Advertisement

ಬಿಸಿಯೂಟ ಅಡುಗೆ ಸಿಬಂದಿಗೂ ವಿಶೇಷ ತರಬೇತಿಗೆ ಇಲಾಖೆ ಸಿದ್ಧತೆ

12:39 AM Dec 15, 2022 | Team Udayavani |

ದಾವಣಗೆರೆ: ರಾಜ್ಯ ಸರಕಾರದ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಹಾಗೂ ಸಾಮಾಜಿಕ ಪರಿಶೋಧನ ನಿರ್ದೇಶನಾಲಯವು ಶಾಲೆಗಳಲ್ಲಿ ಮಧ್ಯಾಹ್ನದ ಉಪಹಾರ ಯೋಜನೆಗೆ ಸಂಬಂಧಿಸಿ ಶುಚಿತ್ವ-ವ್ಯವಸ್ಥಿತ ನಿರ್ವಹಣೆ ಕುರಿತು ನೀಡಿದ ಮಹತ್ವದ ಶಿಫಾರಸುಗಳಿಗೆ ಪೂರಕವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯದ ಎಲ್ಲ ಶಾಲೆಗಳ ಬಿಸಿಯೂಟ ಯೋಜನೆಯ ಅಡುಗೆ ಸಿಬಂದಿಗೆ ವಿಶೇಷ ತರಬೇತಿ ನೀಡಲು ಮುಂದಾಗಿದೆ.

Advertisement

ಶಾಲಾ ಅಡುಗೆ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬಂದಿಗೆ ಪ್ರಸಕ್ತ ತಿಂಗಳಲ್ಲೇ ಒಂದು ದಿನದ ತರಬೇತಿ ನೀಡಲು ರಾಜ್ಯದ ಎಲ್ಲ ಶೈಕ್ಷಣಿಕ ಜಿಲ್ಲೆಗಳ ಅಕ್ಷರ ದಾಸೋಹ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದೆ. ತರಬೇತಿಯನ್ನು ತಾಲೂಕು ಮಟ್ಟದಲ್ಲಿ ನಡೆಸಲಾಗುತ್ತಿದ್ದು, ಇದಕ್ಕಾಗಿ ಒಬ್ಬರಿಗೆ ದಿನಕ್ಕೆ 100 ರೂ. ವೆಚ್ಚ ಭರಿಸಲು ಅಕ್ಷರ ದಾಸೋಹ ಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಅಡುಗೆ ಸಿಬಂದಿಯ ನಿರ್ದಿಷ್ಟ ಕೆಲಸಗಳು ಹಾಗೂ ಪಡೆಯುವ ಸೌಲಭ್ಯಗಳ ಬಗ್ಗೆ ಪರಿಚಯಿಸಿ ಕೊಡಬೇಕು. ಅಡುಗೆ ಕೇಂದ್ರಗಳಲ್ಲಿ ಸ್ವತ್ಛತೆ, ನೈರ್ಮಲ್ಯ ಮತ್ತು ಸುರಕ್ಷತ ಕ್ರಮಗಳ ಅರಿವು ಹಾಗೂ ನಿರ್ವಹಣೆಯ ಬಗ್ಗೆ ಮಾರ್ಗದರ್ಶನ ನೀಡಬೇಕು ಸೇರಿದಂತೆ ಅಡುಗೆ ಹಾಗೂ ಅಡುಗೆ ಕೇಂದ್ರದ ನಿರ್ವಹಣೆ ಬಗ್ಗೆ ವಿವಿಧ ವಿಷಯಗಳ ಕುರಿತು ತಜ್ಞರಿಂದ ಅನುಭವಿಗಳಿಗೆ ಉಪನ್ಯಾಸ, ಪ್ರಾತ್ಯಕ್ಷಿಕೆ ಮೂಲಕ ತರಬೇತಿಯಲ್ಲಿ ತಿಳಿವಳಿಕೆ ನೀಡಲಾಗುತ್ತದೆ.

ತರಬೇತಿ ವಿಷಯಗಳು
ಅಡುಗೆ ಸಿಬಂದಿಗಳ ಪಾತ್ರ ಹಾಗೂ ನಿರ್ವಹಣ ಕಾರ್ಯ, ಪೌಷ್ಟಿಕ ಆಹಾರ ವಿತರಣೆ ಅಗತ್ಯತೆ, ವಾರದ ಆಹಾರ ಪಟ್ಟಿ, ಅಡುಗೆ ನಿರ್ವಹಣೆ ಮಾರ್ಗಸೂಚಿ, ಆಹಾರದ ಗುಣಮಟ್ಟ ಮತ್ತು ಸುರಕ್ಷತ ನಿಯಮಗಳು, ಸ್ವಯಂಸೇವಾ ಸಂಸ್ಥೆಯ ಬಿಸಿಯೂಟ ಸರಬರಾಜು, ವೈಯಕ್ತಿಕ ಸ್ವತ್ಛತೆ ಹಾಗೂ ನೈರ್ಮಲ್ಯ, ಅಡುಗೆ ಕೇಂದ್ರದಲ್ಲಿ ಸುರಕ್ಷತೆ, ಅಗ್ನಿನಂದಕಗಳ ಬಳಕೆ ಹಾಗೂ ಮಹತ್ವ, ಅಡುಗೆ ಸಿಬಂದಿಯ ನಿರ್ದಿಷ್ಟ ಚಟುವಟಿಕೆ, ಮಧ್ಯಾಹ್ನದ ಬಿಸಿಯೂಟದಲ್ಲಿ ಕೈತೋಟದ ಪಾತ್ರ, ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷಾಚರಣೆ, ನಿರ್ದಿಷ್ಟ ಪ್ರಮಾಣದಲ್ಲಿ ಗುಣಮಟ್ಟದ ಆಹಾರ ವಿತರಣೆ, ಗ್ಯಾಸ್‌ ಒಲೆ, ಸಿಲಿಂಡರ್‌ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.

ಮುಖ್ಯ ಉದ್ದೇಶಗಳು
ಅಡುಗೆ ಕೆಲಸದಲ್ಲಿ ವೈಯಕ್ತಿಕ ಸ್ವತ್ಛತೆ ಹಾಗೂ ಸುರಕ್ಷತೆ ಕಾಪಾಡಿಕೊಳ್ಳುವುದು ಹಾಗೂ ಬಿಸಿಯೂಟ ಬಡಿಸುವಾಗ ಪಾಲಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ತಿಳಿಸುವುದು, ಶಾಲಾ ಮಕ್ಕಳ ಆಹಾರದಲ್ಲಿ ಅಗತ್ಯವಾಗಿ ಇರಬೇಕಾದ ಪೌಷ್ಟಿಕತೆ, ಬಹುಪೋಷಕಾಂಶಗಳ ಬಗ್ಗೆ ಹಾಗೂ ಅವುಗಳ ಮಹತ್ವ , ಉಪಯೋಗದ ಬಗ್ಗೆ ಅರಿವು ಮೂಡಿಸುವುದು. ಆಹಾರ ಪದಾರ್ಥಗಳ ಸುರಕ್ಷಿತ ದಾಸ್ತಾನು, ಆಹಾರದ ಗುಣಮಟ್ಟ ಕಾಯ್ದುಕೊಳ್ಳುವುದು. ಸಿರಿಧಾನ್ಯದಿಂದ ತಯಾರಿಸುವ ವೈವಿಧ್ಯಮಯ ಆಹಾರಗಳ ಬಗ್ಗೆ ತಿಳಿಸುವುದು ತರಬೇತಿಯ ಮುಖ್ಯ ಉದ್ದೇಶವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next