Advertisement

ಜಿಪಂ ಅಧ್ಯಕ್ಷರ ರಾಜೀನಾಮೆಗೆ ಸದಸ್ಯರ ಆಗ್ರಹ

04:31 PM Sep 23, 2018 | |

ಕಲಬುರಗಿ: ಜಿಲ್ಲಾ ಪಂಚಾಯಿತಿಗೆ ಬಂದಿರುವ ಅನುದಾನ ಹಂಚಿಕೊಳ್ಳಲು ಜಿಪಂ ಸದಸ್ಯರು ಜಟಾಪಟಿ ನಡೆಸಿದ ಪ್ರಸಂಗ ಶನಿವಾರ ನಡೆದ ಜಿಲ್ಲಾ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ನಡೆಯಿತು. ಬರೊಬ್ಬಳಿ ಏಳು ತಿಂಗಳ ಬಳೀಕ ಜಿ.ಪಂ ಅಧ್ಯಕ್ಷೆ ಸುವರ್ಣಾ ಮಲಾಜಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯು ಸರಿಯಾದ ಚರ್ಚೆಗೆ ಬರಲು ಸುಮಾರು ಎರಡು ಗಂಟೆ ಕಾಲ ತೆಗೆದುಕೊಂಡಿತು. ಮೊದಲು ಅಜೆಂಡಾದಲ್ಲಿರದ ವಿಷಯಗಳು ಚರ್ಚೆಗೆ ಬಂದವು. ತದನಂತರ ಜಿ.ಪಂ.ಗೆ ಬಂದ ಅನುದಾನ ಹಾಗೂ ಖರ್ಚಿನ ಕುರಿತು ಕಾವೇರಿದ ಚರ್ಚೆ ನಡೆಯಿತು.

Advertisement

ಅನುದಾನ ಹಂಚಿಕೆಗೆ ಹಿಂದಿನ ಸೂತ್ರ ಅಂದರೆ ಅಗತ್ಯ ತಕ್ಕಂತೆ ಅನುಸರಿಸೋಣ ಎಂಬುದಾಗಿ ಆಡಳಿತಾರೂಢ ಸದಸ್ಯರು ಹೇಳಿದ್ದರೆ ಇದಕ್ಕೆ ಪ್ರತಿಪಕ್ಷ ಕಾಂಗ್ರೆಸ್‌ ಸದಸ್ಯರು ಆಕ್ಷೇಪಿಸಿದರು. ಇಂದು ಹಣವಿದೆ. ಹೀಗಾಗಿ ಎಲ್ಲರಿಗೂ ಸಮಾನಾಗಿ ಹಂಚಲಿಕ್ಕೆ ತೊಂದರೇಯೇನು ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಇಲ್ಲಿ ಮಾಧ್ಯಮದವರೆಲ್ಲರೂ ಇದ್ದಾರೆ. ನಮ್ಮ ಕಚ್ಚಾಟ ನೋಡ್ತಾ ಇದ್ದಾರೆ. ಹೀಗಾಗಿ ಇದನ್ನು ನಾವೆಲ್ಲರೂ ಕುಳಿತು ಬಗೆಹರಿಸೋಣ ಎಂಬುದಾಗಿ ಕೆಲವರು ಹೇಳಿದರು. ಅಧ್ಯಕ್ಷರು ಕೊನೆಗೆ ಅನುದಾನ ಹಂಚಿಕೆ ಹಿಂದಿನಂತೆ ಅನುಸರಿಸೋಣ ಎಂದು ಹೇಳಿ ಜಟಾಪಟಿಗೆ ತೆರೆ ಎಳೆದರು. 

ತದನಂತರ ಆಡಳಿತಾರೂಢ ಸದಸ್ಯ ಸಂಜೀವನ್‌ ಯಾಕಾಪುರ ಅವರು ಜಿ.ಪಂ ಅಧ್ಯಕ್ಷರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ನಾಯಕ ಶಿವಾನಂದ ಪಾಟೀಲ ಹಾಗೂ ಸದಸ್ಯ ದಿಲೀಪ ಪಾಟೀಲ ಅಧ್ಯಕ್ಷರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಹಿಂದಿನ ಮೂರು ಸಭೆಗಳನ್ನು ಸಿಇಒ ಹೆಪ್ಸಿಬಾರಾಣಿ ಕೋರ್ಲಪಾಟಿ ಸೇವೆ ಬೇಡ ಎಂಬುದಾಗಿ ಗದ್ದಲ ಉಂಟಾಗಿ ಮುಂದೂಡಿಕೆಯಾಗಿದ್ದರೆ ಶನಿವಾರ ನಡೆದ ಸಭೆಯಲ್ಲಿ ಜಿ.ಪಂ ಅಧ್ಯಕ್ಷರು ತಮ್ಮ ಕಾರ್ಯಭಾರ ಸರಿಯಾಗಿ ನಿರ್ವಹಿಸುತ್ತಿಲ್ಲ. ಹೀಗಾಗಿ ಅಧಿಕಾರಿಗಳು ಸದಸ್ಯರ ಮಾತು ಕೇಳದಂತಾಗಿದೆ. ಒಟ್ಟಾರೆ ಆಡಳಿತ ಯಂತ್ರ ಕುಸಿತವಾಗಿದ್ದರಿಂದ ಅಧ್ಯಕ್ಷರು ರಾಜೀನಾಮೆ ನೀಡುವುದು ಸೂಕ್ತ ಎಂದು ಪ್ರತಿಪಾದಿಸಿದರು. ಚರ್ಚೆಯಲ್ಲಿ ಸದಸ್ಯರಾದ ಸಿದ್ಧರಾಮ ಪ್ಯಾಟಿ, ಶಿವರಾಜ ಪಾಟೀಲ್‌ ರದ್ದೇವಾಡಗಿ, ಶರಣಗೌಡ ಪಾಟೀಲ ವಿಕೆ ಸಲಗರ, ಗೌತಮ ವೈಜನಾಥ ಪಾಟೀಲ, ಸಂತೋಷ ಪಾಟೀಲ ದಣ್ಣೂರ ಮುಂತಾದವರು ಪಾಲ್ಗೊಂಡಿದ್ದರು.

ಹೆಚ್ಚಿನ ಅನುದಾನ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮಾತನಾಡಿ, ಬೆಂಗಳೂರಿನಲ್ಲಿ ನಡೆದ ಯೋಜನಾ ಸಿದ್ಧತೆ ಸಭೆಯಲ್ಲಿ ಹೆಚ್ಚಿನ ಅನುದಾನದ ಪ್ರಸ್ತಾವನೆ ಸಲ್ಲಿಸಿದ್ದರಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ. ಈ ಅನುದಾನ ಖರ್ಚು ಮಾಡಲು ವರ್ಷ ಪೂರ್ತಿ ಕಾಯದೇ ಡಿಸೆಂಬರ್‌ ಅಂತ್ಯದೊಳಗಾಗಿ ಸಂಪೂರ್ಣ ಅನುದಾನವನ್ನು ಖರ್ಚು ಮಾಡಿದ್ದಲ್ಲಿ ಮುಂದೆ ಹೆಚ್ಚುವರಿಯಾಗಿ ಬೇಕಾಗುವ ಅನುದಾನಕ್ಕೆ ಪೂರಕ ಕ್ರಿಯಾ ಯೋಜನೆ ಸಲ್ಲಿಸಿ ಇನ್ನು ಹೆಚ್ಚಿನ ಅನುದಾನ ಪಡೆಯಲು ಅವಕಾಶಗಳಿವೆ ಎಂದರು.
 
ನಾಮಕವಾಸ್ತೆ ಖರೀದಿ: ಬೆಂಬಲ ಬೆಲೆಯಲ್ಲಿ ಕೇವಲ ನಾಲ್ಕು ಕ್ವಿಂಟಲ್‌ ಹೆಸರು ಖರೀದಿ ಮಾಡಲು ಮುಂದಾಗಿರುವುದು ನಾಮಕವಾಸ್ತೆ ಎನ್ನುವಂತಾಗಿದೆ. ಈ ನಿಟ್ಟಿನಲ್ಲಿ ಪ್ರತಿ ರೈತನಿಂದ 10 ಕ್ವಿಂಟಲ್‌ ಖರೀದಿ ಮಾಡುವಂತೆ ಹಾಗೂ ತೊಗರಿ ಬೆಂಬಲ ಬೆಲೆ ಕನಿಷ್ಠ 7500 ರೂ.ಗೆ ಹೆಚ್ಚಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬಳಿ ಜಿ.ಪಂ ನಿಯೋಗ ಹೋಗಬೇಕೆಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ ಸಭೆ ಗಮನಕ್ಕೆ ತಂದರು.

Advertisement

ಜಿಲ್ಲಾ ಪಂಚಾಯಿತಿ ಪಂಚಾಯತ್‌ರಾಜ್‌ ಇಂಜಿನಿಯರಿಂಗ್‌ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ ಶರಣಬಸಪ್ಪ ನಾಗನಹಳ್ಳಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ
ಡೇವಿಡ್‌, ಶಾಸಕರಾದ ಎಂ.ವೈ. ಪಾಟೀಲ, ಬಸವರಾಜ ಮತ್ತಿಮೂಡ, ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ
ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು. ಸನ್ಮಾನ: ಅಫಜಲಪುರ ಶಾಸಕ ಎಂ.ವೈ. ಪಾಟೀಲ ಹಾಗೂ ಗೌರವ ಡಾಕ್ಟರೆಟ್‌ಗೆ ಭಾಜನರಾದ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ ಅವರನ್ನು ಸನ್ಮಾನಿಸಲಾಯಿತು. 

1425.60 ಕೋಟಿ ಕ್ರಿಯಾ ಯೋಜನೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಜರುಗಿದ ಜಿಪಂ ಸಾಮಾನ್ಯ ಸಭೆಯಲ್ಲಿ 1425.60 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಎಲ್ಲ ಸದಸ್ಯರು ಸರ್ವಾನುಮತದಿಂದ ಅನುಮೋದನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು 1425.60 ಕೋಟಿ ರೂ. ಪೈಕಿ 432.92 ಕೋಟಿ ರೂ.ಗಳನ್ನು ಜಿಲ್ಲಾ ಪಂಚಾಯಿತಿ ಯೋಜನೆಗಳಿಗೆ, 991.79 ಕೋಟಿ ರೂ. ಗಳನ್ನು ತಾಲೂಕು ಪಂಚಾಯಿತಿ ಯೋಜನೆಗಳಿಗೆ, 88 ಲಕ್ಷ ರೂ.ಗಳನ್ನು ಗ್ರಾಪಂ ಯೋಜನೆಗಳಿಗೆ ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲಾ ಪಂಚಾಯಿತಿಗೆ 2018-19ನೇ ಸಾಲಿನ ಲಿಂಕ್‌ ಡಾಕ್ಯುಮೆಂಟ್‌ಗಾಗಿ ನಿಗದಿಪಡಿಸಲಾದ 432.92 ಕೋಟಿ ರೂ.ಗಳಲ್ಲಿ ಸಿಬ್ಬಂದಿ ವೇತನಕ್ಕಾಗಿ 204.96 ಕೋಟಿ ರೂ., ನಿರ್ವಹಣೆಗಾಗಿ 54.76 ಕೋಟಿ ರೂ., ಖರೀದಿಗಾಗಿ 4.27 ಕೋಟಿ ರೂ., ಕಾಮಗಾರಿಗಳಿಗಾಗಿ 15.51 ಕೋಟಿ ರೂ., ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 151.28 ಕೋಟಿ ರೂ. ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿಗಾಗಿ 2.40 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು. ಕಾಮಗಾರಿಗಳಿಗಾಗಿ ಒದಗಿಸಲಾದ 15.51 ಕೋಟಿ ರೂ.ಗಳ ಪೈಕಿ ಲೋಕೋಪಯೋಗಿ ಇಲಾಖೆಗಳ ಕಾಮಗಾರಿಗಳಿಗಾಗಿ 10.30 ಲಕ್ಷ ರೂ., ಸಾಮಾನ್ಯ ಶಿಕ್ಷಣಕ್ಕಾಗಿ 95 ಲಕ್ಷ ರೂ., ಕಲೆ ಮತ್ತು ಸಂಸ್ಕೃತಿಗಾಗಿ 10 ಲಕ್ಷ ರೂ., ವೈದ್ಯಕೀಯ ಮತ್ತು ಜನಾರೋಗ್ಯಕ್ಕಾಗಿ 80 ಲಕ್ಷ ರೂ. ಆಯುಷ್‌ ಇಲಾಖೆಗಾಗಿ 25 ಲಕ್ಷ ರೂ., ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 21.28 ಲಕ್ಷ ರೂ., ಕೃಷಿ ಇಲಾಖೆಗೆ 25 ಲಕ್ಷ ರೂ., ತೋಟಗಾರಿಕೆ ಇಲಾಖೆಗೆ 20 ಲಕ್ಷ ರೂ., ಪಶು ಸಂಗೋಪನೆಗೆ 75 ಲಕ್ಷ ರೂ., ಮೀನುಗಾರಿಕೆಗೆ 15 ಲಕ್ಷ ರೂ., ಅರಣ್ಯ ಮತ್ತು ವನ್ಯ ಜೀವನಕ್ಕೆ 50 ಲಕ್ಷ ರೂ., ಇತರೆ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಲಾದ 170 ಲಕ್ಷ ರೂ.ಗಳ ಪೈಕಿ 20 ಲಕ್ಷ ರೂ.ಗಳನ್ನು ಅಧ್ಯಕ್ಷರ ವಿವೇಚನೆ ನಿ ಧಿಗೆ, ಸಣ್ಣ ನೀರಾವರಿಗಾಗಿ 46.94 ಲಕ್ಷ ರೂ., ರಸ್ತೆ ಮತ್ತು ಸೇತುವೆಗಾಗಿ 870 ಲಕ್ಷ ರೂ. ಹಾಗೂ ಕೃಷಿ ಮಾರುಕಟ್ಟೆ ಇಲಾಖೆಗಾಗಿ 38 ಲಕ್ಷ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next