ವಿಜಯಪುರ: ಪಿಎಫ್‌ಐ ಸೇರಿದಂತೆ ವಿವಿಧ ಸಂಘಟನೆಗಳ ನಿಷೇಧಕ್ಕೆ ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿದ್ದ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಅನುಮತಿ ನಿರಕಾರಿಸಿ ಬಿಜೆಪಿ ನಾಯಕರನ್ನು ಬಂಧಿ ಸಲಾಗಿದೆ ಎಂದು ಆರೋಪಿಸಿ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಬಿಜೆಪಿ
ಕಾರ್ಯಕರ್ತರು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಮಂಗಳವಾರ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಬೈಕ್‌ರ್ಯಾಲಿ ನಡೆಸಲು ಮುಂದಾಗಿದ್ದ ಬಿಜೆಪಿ ನಾಯಕರನ್ನು ಪೊಲೀಸರನ್ನು ಬಳಸಿಕೊಂಡು ಸರ್ಕಾರ ದೌರ್ಜನ್ಯ ನಡೆಸುತ್ತಿದೆ ಎಂದು ಕಿಡಿ ಕಾರಿದ ಕಾರ್ಯಕರ್ತರು, ನಗರದಲ್ಲಿರುವ ಸೊಲ್ಲಾಪುರ ಬೈಪಾಸ್ ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಮೋರ್ಚಾ ಜಿಲ್ಲಾಧ್ಯಕ್ಷ ರವಿ ಖಾನಾಪುರ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ಈ ವೇಳೆ ಮಾತನಾಡಿದ ಪ್ರತಿಭನಾನಿರತ ಬಿಜೆಪಿ ನಾಯಕರು, ರಾಜ್ಯದ ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಕ್ಕಾಗಿ ಪ್ರತಿಭಟಿಸುವ ಹಕ್ಕುಗಳನ್ನು ಪೊಲೀಸ್ ಬಲ ಬಳಸಿಕೊಂಡು ದಮನ ಮಾಡುವ ಕೃತ್ಯಕ್ಕೆ ಕೈ ಹಾಕಿದೆ. ಮತ್ತೂಂದೆಡೆ ಪಿಎಫ್‌ಐ ಸೇರಿದಂತೆ ಮತೀಯವಾಗಿ ಸಮಾಜ ಬಾಹೀರ ಸಂಘಟನೆಗಳನ್ನು ನಿಷೇಧಿಸದೆ ಕುಮ್ಮಕ್ಕು ನೀಡುತ್ತಿದೆ. ಇದನ್ನು ಪ್ರಶ್ನಿಸಿ ಪ್ರತಿಭಟನೆಗೆ ಮುಂದಾದ ಬಿಜೆಪಿ ನಾಯಕರನ್ನು ಬಂಧಿ ಸುವ ಮೂಲಕ ಹೋರಾಟ ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದೆ. ಆ ಮೂಲಕ ಕಾಂಗ್ರೆಸ್ ಸರ್ಕಾರ ತನ್ನ ದೌರ್ಬಲ್ಯ ಮುಚ್ಚಿಕೊಳ್ಳಲು ಮಂಗಳೂರು ಚಲೋ ಬೈಕ್‌ರ್ಯಾಲಿ ನಿಷೇಧಿಸಿ ಬಿಜೆಪಿ ನಾಯಕರನ್ನು ಬಂಧಿಸಿ ಹೋರಾಟ ಹತ್ತಿಕ್ಕುವ ಹುನ್ನಾರ ನಡೆಸಿದೆ ಎಂದು ಕಿಡಿ ಕಾರಿದರು.
ಬಿಜೆಪಿ ಹಿರಿಯ ಮುಖಂಡ ವಿಜುಗೌಡ ಪಾಟೀಲ, ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಶರತ್ ಬಿರಾದಾರ, ಡಾ| ಪ್ರಶಾಂತ ಕಟಕೋಳ, ಸೋಮನಗೌಡ ಪಾಟೀಲ ಸಾಸನೂರ, ಭೀಮಾಶಂಕರ ಹದನೂರ, ಆನಂದ ಮುಚ್ಚಂಡಿ, ಈರಣ್ಣ ಪಟ್ಟಣಶೆಟ್ಟಿ ಸೇರಿದಂತೆ ಇತರೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.