 ಕೆ.ಜಿ.ಯಿದೆ. ‘ಕಾಲಿಯಾ’ ಮತ್ತು ‘ಜಯ್‌’ ಹೆಸರಿನ 7 ವರ್ಷದ ಎರಡು ಎತ್ತುಗಳು ಕೂಡ 700 ಕೆ.ಜಿ.ಯಷ್ಟು ತೂಕವಿವೆ. ಕೃಷ್ಣ ಎಂಬ 4 ವರ್ಷದ ಎತ್ತು ಕೂಡ 500 ಕೆ.ಜಿ ತೂಕವನ್ನು ಹೊಂದಿವೆ.

Advertisement

ಇನ್ನು 10 ವರ್ಷ ಕಾಯಬೇಕು
ಕರಾವಳಿಗರು ಈ ಎತ್ತುಗಳನ್ನು ಮತ್ತೂಮ್ಮೆ ನೋಡುವುದಕ್ಕೆ ಇನ್ನು 10 ವರ್ಷ ಕಾಯಬೇಕು. ದೇಶಾದ್ಯಂತ ಪ್ರಮುಖ ಪಟ್ಟಣಕ್ಕೆ ಎತ್ತುಗಳು ಪಾದಯಾತ್ರೆ ನಡೆಸುತ್ತಿದ್ದು, ಒಂದು ಪ್ರದೇಶದಿಂದ ಮತ್ತೂಂದು ಪ್ರದೇಶಕ್ಕೆ 10 ವರ್ಷಗಳ ಆಂತರದಲ್ಲಿ ಆಗಮಿಸುತ್ತದೆ. ಪ್ರತಿದಿನ ಈ ಎತ್ತುಗಳು ಕನಿಷ್ಠ 10 ಕಿ.ಮೀ. ದೂರವನ್ನು ನಡಿಗೆಯಲ್ಲಿ ಕ್ರಮಿಸುತ್ತವೆ. ಆ ಮೂಲಕ ಅಲ್ಲಲ್ಲಿ ಧರ್ಮ ಪ್ರಚಾರ ಮಾಡಲಾಗುತ್ತದೆ. ರಾತ್ರಿ ವಿಶ್ರಾಂತಿ ಪಡೆದು ಮತ್ತೆ ಪಾದಯಾತ್ರೆಯನ್ನು ಮುಂದುವರಿಸುತ್ತದೆ.

ಗೋಪೂಜೆ ನಡೆಸಿ ಬೀಳ್ಕೊಡುಗೆ
ಇಷ್ಟುದಿನ ಕುಡುಪು ಬಳಿಯ ಇಸ್ಕಾನ್‌ ದೇವಾಲಯದಲ್ಲಿ ಈ ಐದು ಹೋರಿಗಳು ಬೀಡುಬಿಟ್ಟಿದ್ದು, ಅಕ್ಕ-ಪಕ್ಕದ ಮನೆಯವರಿಗೂ ಇಷ್ಟವಾಗಿದ್ದವು. ಅಲ್ಲಿದ್ದ ಮನೆಯವರು ಎತ್ತುಗಳಿಗೆ ಬೂಸ, ಹುಲ್ಲು ನೀಡುತ್ತಿದ್ದರು. ಕುಡುಪುವಿನಿಂದ ಉಡುಪಿಗೆ ಹೋರಿಗಳು ತೆರಳುವಾಗ ಗೋಪೂಜೆ ನಡೆಸಿ ಬೀಳ್ಕೊಡಲಾಯಿತು. ಈಗ ಎತ್ತುಗಳನ್ನು ಜಿಲ್ಲೆಯಿಂದ ಬೀಳ್ಕೊಡುತ್ತಿರುವುದಕ್ಕೆ ತುಂಬಾ ಬೇಸರವಾಗಿದೆ. ಏಕೆಂದರೆ ದಿನನಿತ್ಯ ಎತ್ತುಗಳನ್ನು ಕಣ್ತುಂಬಿಕೊಳ್ಳಲು ನೂರಾರು ಮಂದಿ ಪ್ರವಾಸಿಗರ ರೀತಿ ಇಲ್ಲಿಗೆ ಆಗಮಿಸುತ್ತಿದ್ದರು. ಇನ್ನು ಈ ಎತ್ತುಗಳ ಪಾದಯಾತ್ರೆ ಜಿಲ್ಲೆಗೆ ಆಗಮಿಸಲು 10 ವರ್ಷ ಕಾಯಬೇಕಾಗುತ್ತದೆ.
ಸ್ಮಿತಾ ಕೃಷ್ಣದಾಸ್‌, ಉಪಾಧ್ಯಕ್ಷ,
   ಇಸ್ಕಾನ್‌ ಕುಡುಪು

‡ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next