Advertisement

ಕೋವಿಡ್ ನಿರ್ವಹಣೆಯಲ್ಲಿ ಆರೋಗ್ಯ ಇಲಾಖೆ ವಿಫಲ

10:28 AM Jul 26, 2020 | Suhan S |

ದಾವಣಗೆರೆ: ಕೋವಿಡ್‌-19 ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ಆರೋಗ್ಯ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ವ್ಯಕ್ತಿಯೊಬ್ಬರಿಗೆ ಪಾಸಿಟಿವ್‌ ಬಂದು 2-3 ದಿನಗಳಾದರೂ ಸಹ ಆಸ್ಪತ್ರೆಗಳಲ್ಲಿ ಬೆಡ್‌ ಇಲ್ಲ ಎಂಬ ನೆಪವೊಡ್ಡಿ ಪಾಸಿಟಿವ್‌ ಹೊಂದಿದ ವ್ಯಕ್ತಿ ಮನೆ ಹೊರಗಡೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್‌ ದೂರಿದ್ದಾರೆ.

Advertisement

ಕೋವಿಡ್‌-19 ಸಾಂಕ್ರಾಮಿಕ ರೋಗ ಆಗಿರುವ ಕಾರಣ ಪಾಸಿಟಿವ್‌ ಪ್ರಕರಣ ಬಂದ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ಕೊರೊನಾ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬ ಹೇಳಿಕೆ ನೀಡಿದ್ದಾರೆ. ಆದರೆ ದಾವಣಗೆರೆಯ ವಿನೋಬನಗರದಲ್ಲಿ ವ್ಯಕ್ತಿಯೊಬ್ಬರಿಗೆ ಪಾಸಿಟಿವ್‌ ಬಂದು 2-3 ದಿನವಾದರೂ ಯಾಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ ಎಂದು ಪ್ರಶ್ನಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಹೋಂ ಕ್ವಾರಂಟೈನ್‌ ನಲ್ಲಿರುವಂತೆ ತಿಳಿಸಿದ್ದಾರೆ. ಬಹಳಷ್ಟು ಸಣ್ಣ ಮನೆಗಳಿದ್ದು, ಪ್ರತ್ಯೇಕ ಕೋಣೆಗಳಿರುವುದಿಲ್ಲ. ಪಾಸಿಟಿವ್‌ ಬಂದ ವ್ಯಕ್ತಿಯ ಮನೆಯಲ್ಲಿ ಸಹೋದರಿ ತುಂಬು ಗರ್ಭಿಣಿಯಾಗಿದ್ದು ಗರ್ಭಿಣಿಗೆ ಪಾಸಿಟಿವ್‌ ಬರಬಾರದು ಎಂಬ ಕಾರಣಕ್ಕೆ ಆ ವ್ಯಕ್ತಿ ಮಳೆಯಲ್ಲಿಯೇ ಹೊರಗಡೆ ಇದ್ದು, ಮಳೆಯಲ್ಲಿ ರಾತ್ರಿ ಕಳೆದಿದ್ದಾರೆ. ಇಂತಹ ಸ್ಥಿತಿ ಮತ್ತೂಬ್ಬರಿಗೆ ಬಾರದಂತೆ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಕೂಡಲೇ ಪಾಸಿಟಿವ್‌ ಬಂದ ವ್ಯಕ್ತಿಗಳಿಗೆ ಬೆಡ್‌ ಒದಗಿಸುವ ಕೆಲಸವನ್ನು ಜಿಲ್ಲಾಧಿಕಾರಿಗಳು ಮಾಡಬೇಕು. ದಾವಣಗೆರೆ ನಗರದಲ್ಲಿ ಎಲ್ಲಾ ಸಮಾಜದವರ ಸಮುದಾಯ ಭವನಗಳಿದ್ದು, ಆ ಸಮಾಜದವರು ಆಯಾ ಸಮುದಾಯದ ಪಾಸಿಟಿವ್‌ ವ್ಯಕ್ತಿಗಳಿಗೆ ಪಾಸಿಟಿವ್‌ ಬಂದಲ್ಲಿ ಅವರಿಗೆ ಆಯಾ ಸಮುದಾಯಭವನಗಳಲ್ಲಿ ಹೋಂ ಕ್ವಾರಂಟೈನ್‌ ಮಾಡಲು ಜಿಲ್ಲಾಡಳಿತ ಅನುಮತಿ ನೀಡಿ ಸಹಕರಿಸಬೇಕು ಎಂದಿದ್ದಾರೆ. ಕೋವಿಡ್‌ ಪಾಸಿಟಿವ್‌ ಬಂದ ವ್ಯಕ್ತಿಯ ಮನೆ ಮುಂಭಾಗ ಕಂಟೈನ್ಮೆಂಟ್‌ ಝೋನ್‌ ಮಾಡಲು ಸಹ ಜಿಲ್ಲಾಡಳಿತ ವಿಫಲವಾಗಿದೆ ಎಂಬುದಕ್ಕೆ ಇತ್ತೀಚಿನ ಜಾಲಿನಗರ ಮತ್ತು ವಿನೋಬನಗರದ ಪ್ರಕರಣಗಳೇ ಸಾಕ್ಷಿ. ಜಾಲಿನಗರದಲ್ಲಿನ ವ್ಯಕ್ತಿಯೊಬ್ಬರಿಗೆ ಪಾಸಿಟಿವ್‌ ಬಂದು 3-4 ದಿನಗಳು ಚಿಕಿತ್ಸೆ ಪಡೆದು ಮೃತರಾಗಿದ್ದು, ಅವರ 9ನೇ ದಿನದ ತಿಥಿ ಕಾರ್ಯ ಮಾಡುವ ಸಮಯದಲ್ಲಿ ಅಧಿಕಾರಿಗಳು ಸೀಲ್‌ಡೌನ್‌ ಮಾಡಲು ಆಗಮಿಸಿದ್ದರು. ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಜನತೆ ಭಯಭೀತರಾಗುತ್ತಿದ್ದಾರೆ. ಜಿಲಾಡಳಿತ ಆದಷ್ಟು ಶೀಘ್ರ ಕಂಟೈನ್‌ಮೆಂಟ್‌ ಝೋನ್‌ ಮಾಡಲು ಆದೇಶ ನೀಡುವುದರ ಜೊತೆಗೆ ಕಂಟೈನ್ಮೆಂಟ್‌ ಝೋನ್‌ಗಳನ್ನು ಡಿನೋಟಿಫೈ ಮಾಡಲು ಸಹ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next