ಘಟನೆ ಪೂರ್ವಯೋಜಿತವಲ್ಲ ಎಂಬ ಸ್ಪಷ್ಟ ತೀರ್ಪು ಬಂದಿದೆ. ಮಾನಸಿಕ ನೋವಿನಲ್ಲಿದ್ದ ಹಿರಿಯರಿಗೆ ಈಗ ನೆಮ್ಮದಿ ದೊರೆತಿದೆ. ರಾಷ್ಟ್ರೀಯ ಜನಾಂದೋಲನಕ್ಕೆ ವಿಜಯ ನ್ಯಾಯಾಲಯದಿಂದಲೇ ಸಿಕ್ಕಿದೆ.
ರಾಮ ಜನ್ಮಭೂಮಿ ಆಂದೋಲನ ಅಯೋ ಧ್ಯೆಗೆ ಸೀಮಿತವಾಗಿರ ಲಿಲ್ಲ. ಇದೊಂದು ರಾಷ್ಟ್ರೀಯ ಆಂದೋಲನ ವಾಗಿತ್ತು. ದೇಶದ ಮೂಲೆ ಮೂಲೆಗಳಿಂದ ಅಯೋಧ್ಯೆ ನಗರದಲ್ಲಿ ಸೇರಿದ್ದ ಲಕ್ಷಾಂತರ ಕರಸೇವಕರ ಆಕ್ರೋಶ 1992 ಡಿಸೆಂಬರ್ 6ರಂದು ಆಸ್ಫೋಟಗೊಂಡ ಪರಿಣಾಮ ವಿವಾದಿತ ಬಾಬರಿ ಕಟ್ಟಡ ಧ್ವಂಸವಾಯಿತು. ರಾಮಜನ್ಮ ಭೂಮಿಯ ಇಡೀ ಹೋರಾಟದಲ್ಲಿ ಬಾಬರಿ ಕಟ್ಟಡ ಧ್ವಂಸ ಮಾಡಬೇಕು ಎಂಬುಂದು ಎಂದೂ ಪೂರ್ವ ಯೋಜಿತವಾಗಿರಲಿಲ್ಲ. ಸ್ವರ್ಗೀಯರಾಗಿರುವ ಪೇಜಾವರ ಮಠದ ವಿಶ್ವೇಶತೀರ್ಥರು, ವಿಶ್ವಹಿಂದು ಪರಿಷತ್‌ನ ಅಶೋಕ್ ಸಿಂಘಾಲ್ ಮೊದಲುಗೊಂಡು ಸಂಘಟನೆಯ ಹಿರಿಯರಾದ ಲಾಲ್‌ಕೃಷ್ಣ ಆಡ್ವಾಣಿ, ಮುರಳಿ ಮನೋಹರ ಜೋಷಿ ಸಹಿತವಾಗಿ ಮುಂಚೂಣಿಯಲ್ಲಿದ್ದ ಎಲ್ಲ ನಾಯಕರು ಕರಸೇವಕರನ್ನು ತಡೆಯುವ ಪ್ರಯತ್ನ ಮಾಡಿದ್ದರು. ಆದರೆ, ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ಜನರ ಆಕ್ರೋಶದ ಕಟ್ಟೆ ಒಡೆದು ಆಸ್ಫೋಟ ಗೊಂಡಿತ್ತು. ಪರಿಣಾಮ ಬಾಬರಿ ಕಟ್ಟಡ ನೆಲ ಸಮವಾಯಿತು. ಘಟನೆ ಪೂರ್ವಯೋಜಿತವಲ್ಲ ಎಂಬುದನ್ನು ಈಗ ಸಿಬಿಐ ವಿಶೇಷ ನ್ಯಾಯಾಲಯವೇ ತನ್ನ ತೀರ್ಪಿನಲ್ಲಿ ಹೇಳಿದೆ.
ರಾಮ ಜನ್ಮಭೂಮಿ ಹೋರಾಟ 1984ರಿಂದಲೇ ಆರಂಭವಾಗಿತ್ತು. ಬಾಬರಿ ಕಟ್ಟಡ ಒಳಗಿನ ಕೊಠಡಿಯೊಂದರಲ್ಲಿ ರಾಮಲಲ್ಲಾನ ಮೂರ್ತಿಯನ್ನು ಇಟ್ಟು ಬೀಗ ಹಾಕಿದ್ದರು. ಆ ಕೊಠಡಿಯ ಬೀಗ ಒಡೆಯುವುದೇ ಹೋರಾಟ ಮೊದಲ ಹೆಜ್ಜೆಯಾಗಿತ್ತು. ಅದರಂತೆ 1985ರಲ್ಲಿ ಉಡುಪಿಯಲ್ಲಿ ನಡೆದ ಧರ್ಮ ಸಮ್ಮೇಳನದಲ್ಲಿ 850ಕ್ಕೂ ಅಧಿಕ ಸಂತರು ಸೇರಿ ರಾಮಲಲ್ಲಾನ ಮೂರ್ತಿಯಿಟ್ಟ ಕೊಠಡಿಯ ಬೀಗ ತೆಗೆಯುವ ಹೋರಾಟ ಕೈಗೆತ್ತಿಕೊಂಡರು. ಅದರಂತೆ 1986ರಲ್ಲಿ ಬೀಗ ತೆಗೆಯಲಾಯಿತು. ಅಲ್ಲಿಂದ ರಾಮ ಜನ್ಮ ಭೂಮಿಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣದ ಹೋರಾಟ ಆರಂಭವಾಯಿತು. ಜನ ಮಾನಸದಿಂದಲೇ ಈ ಆಂದೋಲನ ರೂಪಿಸಲು ಕಾರ್ಯತಂತ್ರ ರಚಿಸಲಾಯಿತು. ರಾಮ ಜನ್ಮ ಭೂಮಿಯಲ್ಲೇ ಭವ್ಯ ಮಂದಿರ ನಿರ್ಮಾಣ ಸಂಕಲ್ಪಕ್ಕೆ ಸಾರ್ವಜನಿಕರಿಂದಲೇ ನೀಲನಕ್ಷೆ ಸಿದ್ಧವಾಯಿತು. 1988ರಲ್ಲಿ ಪ್ರಯಾಗದಲ್ಲಿ ನಡೆದ ಕುಂಭ ಮೇಳದಲ್ಲಿ ತೆಗೆದುಕೊಂಡ ನಿರ್ಧಾರದಂತೆ ರಾಮಶಿಲಾ ಪೂಜಾ ಕಾರ್ಯಕ್ರಮ ರೂಪಿಸಲಾಯಿತು ಮತ್ತು ಇದಕ್ಕೇ ಇಡೀ ದೇಶವೇ ಒಂದಾಯಿತು. ದೇಶದ ತಾಲೂಕು, ಜಿಲ್ಲೆ, ರಾಜ್ಯಗಳಲ್ಲಿ ರಾಮಶಿಲಾ ಪೂಜೆ ಕಾರ್ಯಕ್ರಮ ನಡೆಯಿತು. 2.50 ಲಕ್ಷಕ್ಕೂ ಅಧಿಕ ಇಟ್ಟಿಗೆಯನ್ನು ಪ್ರತಿ ಊರುಗಳಿಂದಲೂ ಪೂಜೆ ಮಾಡಿ ಅಯೋಧ್ಯೆಗೆ ಕಳುಹಿಸುವ ಪ್ರಕ್ರಿಯೆ ಆರಂಭವಾಯಿತು.
1989ರ ನವೆಂಬರ್ 10ರಂದು ಸಾಂಕೇತಿಕ ವಾಗಿ ಶಿಲಾನ್ಯಾಸ ಕಾರ್ಯ ನೇರವೇರಿತು. ನಂತರ ರಾಮ ಮಂದಿರ ನಿರ್ಮಾಣಕ್ಕೆ ನ್ಯಾಯಲಯ ಹಾಗೂ ಸರಕಾರಗಳ ಮುಂದೆ ಹೋರಾಟ ರೂಪಿಸಲಾಯಿತು. 1990ರಲ್ಲಿ ನಡೆದ ಧರ್ಮ ಸಂಸತ್ ಅಧಿವೇಶನದಲ್ಲಿ ರಾಮಜ್ಯೋತಿ ಯಾತ್ರೆ ನಿರ್ಧರಿಸಲಾಯಿತು. ದೇಶದ ಪ್ರತಿ ತಾಲೂಕು, ಜಿಲ್ಲೆ ಹಾಗೂ ರಾಜ್ಯಗಳಲ್ಲೂ ರಾಮಜ್ಯೋತಿ ಯಾತ್ರೆ ಸಂಚರಿಸಿತು. 1990ರ ಅಕ್ಟೋಬರ್‌ನಲ್ಲಿ ಮೊದಲ ಕರಸೇವೆ ನಡೆಯಿತು. ಉತ್ತರ ಪ್ರದೇಶ ಸರಕಾರ ಕರಸೇವಕರನ್ನು ಹತ್ತಿಕ್ಕುವ ಪ್ರಯತ್ನ ಮಾಡಿತ್ತು. ಅನೇಕರು ಜೈಲು ಸೇರಿದ್ದರು, ಬಲಿದಾನವೂ ನಡೆಯಿತು.
ಇದಾದ ನಂತರ 1991ರಲ್ಲಿ ದಿಲ್ಲಿಯಲ್ಲಿ ಜನಾದೇಶ ರ್ಯಾಲಿ ಹಮ್ಮಿಕೊಳ್ಳಲಾಯಿತು. ರಾಮ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಜನಾದೇಶ ರ್ಯಾಲಿಯಲ್ಲಿ ಸೇರಿದ್ದರು. ದೇಶದ ಮೂಲೆ ಮೂಲೆಗೂ ರಾಮಜನ್ಮ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣದ ಆಂದೋಲ ಆರಂಭವಾಯಿತು. 1992ರ ಆಗಸ್ಟ್, ಸೆಪ್ಟಂಬರ್‌ನಲ್ಲಿ ಪಾದುಕೆ ಯಾತ್ರೆ ನಡೆಯಿತು. ಶ್ರೀರಾಮನ ಪಾದುಕೆ ಯಾತ್ರೆ ದೇಶ ಪೂರ್ತಿ ಸುತ್ತಿ ಅಯೋಧ್ಯೆಗೆ ಬಂದಿತು. ಅಷ್ಟೊತ್ತಿಗಾಗಲೇ ದೇಶಾದ್ಯಂತ ರಾಮ ಮಂದಿರ ನಿರ್ಮಾಣದ ಅತಿದೊಡ್ಡ ಆಶೋತ್ತರ, ಆಗ್ರಹ, ಹೋರಾಟ ಮುಗಿಲು ಮುಟ್ಟಿತ್ತು. ಕರಸೇವಕರು ಅಯೋಧ್ಯೆಯೆಡೆ ಸಾಗರದಂತೆ ಹರಿದು ಬರಲಾರಂಭಿಸಿದರು. ಪೂಜೆಗಾಗಿ ನ್ಯಾಯಾಲಯದಲ್ಲೂ ಮನವಿ ಸಲ್ಲಿಸಲಾಗಿತ್ತು. ಆದರೆ, ನ್ಯಾಯಾಲಯದಿಂದ ಸ್ಪಷ್ಟ ತೀರ್ಪು ನೀಡದೇ ಅರ್ಜಿ ವಿಚಾರಣೆ ಮುಂದೂಡಿತ್ತು. ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ ಜನರು ಆಕ್ರೋಶ ಭರಿತರಾಗಿ 1992ರ ಡಿ.6ರಂದು ಬಾಬರಿ ಕಟ್ಟಡವನ್ನು ನೆಲಸಮ ಮಾಡಿದರು. ಅಂದು ಜನಾಕ್ರೋಶವನ್ನು ಯಾರಿಂದಲೂ ತಡೆಯಲು ಸಾಧ್ಯವಿರಲಿಲ್ಲ. ಬಾಬರಿ ಕಟ್ಟಡ ನೆಲಸಮ ಮಾಡಿ ರುವುದು ಪೂರ್ವಯೋಜಿತವಲ್ಲ. ಕರಸೇವಕರು ಪೂಜೆಗಾಗಿ ಅಲ್ಲಿ ಸೇರಿದ್ದರು. ಕರಸೇವಕರ ಆಕ್ರೋಶ ಆಸ್ಫೋಟಗೊಂಡು, ಬಾಬರಿ ಕಟ್ಟಡ ನೆಲಸಮವಾಗಿದೆ. ಅಲ್ಲಿ, ರಾಮಲಲ್ಲಾನ ಮೂರ್ತಿ ಯನ್ನು ಪ್ರತಿಷ್ಠಾಪಿಸಿ, ಬೆಳಗ್ಗಿನ ಪೂಜೆಯನ್ನು ಯತಿಗಳಿಂದಲೇ ನೆರವೇರಿಸಲಾಗಿತ್ತು.
1992ರ ನಂತರ ರಾಮ ಜನ್ಮ ಭೂಮಿಯಲ್ಲಿ ಭವ್ಯ ರಾಮ ಮಂದಿರಕ್ಕಾಗಿ ಕಾನೂನು ಹೋರಾಟ ಆರಂಭವಾಯಿತು. ಬಾಬರಿ ಕಟ್ಟಡ ನೆಲಸಮದ ವಿಚಾರದಲ್ಲಿ ನ್ಯಾಯಾಲಯಗಳಲ್ಲಿ ಸುದೀರ್ಘ ವಿಚಾರಣೆ ನಡೆದಿದೆ. ಈಗ ಲಕ್ನೋ ವಿಶೇಷ ಸಿಬಿಐ ನ್ಯಾಯಾಲಯ ಇದೊಂದು ಪೂರ್ವಯೋಜಿ ತವಲ್ಲದ ಕೃತ್ಯ ಎಂದು ಸ್ಪಷ್ಟ ತೀರ್ಪು ನೀಡಿದೆ. ಈ ಮೂಲಕ ಮಾನಸಿಕ ನೋವಿನಲ್ಲಿದ್ದ ನಮ್ಮ ಹಿರಿಯರಿಗೆ ಈಗ ನೆಮ್ಮದಿ ದೊರೆತಿದೆ. ರಾಷ್ಟ್ರೀಯ ಜನಾಂದೋಲನಕ್ಕೆ ಮತ್ತೂಂದು ವಿಜಯ ನ್ಯಾಯಾಲದಿಂದಲೇ ಸಿಕ್ಕಿದೆ.
(ನಿರೂಪಣೆ: ರಾಜು ಖಾರ್ವಿ ಕೊಡೇರಿ)
ಕೇಶವ ಹೆಗಡೆ, ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ, ವಿಶ್ವ ಹಿಂದೂ ಪರಿಷತ್