ಗ್ರಾ.ಪಂ. ಅಧ್ಯಕ್ಷೆ ಲಲಿತಾ ರೈ ಮೈಕಾಜೆ ಅವರ ಅಧ್ಯಕ್ಷತೆಯಲ್ಲಿ ಮರ್ದಾಳ ಅಂಬೇಡ್ಕರ್ ಭವನದಲ್ಲಿ ಸಭೆ ಜರಗಿತು. ತಾ.ಪಂ. ಯೋಜನಾಧಿಕಾರಿ ಗಣಪತಿ ಭಟ್ ಅವರು ಚರ್ಚಾ ನಿಯಂತ್ರಣಾಧಿಕಾರಿಯಾಗಿ ಭಾಗವಹಿಸಿದ್ದರು.
Advertisement
ಗ್ರಾಮ ಸಭೆಗೆ ಪ್ರಮುಖ ಇಲಾಖೆಯ ಅಧಿಕಾರಿಗಳು ಬಾರದೇ ಇರುವುದನ್ನು ಕಂಡ ಗ್ರಾ.ಪಂ. ಮಾಜಿ ಅಧ್ಯಕ್ಷ ಹರೀಶ್ ರೈ ನಡುಮಜಲು ಅವರು ಗ್ರಾಮಸ್ಥರಿಗೆ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ನೀಡಬೇಕಾದ ಪ್ರಮುಖ ಇಲಾಖೆಗಳ ಅಧಿಕಾರಿಗಳೇ ಬಾರದಿದ್ದರೆ ಗ್ರಾಮಸಭೆ ಯಾರಿಗಾಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪ್ರಮುಖ ಎಲ್ಲ ಇಲಾಖಾಧಿಕಾರಿಗಳು ಮುಂದಿನ ಗ್ರಾಮ ಸಭೆಯಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ನಿರ್ಣಯ ಕೈಗೊಳ್ಳಲಾಯಿತು.
ಕಡಬ ಮೆಸ್ಕಾಂ ಜೆ.ಇ. ನಾಗರಾಜ್ ಅವರು ಇಲಾಖಾ ಮಾಹಿತಿ ನೀಡಿ, ಮರ್ದಾಳ ಗ್ರಾ.ಪಂ. ವ್ಯಾಪ್ತಿಯ ಬಂಟ್ರ ಗ್ರಾಮವನ್ನು ಆದರ್ಶ ಗ್ರಾಮ ಯೋಜನೆಯಲ್ಲಿ ಸೇರಿಸಲಾಗಿದ್ದು, ದೀನ್ ದಯಾಳ್ ಯೋಜನೆಯಲ್ಲಿ ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗುವುದು. ಹಳೆಯ ದುರಸ್ತಿಯಲ್ಲಿರುವ ತಂತಿಗಳನ್ನು ತೆಗೆದು ಹೊಸ ತಂತಿಗಳನ್ನು ಅಳವಡಿಸಲಾಗುವುದು ಎಂದರು. ತಾ.ಪಂ. ಸದಸ್ಯ ಗಣೇಶ್ ಕೈಕುರೆ ಮಾತನಾಡಿ, ಮರ್ದಾಳದಲ್ಲಿ ತಿಂಗಳಲ್ಲಿ ಒಂದು ಬಾರಿ ವಿದ್ಯುತ್ ಬಿಲ್ ಸಂಗ್ರಹಿಸಲಾಗುತ್ತಿದೆ. ಗ್ರಾಹಕರ ಅನುಕೂಲಕ್ಕಾಗಿ ತಿಂಗಳಿಗೆ ಎರಡು ಬಾರಿ ಬಿಲ್ ಸಂಗ್ರಹಕ್ಕೆ ಕ್ರಮ ಕೈಗೊಳ್ಳುವುದಾದರೆ ತಮ್ಮ ಕಟ್ಟಡದಲ್ಲಿ ಉಚಿತವಾಗಿ ಒಂದು ಕೊಠಡಿಯನ್ನು ಮೆಸ್ಕಾಂ ಬಿಲ್ ವಸೂಲಾತಿಗೆ ನೀಡುವುದಾಗಿ ತಿಳಿಸಿದರು.
Related Articles
ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್ ಅವರು ಮಾಹಿತಿ ನೀಡುತ್ತಿದ್ದ ವೇಳೆ ಮಾತನಾಡಿದ ಗ್ರಾ.ಪಂ.ಸದಸ್ಯ ಹರೀಶ್ ಕೋಡಂದೂರು ಅವರು, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಂಟ್ರ ಗ್ರಾಮದ ನೀರಾಜೆಯ ದಲಿತ ಮಹಿಳೆಯೋರ್ವರನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಮೂರು ದಿನ ಜನರಲ್ ವಾರ್ಡ್‌ನಲ್ಲಿಟ್ಟು ಬಳಿಕ ಮಧ್ಯರಾತ್ರಿ ಬಂದು ಇಲ್ಲಿ ತೀವ್ರ ನಿಗಾ ಘಟಕದಲ್ಲಿ ಜಾಗ ಇಲ್ಲದೇ ಇರುವುದರಿಂದ ಬೇರೆ ಆಸ್ಪತ್ರೆಗೆ ದಾಖಲಿಸಿ ಅಥವಾ ಮನೆಗೆ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ವಿಷಯವನ್ನು ನಾನು ಜಿ.ಪಂ. ಮಾಜಿ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ಅವರು ಫೋನಾಯಿಸಿದ ಬಳಿಕ ತುರ್ತು ನಿಗಾ ಘಟಕಕ್ಕೆ ದಾಖಲಿಸಿಕೊಂಡರು. ಸರಕಾರಿ ಆಸ್ಪತ್ರೆಯಲ್ಲಿ ಬಡವರನ್ನು ಈ ರೀತಿ ಸತಾಯಿಸುವುದು ಸರಿಯೇ ಎಂದು ಪ್ರಶ್ನಿಸಿದರು. ಇದಕ್ಕೆ ತಾ.ಪಂ. ಸದಸ್ಯೆ ಪಿ.ವೈ. ಕುಸುಮಾ ದನಿಗೂಡಿಸಿದರು. ಈ ಬಗ್ಗೆ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ವೈದ್ಯಾಧಿಕಾರಿ ಅವರು ಪ್ರತಿಕ್ರಿಯಿಸಿದರು.
Advertisement
ಬಂಟ್ರ ಗ್ರಾಮದ ಕೃಷ್ಣನಗರದಲ್ಲಿ ಅಂಗನವಾಡಿ ಕೇಂದ್ರ ತೆರೆಯಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಕೋಡಂದೂರು ಅವರು ವಿಷಯ ಪ್ರಸ್ತಾಪಿಸಿದರು.
ಈ ಕುರಿತು ಇಲಾಖಾ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಕಡಬ ವಲಯ ಮೇಲ್ವಿಚಾರಕಿ ಹೇಮರಾಮ್‌ದಾಸ್ ಅವರು ತಿಳಿಸಿದರು. ಕೆಲವು ಗ್ರಾಮ ಪಂಚಾಯತ್‌ಗಳಲ್ಲಿ ನರೇಗಾ ಯೋಜನೆಯಲ್ಲಿ 1 ಕೋಟಿ ರೂ.ಗೂ ಹೆಚ್ಚಿನ ಅಭಿವೃದ್ಧಿ ಕಾರ್ಯ ನಡೆದಿದೆ. ಅದರೆ ಇಲ್ಲಿ ಕೇವಲ 6 ಲಕ್ಷ ರೂ. ಗಳ ಕೆಲಸ ನಡೆದಿದೆ. ಉದ್ಯೋಗ ಖಾತರಿ ಕುರಿತು ಮಾಹಿತಿ ನೀಡಿ ಎಂದು ಚಂದ್ರಶೇಖರ ತುಂಬಿಮನೆ ಆಗ್ರಹಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲತಾ ಕೆ.ಎಸ್., ಸದಸ್ಯರಾದ ದಾಮೋದರ ಗೌಡ ಡೆಪ್ಪುಣೆ, ಮೀನಾಕ್ಷಿ ಆಚಾರ್ಯ, ಸುಶೀಲಾ, ಗಿರಿಜಾ ಮೊದಲಾದವರು ಉಪಸ್ಥಿತರಿದ್ದರು. ಲೆಕ್ಕ ಸಹಾಯಕ ಭುವನೇಂದ್ರ ಕುಮಾರ್ ಸ್ವಾಗತಿಸಿ, ವರದಿ ವಾಚಿಸಿದರು. ಪಿ.ಡಿ.ಒ. ವೆಂಕಟರಮಣ ಗೌಡ ವಂದಿಸಿದರು.