ಬೆಂಗಳೂರು: “ಪ್ರಜಾಪ್ರಭುತ್ವ ಎನ್ನುವುದು ಉಳ್ಳವರ ತಾಳಕ್ಕೆ ಕುಣಿಯುವ ವಸ್ತುವಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಮುಂದಿನ ತಲೆಮಾರಿಗೆ ಏನನ್ನೂ ಉಳಿಸದೆ ದೋಚಲಾಗುತ್ತಿದೆ,’ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಮವಾರ ರಂಗನಿರಂತರ ಸಂಸ್ಥೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸಿಜಿಕೆ ರಾಷ್ಟ್ರೀಯ ರಂಗೋತ್ಸವ-2017 ಉದ್ಘಾಟಿಸಿ ಮಾತನಾಡಿದರು.
“ಮನುಷ್ಯ ಮುಂದಿನ ಪೀಳಿಗೆಗೆ ಏನನ್ನೂ ಉಳಿಸಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಭೂಮಿಯನ್ನು ದೋಚುತ್ತಿದ್ದಾನೆ. ಗಾಳಿಯನ್ನು ವಿಷಮಯ ಮಾಡುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಹೊಸದಾಗಿ ನಮ್ಮ ಬದುಕು ಕಟ್ಟಿಕೊಳ್ಳಬೇಕಾಗಿದೆ,’ ಎಂದು ಹೇಳಿದರು.
“ಬಡವರು ಕೂಡ ಬದುಕಬೇಕು. ದುರ್ಬಲರು ಕೂಡ ಗೆಲ್ಲಬೇಕು ಎಂಬುದು ನಮ್ಮ ಜನಪದರ ಆಸೆಯಾಗಿತ್ತು. ಆದ್ದರಿಂದಲೇ ಜನಪದ ಕತೆಗಳು ಜೀವನ ಸೆಲೆಗಳಂತೆ ಕಾಣುತ್ತವೆ. ಇಂದು ಹಂಚಿಕೊಳ್ಳುವ ಗುಣ ಮತ್ತು ನಾಳೆಯ ಪೀಳಿಗೆಗೆ ಉಳಿಸುವ ಗುಣ ಉಳಿದಿಲ್ಲ. ಏನನ್ನೂ ಉಳಿಸದ ಮನುಷ್ಯನ ದಾಹ ಎಲ್ಲವನ್ನೂ ನುಂಗಿ ಕುಳಿತಿದೆ. ರಾಜ್ಯದ ಮೂಲೆಮೂಲೆಯಲ್ಲಿ ಸಮಾಜಕ್ಕೆ ನಿರುಪಯುಕ್ತ ಅಂತ ಯಾವುದನ್ನು ಅನ್ನುತ್ತಿದ್ದರೋ ಅದನ್ನೇ ಮೌಲ್ಯಯುತವನ್ನಾಗಿ ಮಾಡಿದ ಹೆಗ್ಗಳಿಕೆ ಸಿಜಿಕೆ ಅವರಿಗೆ ಸಲ್ಲುತ್ತದೆ,’ ಎಂದರು.
ಚಲನಚಿತ್ರ ನಟ, ರಂಗಕಲಾವಿದ ಪ್ರಕಾಶ್‌ರೈ ಮಾತನಾಡಿ, “ನಗರದಲ್ಲಿರುವ ನಾವು ಏನೂ ಮಾಡದೆ ಕುಳಿತುಕೊಂಡರೆ ಬದುಕಿಗೆ ಅರ್ಥವಿಲ್ಲದಂತೆ ಸಾಯುತ್ತೇವೆ. ನಾವು ಸಾಮಾಜಿಕ ಜವಾಬ್ದಾರಿಯನ್ನು ತಿಳಿದುಕೊಂಡು ಎಚ್ಚೆತ್ತುಕೊಳ್ಳದಿದ್ದರೆ ಎಲ್ಲವನ್ನು ಕಳೆದುಕೊಳ್ಳಬೇಕಾಗುತ್ತದೆ. ಭೂಮಿ, ನೆಲ, ಜಲ, ಪ್ರಕೃತಿ ಕಾಪಾಡಿಕೊಳ್ಳಬೇಕಾಗಿದೆ,’ ಎಂದು ಹೇಳಿದರು
ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಸಿಜಿಕೆ ಅವರೊಂದಿಗಿನ ತಮ್ಮ ಒಡನಾಡವನ್ನು ಸ್ಮರಿಸಿದರು. “ರಂಗಭೂಮಿಗೆ ಬರದಿದ್ದರೆ ನಾವು ಕೆಲಸಕ್ಕೆ ಬಾರದವರಾಗುತ್ತಿದ್ದೆವೇನೋ? ರಂಗಭೂಮಿ ಬದುಕನ್ನು ಕಟ್ಟಿಕೊಳ್ಳುವ ಅನುಭವ ಕಲಿಸಿದೆ. ಸಮಾರಂಭದಲ್ಲಿ ಸಿಜಿಕೆ ರಾಷ್ಟ್ರೀಯ ರಂಗೋತ್ಸವದ ನಿರ್ದೇಶಕರಾದ ಡಾ.ವಿಜಯಾ, ಡಾ.ಕೆ.ವೈ.ನಾರಾಯಣಸ್ವಾಮಿ, ರಂಗನಿರಂತರ ಅಧ್ಯಕ್ಷ ಅಪ್ಪಯ್ಯ ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದ ನಂತರ ಮೂಡಬಿದ್ರೆಯ ಆಳ್ವಾಸ್ ಎಜ್ಯುಕೇಷನ್ ಟ್ರಸ್ಟ್ ತಂಡದಿಂದ ಜೀವನ್‌ರಾಮ್ ಸುಳ್ಯ ನಿರ್ದೇಶನದ ಏಕದಶಾನ ನಾಟಕ ಪ್ರದರ್ಶನ ನಡೆಯಿತು.
ನಾಟಕ ಪ್ರದರ್ಶನಗಳು: ರವೀಂದ್ರ ಕಲಾಕ್ಷೇತ್ರದಲ್ಲಿ (ಪ್ರತಿದಿನ ಸಂಜೆ 7ಕ್ಕೆ) ಮೇ 16ರಂದು ಕೇರಳದ ಲಿಟ್ಲಅರ್ಥ್ ಸ್ಕೂಲ್ ಆಫ್ ದಿಯೇಟರ್ ತಂಡದಿಂದ ಚಿಲ್ಲರೆ ಸಮರಮ್(ಮಲೆಯಾಳಂ ನಾಟಕ), ಮೇ 17ರಂದು ನವದೆಹಲಿಯ ಎಕೆಎಸ್ ಥಿಯೇಟರ್ ತಂಡದಿಂದ ವೆಲ್‌ಕಮ್ ಜಿಂದಗಿ (ಹಿಂದಿ ನಾಟಕ), ಮೇ 18ರಂದು ಪಶ್ಚಿಮ ಬಂಗಾಳದ ಬೆಂಗಾಲ್ ರಿಪೆರ್ಟರಿ ಕೋಲ್ಕತ್ತ ತಂಡದಿಂದ ಅಶ್ವತ್ಥಾಮ ದಿ ವಾರ್ ಮಶಿನ್ (ಬೆಂಗಾಲಿ ನಾಟಕ) ಪ್ರದರ್ಶನಗೊಳ್ಳಲಿವೆ.