ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯನ್ನು ಡಿಸೆಂಬರ್‌ನಲ್ಲಿ ನಡೆಸಲು ಸರ್ವಶಿಕ್ಷಾ ಅಭಿಯಾನ ಸಜ್ಜಾಗುತ್ತಿದೆ. ರಾಜ್ಯದಲ್ಲಿ ಶಾಲಾ ಶಿಕ್ಷಣದಿಂದ ವಂಚಿತರಾದ ಮಕ್ಕಳ ಸ್ಪಷ್ಟ ಮಾಹಿತಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಇಲ್ಲ. ಕೇವಲ 9 ಸಾವಿರ ಮಕ್ಕಳು ಶಾಲಾ ಶಿಕ್ಷಣದಿಂದ ದೂರ ಉಳಿದಿದ್ದಾರೆ ಎಂದು 2016ರ ಸರ್ವಶಿಕ್ಷಾ ಅಭಿಯಾನದ ಸಮೀಕ್ಷೆ ಹೇಳಿದರೆ, ಅದೇ ವರ್ಷ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಡೆಸಿದ ಸಮೀಕ್ಷೆಯಲ್ಲಿ 1.70 ಲಕ್ಷ ಮಕ್ಕಳು ಕಡ್ಡಾಯ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂಬುದನ್ನು ದಾಖಲೆ ಸಮೇತವಾಗಿ ಸರ್ಕಾರಕ್ಕೆ ಒಪ್ಪಿಸಿದೆ.
2017-18ನೇ ಸಾಲಿನಲ್ಲಿ ಎಷ್ಟು ಮಕ್ಕಳು ಶಾಲೆಗೆ ಪ್ರವೇಶ ಪಡೆದಿದ್ದಾರೆ, ಎಷ್ಟು ಮಕ್ಕಳು ಶಾಲಾ ಶಿಕ್ಷಣದಿಂದ ಹೊರಗಿದ್ದಾರೆ ಎಂಬುದರ ಸಮೀಕ್ಷೆಗೆ ಸರ್ವಶಿಕ್ಷಾ ಅಭಿಯಾನದ ಅಧಿಕಾರಿಗಳು ಸಿದ್ಧರಾಗುತ್ತಿದ್ದಾರೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕಳೆದ ವರ್ಷ ನೀಡಿದ ವರದಿ ಹಾಗೂ ಇಲಾಖೆಯ ಸರ್ವೇ ವರದಿ ಆಧಾರವಾಗಿ ಪ್ರತಿ ಶಾಲೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ವಲಸೆ ಕುಟುಂಬ ಹೆಚ್ಚಿರುವ ಜಿಲ್ಲೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.
ಸಮೀಕ್ಷೆ ಹೇಗೆ?: ಸರ್ವಶಿಕ್ಷಾ ಅಭಿಯಾನದ ಅಧಿಕಾರಿಗಳು ಮತ್ತು ಸಿಬ್ಬಂದಿಯು ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಹೀಗೆ ಎಲ್ಲಾ ಮಾದರಿಯ ಶಾಲೆಗೂ ಭೇಟಿ ನೀಡಿ, 2ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಮಾಹಿತಿ ಪಡೆಯಲಿದ್ದಾರೆ. ಕಳೆದ ವರ್ಷ ಒಂದನೇ ತರಗತಿಗೆ ಸೇರಿದ ಮಗು ಈ ವರ್ಷ ಎರಡನೇ ತರಗತಿಯಲ್ಲಿ ಇರಲೇ ಬೇಕು. ಇಲ್ಲವಾದರೆ ಆ ಮಗು ಶಾಲಾ ಶಿಕ್ಷಣದಿಂದ ಹೊರಗುಳಿದಿದೆ ಅಥವಾ ಬೇರೆ ಶಾಲೆಗೆ ವರ್ಗಾವಣೆ ಪಡೆದಿದೆ ಎಂಬುದು ಖಚಿತವಾಗುತ್ತದೆ. ಶಾಲೆಗೆ ಭೇಟಿ ನೀಡುವ ತಂಡವು, ವಿದ್ಯಾರ್ಥಿಗಳ ಹಾಜರಿ ಪಟ್ಟಿ ಸಮೇತ ಮಾಹಿತಿ ಪಡೆದು, ಶಾಲೆಗೆ ಸತತವಾಗಿ ಗೈರಾಗಿರುವ ವಿದ್ಯಾರ್ಥಿ ಗಳ ವಿವರ ಪಡೆಯಲಿದ್ದಾರೆ. ಎಲ್ಲಾ ಜಿಲ್ಲೆಯ ಮಾಹಿತಿ ಕ್ರೋಢೀಕರಿಸಿ ರಾಜ್ಯ ಮಟ್ಟದಲ್ಲಿ ಅಂಕಿಅಂಶ ಸಿದ್ಧಪಡಿಸುತ್ತಾರೆ. ಡಿಸೆಂಬರ್‌ನಲ್ಲಿ ಸಮೀಕ್ಷೆ ಆರಂಭಿಸಿ, ಫೆಬ್ರವರಿಯಲ್ಲಿ ವರದಿ ಪ್ರಕಟಿಸಲಿದ್ದಾರೆ.
ಎನ್‌ಜಿಒಗೆ ಕೋಕ್: ಇದುವರೆಗೆ ಶಾಲಾ ಶಿಕ್ಷಣ ವಂಚಿತ ಮಕ್ಕಳ ಸಮೀಕ್ಷೆಯನ್ನು ಎನ್‌ಜಿಒ ಮೂಲಕ ಮಾಡಲಾಗುತ್ತಿತ್ತು. ಇದಕ್ಕಾಗಿ ಅನುದಾನ ನೀಡಲಾಗುತ್ತಿತ್ತು. ಕೆಲವು ಎನ್‌ಜಿಒಗಳಿಂದ ಅನುದಾನ ದುರುಪಯೋಗವಾಗಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ವರ್ಷದ ಸಮೀಕ್ಷೆಯಲ್ಲಿ ಎನ್‌ಜಿಒಗಳನ್ನು ತೊಡಗಿಸಿಕೊಳ್ಳದೇ ಇರಲು ನಿರ್ಧರಿಸಲಾಗಿದೆ ಎಂದು ಇಲಾಖೆ ಅಧಿಕಾರಿಗಳು “ಉದಯವಾಣಿ’ಗೆ ಖಚಿತಪಡಿಸಿದ್ದಾರೆ.
ಮುಂದಿನ ವರ್ಷ ಸಮಗ್ರ ವರದಿ
14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಹೀಗಾಗಿ ಶಾಲಾ ಶಿಕ್ಷಣದಿಂದ ವಂಚಿತರಾದ ಮಕ್ಕಳ ಸಮಗ್ರ ಸಮೀಕ್ಷೆಯನ್ನು ಪ್ರತಿ ಐದು ವರ್ಷಕ್ಕೊಮ್ಮೆ ಮಾಡಲಾಗುತ್ತದೆ. 2013ರಲ್ಲಿ ನಡೆಸಿದ ಸಮಗ್ರ ಸಮೀಕ್ಷೆಯಲ್ಲಿ ಸುಮಾರು 40 ಸಾವಿರ ಮಕ್ಕಳು ಶಾಲಾ ಶಿಕ್ಷಣದಿಂದ ದೂರ ಇರುವುದು ಕಂಡು ಬಂದಿತ್ತು. ಅಂತಹ ಮಕ್ಕಳನ್ನು ಪುನರ್ ಶಾಲೆಗೆ ಕರೆ ತರುವ ಪ್ರಯತ್ನ ನಡೆದಿದೆ. 2018ರಲ್ಲಿ ಮತ್ತೆ ಸಮಗ್ರ ಸಮೀಕ್ಷೆ ನಡೆಯಲಿದೆ.
ಡಿಸೆಂಬರ್‌ನಲ್ಲಿ ಪ್ರತಿ ಶಾಲೆಗೆ ಹೋಗಿ ಶಾಲೆ ಬಿಟ್ಟ ಮಕ್ಕಳ ಮಹಿತಿ ಪಡೆಯಲಿದ್ದೇವೆ. ಅದಕ್ಕೆ ಬೇಕಾದ ತಯಾರಿ ನಡೆಯುತ್ತಿದೆ. ಈ ಬಾರಿ ಎನ್ ಜಿಒಗಳನ್ನು ಬಳಸಿಕೊಳ್ಳುವುದಿಲ್ಲ.
●ಎಂ.ಆರ್.ಮಾರುತಿ, ಹಿರಿಯ ಕಾರ್ಯಕ್ರಮಾಧಿಕಾರಿ, ಸರ್ವಶಿಕ್ಷಾ ಅಭಿಯಾನ
ರಾಜು ಖಾರ್ವಿ ಕೊಡೇರಿ