ಪಿರಿಯಾಪಟ್ಟಣ: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸಂವಿಧಾನವನ್ನು ದುರ್ಬಲಗೊಳಿಸುತ್ತಿದೆ ಆದ್ದರಿಂದ ಮತ್ತೆ ಪ್ರಜಾಪ್ರಭುತ್ವವನ್ನು ಬಲಗೊಳಿಸಲು ಮತ್ತೊಮ್ಮೆ ಸ್ವಾತಂತ್ರ್ಯ ಚಳುವಳಿ ಆರಂಭಿಸಬೇಕಾದ ಅಗತ್ಯವಿದೆ ಎಂದು ಲೋಕೋಪಯೋಗಿ ಇಲಾಖೆ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಪಟ್ಟಣದ ಕನಕ ಸಮುದಾಯ ಭವನದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಜೆಪಿಯವರು ದೇಶದಲ್ಲಿ ನಿರುದ್ಯೋಗ ಸೃಷ್ಠಿ ಹಾಗೂ ದೇಶದ ಸಂಪನ್ಮೂಲಗಳನ್ನು ಖಾಸಗೀಕರಣ ಮಾಡಿ ಸರ್ವಾಧಿಕಾರತ್ವ ಮತ್ತು ತಾಲಿಬಾನ್ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ. ಇವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ, ದೇಶದಲ್ಲಿ ಅನೇಕ ಜಾತಿ, ಧರ್ಮ, ಭಾಷೆಗಳಿವೆ ಹೀಗಿದ್ದರೂ ಅರಾಜಕತೆ ಹಾಗೂ ಭಯದ ವಾತವರಣ ಸೃಷ್ಠಿಸುವ ಕೆಲಸ ಮಾಡುತ್ತಿದ್ದಾರೆ. ಅದಾನಿ, ಅಂಬಾನಿಯನ್ನು ಓಲೈಸಿಕೊಂಡು ಅನ್ನದಾತರನ್ನು ಬೀದಿಪಾಲು ಮಾಡುತ್ತಿದ್ದಾರೆ, ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಭಾರತದ ಧಾರ್ಮಿಕ ಮೂಲಭೂತವಾದ ಎರಡೂ ಒಂದೇ ಆಗಿದೆ, ದೇಶದಲ್ಲಿ ಎಲ್ಲಾ ವರ್ಗದ ಜನರು ಸಮನ್ವತೆಯಿಂದ ಜೀವನ ನಡೆಸುತ್ತಿರುವಾಗ ಹಿಂದೂ ಧರ್ಮ ಸ್ಥಾಪನೆ ಮಾಡುತ್ತೇವೆ ಎಂಬ ಭ್ರಮೆಯಲ್ಲಿ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರುತ್ತಿದ್ದಾರೆ ಇಂಥ ಜನವಿರೋಧಿ ನೀತಿ ಹೋಗಲಾಡಿಸಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಂಘಟಿತರಾಗಬೇಕು ಎಂದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಜೆಡಿಎಸ್ ದು ಮಿಷನ್ 123 ಅಲ್ಲ, ಟಾರ್ಗೆಟ್ ಸಿದ್ದರಾಮಯ್ಯ. ಕುಮಾರಸ್ವಾಮಿ ವಿರೋಧ ಪಕ್ಷದ ಕೆಲಸ ಮಾಡದೆ ಸಿದ್ದರಾಮಯ್ಯನವರನ್ನು ಟೀಕೆ ಮಾಡುತ್ತಿದ್ದಾರೆ, ಇವರ ಟಾರ್ಗೆಟ್ ಏನಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿಗೆ ಬಹುಮತ ಬಾರದ ಹಾಗೆ ನೋಡಿಕೊಂಡು ಬ್ಲಾಕ್ ಮೇಲ್ ಮಾಡಿ ವ್ಯಾಪಾರ ಕುದುರಿಸುವುದು ಎಂದು ಟೀಕಿಸಿದರು.
ಮಾಜಿ ಶಾಸಕ ಕೆ.ವೆಂಕಟೇಶ್ ಮಾತನಾಡಿ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಬರುವ ಎಲ್ಲರನ್ನು ಸ್ವಾಗತಿಸಬೇಕೆ ಹೊರತು ಅವರು ಬೇಡ ಇವರು ಬೇಡ ಎನ್ನುವ ಬದಲು ಪಕ್ಷಕ್ಕೆ ಯಾರೇ ಬಂದರೂ ಸಂಘಟನೆಗೆ ಒತ್ತು ನೀಡಿ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ತಿಳಿಸಿದರು.
ಐಲಾಪುರ ರಾಮು ಮಾತನಾಡಿ ಯಾವುದೇ ಅಧಿಕಾರದ ಆಸೆ ಇಲ್ಲದೆ ಪಕ್ಷ ತತ್ವ ಸಿದ್ಧಾಂತ ಒಪ್ಪಿ ಕಾಂಗ್ರೆಸ್ ಮರಳಿ ಕಾಮಗ್ರಸ್ ಗೂಡಿಗೆ ಸೇರ್ಪಡೆಯಾಗುತ್ತಿದ್ದೇನೆ. ಅನುದಾನಗಳನ್ನು ತರಲಾಗದ ಸಂಸದ ಮತ್ತು ಶಾಸಕರು ಎನ್ಆರ್ಇಜಿ ಅನುದಾನದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಲು ಹೊರಟಿರುವುದು ನಾಚಿಕೆಗೇಡಿನ ವಿಷಯವಾಗಿದೆ ಎಂದು ಟೀಕಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ ವಿಜಯಕುಮಾರ್, ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ ಪಿ.ಮಹದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು, ಕೆಪಿಸಿಸಿ ವೀಕ್ಷಕ ಮಂಜುನಾಥ್ ಗುಂಡೂರಾವ್, ಮುಖಂಡರಾದ ನಿತಿನ್ ವೆಂಕಟೇಶ್, ಶೇಖರ್, ಶಿವಣ್ಣೇಗೌಡ, ಪುಟ್ಟರಾಜು, ತಮ್ಮಣ್ಣಯ್ಯ, ಮುತ್ತುರಾಣಿ, ಪದ್ಮಾ, ಸರಸ್ವತಿ, ಮಾನ್ಸೂನ್ ಚಂದ್ರು, ಪಿ.ಎನ್ ಚಂದ್ರಶೇಖರ್, ತೆಲುಗಿನಕುಪ್ಪೆ ನಾಗಣ್ಣ, ಜಯಶಂಕರ್, ರಾಜಶೇಖರ್, , ಜವರಪ್ಪ, ಮುರುಳೀಧರ್, ಜೆ.ಮೋಹನ್ ಸೇರಿದಂತೆ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಜರಿದ್ದರು.