ಕಲಬುರಗಿ: ರೈತರ ಮೇಲೆ ಪೊಲೀಸರು ಗೋಲಿಬಾರ್ ಮಾಡಿರುವುದನ್ನು ಖಂಡಿಸಿ ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್‌ಕೆಎಸ್), ಅಖೀಲ ಭಾರತ ಕಿಸಾನ್ ಸಭಾ (ಎಐಕೆಎಸ್ ಎಸ್) ಮತ್ತು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ ಎಸ್) ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಮಧ್ಯಪ್ರದೇಶ ರಾಜ್ಯ ಸರಕಾರದ ಭೂತ ದಹನ ಮಾಡಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾ ಧಿಕಾರಿಗೆ ಮನವಿ ಪತ್ರ ಸಲ್ಲಿಸಿ, ಮಧ್ಯಪ್ರದೇಶದಲ್ಲಿನ ರೈತರು ಬೆಂಬಲ ಬೆಲೆ ಹಾಗೂ ರೈತರ ಸಾಲಮನ್ನಾಕ್ಕೆ ಒತ್ತಾಯಿಸಿ ನಡೆಸುತ್ತಿದ್ದ ಚಳವಳಿ ಮೇಲೆ ಅಲ್ಲಿನ ಸರ್ಕಾರವು ಗೋಲಿಬಾರ್ ಮೂಲಕ ಆರು ಜನ ರೈತರನ್ನು ಹತ್ಯೆ ಮಾಡಿದೆ ಎಂದು ಆರೋಪಿಸಿದರು.
ದೇಶದೆಲ್ಲೆಡೆ ಆಘಾತಕ್ಕೆ ಒಳಪಡಿಸಿರುವ ಈ ಘಟನೆ ನೊಂದ ರೈತರನ್ನು ರೊಚ್ಚಿಗೆಬ್ಬಿಸಿದೆ. ಮಧ್ಯಪ್ರದೇಶದ ಮಂಡಸೌರನಲ್ಲಿ ನಡೆದ ಈ ಘಟನೆ ಈಗ ಆರಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ತೀವ್ರವಾದ ಬರಗಾಲದಿಂದ ನರಳಿ ತಾವು ಬೆಳೆದ ಬೆಳೆಗೆ ಯೋಗ್ಯ ಬೆಂಬಲ ಸಿಗದೆ ಇದ್ದಾಗ ಹೋರಾಟದ ಮೂಲಕ ನ್ಯಾಯ ಪಡೆಯಲು ಯತ್ನಿಸಿದ ರೈತರ ಮೇಲೆ ಗೋಲಿಬಾರ್ ಮಾಡುವ ಮೂಲಕ ರೈತರ ಬೆನ್ನು ಮುರಿದಿದೆ.
ಇಂತಹ ಹೋರಾಟಗಳು ದೇಶಾದ್ಯಂತ ನಡೆಯುತ್ತಿದ್ದರೂ ಸರ್ಕಾರಗಳು ದಿವ್ಯ ನಿರ್ಲಕ್ಷ ವಹಿಸುತ್ತಿರುವುದು ನಾಚಿಕೆ ಹುಟ್ಟಿಸುವಂಥದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಪಿಐಎಂ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ,
-ಕಿಸಾನ್ ಸಭಾದ ಮೌಲಾ ಮುಲ್ಲಾ, ಆರ್‌ಪಿಐನ ಎ.ಬಿ. ಹೊಸಮನಿ, ಆರ್‌ಕೆಎಸ್‌ನ ಎಸ್. ಸಂದೀಪ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಭಾಸ ಹೊಸಮನಿ, ಅಶೋಕ ಮ್ಯಾಗೇರಿ, ಮೇಘರಾಜ ಕಠಾರೆ, ಪಾಂಡುರಂಗ ಮಾವಿನ್, ಸಿದ್ಧರಾಮ ಅದವಾನಿ, ಸತೀಶ್ ಸಿಂಧೆ, ಸುಧಾಮ ದಿನ್ನಿ ಪಾಲ್ಗೊಂಡಿದ್ದರು.