Advertisement
ಸುಣ್ಣದ ಬಣ್ಣ ಬಯಲು ಉಜಿರೆಯ ಗುರಿಪಳ್ಳದ ಪ್ರಗತಿಪರ ಕೃಷಿಕ, ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಪ್ರೊ| ಸತ್ಯನಾರಾಯಣ ಭಟ್ ಅವರು ಬೆಳ್ತಂಗಡಿ ಕೃಷಿ ಇಲಾಖೆಯಿಂದ 15 ಕ್ವಿಂಟಾಲ್ ಸುಣ್ಣ, ಝಿಂಕ್ (ಸತು), ಸಾವಯವ ಗೊಬ್ಬರ ಖರೀದಿಸಿ 7 ಸಾವಿರ ರೂ. ಪಾವತಿಸಿದ್ದರು. ಜತೆಗೆ ಸಾಗಾಟಕ್ಕೆ 2 ಸಾವಿರ ರೂ. ವಾಹನ ಬಾಡಿಗೆ ತೆತ್ತಿದ್ದರು. ಆದರೆ ಮನೆಯಲ್ಲಿ ಸುಣ್ಣದ ಗೋಣಿ ತೆರೆದಾಗ ಅನುಮಾನದ ವಾಸನೆ ಬಡಿಯಿತು. ನಂತರ ಎಸ್‌ಡಿಎಂ ಐಟಿಯ ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಸುಣ್ಣದ ಬಣ್ಣ ಬಯಲಾಯಿತು.
ಸುಣ್ಣ ಪರೀಕ್ಷಿಸಿದ ಸಂಜಯ್ ಸರಳಾಯ, ಸಾಮಾನ್ಯ ಸುಣ್ಣದಲ್ಲಿ ಶೇ. 8ರಿಂದ 8.5, ಶುದ್ಧ ಸುಣ್ಣದಲ್ಲಿ ಶೇ. 12 ಆಲ್ಕಲೈನ್ ಅಂಶ ಇರುತ್ತದೆ. ಈ ಸುಣ್ಣದಲ್ಲಿ ಕೇವಲ ಶೇ. 7.5 ಇದೆ ಎಂದಿದ್ದಾರೆ. ಇದರಿಂದ ಅಡಿಕೆ, ತೆಂಗಿಗೆ ಸುಣ್ಣ ಹಾಕಿದರೂ ಪ್ರಯೋಜನ ಇಲ್ಲದಂತಾಗಿದೆ. ಇದು ಬಿಳಿ ಕಲ್ಲಿನ ಹುಡಿಯ ಕಲಬೆರಕೆ ಸುಣ್ಣವೋ ಎಂಬ ಅನುಮಾನ ಇದೆ. ಸರಬರಾಜು ಯಾರದ್ದು?
50 ಕೆ.ಜಿ. ತೂಕದ ಸಾವಯವ ಗೊಬ್ಬರ ಚೀಲಕ್ಕೆ 210 ರೂ. ಸುಣ್ಣಕ್ಕೆ 145 ರೂ. ಗರಿಷ್ಠ ಮಾರಾಟ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ. ಸುಣ್ಣವನ್ನು ಬಾಗಲಕೋಟೆಯ ಮುಧೋಳದ ಕೃಷ್ಣ ಲೈಮ್ ಪ್ರಾಡಕ್ಟ್‌ನ ಕಂಪೆನಿ ತಯಾರಿಸಿದ್ದು, ಬೆಂಗಳೂರಿನ ಯಲಹಂಕ ಅಗ್ರಹಾರದ ಬಯೋ ಪೆಸ್ಟ್ ಕಂಟ್ರೋಲ್ ಇಂಡಸ್ಟ್ರೀಸ್‌ನ ಸಾವಯವ ಗೊಬ್ಬರ ತಯಾರಿಸಿದೆ. ಟೆಂಡರ್‌ನಂತೆ ಬಂದುದನ್ನು ರೈತರಿಗೆ ತರಿಸಲಾಗುತ್ತದೆ. ಆದರೆ ಇಲಾಖೆ ಗುಣಮಟ್ಟದ ಕುರಿತು ಕಾಳಜಿ ವಹಿಸಿದರೆ ಇಂತಹ ಅನಾಹುತಗಳಾಗುವುದಿಲ್ಲ.
Related Articles
ಇನ್ನು ಸಾವಯವ ಗೊಬ್ಬರದಲ್ಲಿ ಬರೀ ಕಲ್ಲುಗಳಿವೆ. ಖಾಸಗಿಯವರು ರೈತರಿಗೆ ಮೋಸವಾಗುವುದನ್ನು ತಡೆಗಟ್ಟಲು ಇಲಾಖೆ ಗೊಬ್ಬರ, ಸುಣ್ಣ ಮಾರಾಟಕ್ಕೆ ಮುಂದಾಯಿತು. ಆದರೀಗ ಇಲಾಖೆ ಮಾರಾಟ ಮಾಡುವ ಉತ್ಪನ್ನಗಳಲ್ಲೇ ಕಲ್ಲು ತುಂಬಿದೆ. ದೂರು ನೀಡಲು ಕಂಪೆನಿಗೆ ಫೋನಾಯಿಸಿದರೂ ಕರೆಯೇ ಹೋಗುತ್ತಿಲ್ಲ.
Advertisement
ಬಿಲ್ ಇಲ್ಲ7 ಸಾವಿರ ರೂ.ಗಳ ಖರೀದಿಯನ್ನು ಮಾಡಿದ್ದರೂ ಕೃಷಿ ಇಲಾಖೆ ಬಿಲ್ ನೀಡಿಲ್ಲ. ರಾಜ್ಯ ಸರಕಾರವಾಗಲೀ, ಕೇಂದ್ರ ಸರಕಾರವಾಗಲಿ ಬಿಲ್ ಇಲ್ಲದೇ ಯಾರೂ ವ್ಯಾಪಾರ, ವಹಿವಾಟು ಮಾಡುವಂತಿಲ್ಲ ಎಂದು ಕಡ್ಡಾಯ ಮಾಡಿದೆ. ಸರಕಾರಿ ಇಲಾಖೆಗಳಲ್ಲಂತೂ ರಶೀದಿ ರಹಿತ ವ್ಯವಹಾರ ಅಂದರೆ ಅದು ಲಂಚ ಅಥವಾ ಲೆಕ್ಕಕ್ಕೆ ಸೇರದ್ದು ಎಂದೇ ಅರ್ಥ. ಕಠಿನ ಕಾನೂನು ಇದ್ದರೂ ಇಲಾಖೆಯಲ್ಲಿ ರೈತರಿಗೆ ಬಿಲ್ ನೀಡಲಾಗುತ್ತಿಲ್ಲ. ತೋಟಗಾರಿಕೆ ಇಲಾಖೆಯಲ್ಲೂ ಸಮಸ್ಯೆ
ತೋಟಗಾರಿಕೆ ಇಲಾಖೆ ಯಿಂದ ಕೃಷಿಭೂಮಿಯಲ್ಲಿ ಪೈಪ್‌ಲೈನ್ ಅಳವಡಿಕೆಗೆ ಶೇ.95ರಷ್ಟು ಸಬ್ಸಿಡಿ ನೀಡುತ್ತಾರೆ. ಈ ಮೊದಲೆಲ್ಲ ಸರಕಾರದಿಂದ ಗುರುತಿಸಲ್ಪಟ್ಟ ಅಂಗಡಿಯವರು ತೋಟಗಾರಿಕೆ ಇಲಾಖೆಯವರು ನಮೂದಿಸಿದ ದರದಲ್ಲಿ ರೈತರಿಗೆ ಪೈಪ್‌ಗ್ಳನ್ನು ನೀಡುತ್ತಿದ್ದರು. ಈ ಬಿಲ್‌ನ ಆಧಾರದಲ್ಲಿ ಇಲಾಖೆ ರೈತರ ಖಾತೆಗೆ ಸಬ್ಸಿಡಿ ಹಣ ನೀಡುತ್ತಿತ್ತು. ಆದರೆ ಈಗ ಅಂಗಡಿಯವರು ಇಲಾಖೆ ಹೇಳಿದ ದರದಲ್ಲಿ ಸಾಮಾಗ್ರಿ ನೀಡಲು ಒಪ್ಪುತ್ತಿಲ್ಲ. 245 ರೂ. ಪೈಪ್‌ಗೆ ಇಲಾಖಾ ದರ 360 ರೂ. ವಿಧಿಸುತ್ತಿದ್ದಾರೆಂದು ತಾಲೂಕು ಪಂಚಾಯತ್ ಮಾಜಿ ಸದಸ್ಯ ಮಂಜುನಾಥ ಸಾಲಿಯಾನ್ ದೂರುತ್ತಾರೆ. ಕಂಪೆನಿ ಬಿಲ್, ನಮ್ಮದಲ್ಲ
ರಾಜ್ಯಮಟ್ಟದಲ್ಲಿ ಟೆಂಡರ್ ಆಗಿ ಕಂಪೆನಿಯಿಂದ ಉತ್ಪನ್ನಗಳು ಬರುತ್ತವೆ. ಆದ್ದರಿಂದ ಅದರ ಗುಣಮಟ್ಟದ ಕುರಿತು ನಮಗೆ ಮಾಹಿತಿ ಇರುವುದಿಲ್ಲ. ಕೃಷಿ ಸುಣ್ಣ ಆದ ಕಾರಣ ಕೃಷಿಗೆ ಬೇಕಾದಷ್ಟು ಪ್ರಮಾಣದಲ್ಲಿ ಅಗತ್ಯವಿರುವ ಅಂಶಗಳು ಇರುತ್ತವೆ. ಬಿಲ್ ಇಲಾಖೆ ವತಿಯಿಂದ ನೀಡುವ ಕ್ರಮ ಇಲ್ಲ. ಕಂಪೆನಿಯ ಉತ್ಪನ್ನಗಳನ್ನು ಸರಕಾರ ಸೂಚಿಸಿದ ರಿಯಾಯಿತಿ ದರದಲ್ಲಿ ನಾವು ರೈತರಿಗೆ ನೀಡುತ್ತೇವೆ. ರೈತರು ನೀಡಿದ ಹಣ ನೇರ ಉತ್ಪಾದಕ ಕಂಪೆನಿಗೇ ಹೋಗುತ್ತದೆ. ಕಂಪೆನಿಯವರು ಬಿಲ್ ಪುಸ್ತಕ ನೀಡಲು ವಿಳಂಬ ಮಾಡಿದ್ದು ರೈತರಿಗೆ ತೊಂದರೆಯಾಗದಂತೆ ವ್ಯವಹರಿಸಿದ್ದೇವೆ.
– ತಿಲಕ್‌ಪ್ರಸಾದ್‌ಜೀ
ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ. – ಲಕ್ಷ್ಮೀ ಮಚ್ಚಿನ