ಬೆಂಗಳೂರು: ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಗೌರವಧನ ಹೆಚ್ಚಳದ ಬೇಡಿಕೆಗೆ ವರ್ಷ ಕಳೆದರೂ “ಪರಿಶೀಲನೆ ಹಂತ’ದಿಂದ ಮುಕ್ತಿ ಸಿಕ್ಕಿಲ್ಲ.
ಗೌರವಧನ ಪರಿಷ್ಕರಣೆಯ ಪ್ರಸ್ತಾವ ಪರಿಶೀಲನೆಯಲ್ಲಿದೆ ಎಂದು ಕಳೆದ ವರ್ಷ ಸರಕಾರ ಸದನದಲ್ಲಿ ಹೇಳಿತ್ತು. ಈಗ ಮತ್ತೆ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು, ಈ ಬಾರಿಯಾದರೂ ಈಡೇರೀತೇ ಎಂಬುದು ಸುಮಾರು 99 ಸಾವಿರ ಗ್ರಾ. ಪಂ. ಪ್ರತಿನಿಧಿಗಳ ನಿರೀಕ್ಷೆ.
ಗ್ರಾ.ಪಂ. ಸದಸ್ಯರ ಗೌರವಧನ 2017ರಲ್ಲಿ ಪರಿಷ್ಕರಿಸಿದ್ದು, ಅಧ್ಯಕ್ಷರಿಗೆ 1,000 ರೂ. ಗಳಿಂದ 3,000 ರೂ. ಗಳಿಗೂ, ಉಪಾಧ್ಯಕ್ಷರಿಗೆ ನೀಡುತ್ತಿದ್ದ 600 ರೂ.ಗಳನ್ನು 2,000 ರೂ. ಗಳಿಗೂ ಹಾಗೂ ಸದಸ್ಯರಿಗೆ ನೀಡುತ್ತಿದ್ದ 500 ರೂ. ಗಳನ್ನು 1,000 ರೂ. ಗಳಿಗೆ ಏರಿಸಲಾಗಿತ್ತು. ಈಗ ಮತ್ತೆ ಗೌರವಧನ ಪರಿಷ್ಕರಿಸುವಂತೆ ಗ್ರಾ.ಪಂ. ಸದಸ್ಯರು, ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ 25 ಮಂದಿ ವಿಧಾನಪರಿಷತ್ ಸದಸ್ಯರು ಒತ್ತಾಯಿಸುತ್ತಿದ್ದು, ಪ್ರಸ್ತಾವ ಇನ್ನೂ ಪರಿಶೀಲನೆಯಲ್ಲಿದೆ. ಪಂಚಾಯತ್‌ಗಳಲ್ಲಿ ಪ್ರತಿ ಶೇ. 80ಕ್ಕೂ ಹೆಚ್ಚು ಮಂದಿ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರು. ಅವರ ಜೀವನ ನಿರ್ವಹಣೆಗೂ ಗೌರವಧನ ಪರಿಷ್ಕರಣೆ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕೇರಳ ಮಾದರಿ ಬರಲಿ
ಕೇರಳದಲ್ಲಿ ಅಧ್ಯಕ್ಷರಿಗೆ 13,200 ರೂ, ಉಪಾಧ್ಯಕ್ಷರಿಗೆ 10,600 ರೂ., ಸದಸ್ಯರಿಗೆ 7,000 ರೂ. ಗಳಿವೆ. ಈ ಸಂಬಂಧ ಕರ್ನಾಟಕ ರಾಜ್ಯ ಗ್ರಾ.ಪಂ. ಸದಸ್ಯರ ಮಹಾ ಒಕ್ಕೂಟ ಈ ವರ್ಷದ ಆರಂಭದಲ್ಲೇ ಕೇರಳ ಮಾದರಿ ಜಾರಿಗಾಗಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿತ್ತು.