ಅಧಿಕಾರ ವಿಕೇಂದ್ರೀಕರಣಕ್ಕೆ ಹೆಸರಾಗಿದ್ದ ಕರ್ನಾಟಕದಲ್ಲಿ ನಗರ ಸ್ಥಳೀಯ ಸಂಸ್ಥೆ ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ವರ್ಷಗಟ್ಟಲೆ ವಿಳಂಬವಾಗುತ್ತಿರುವುದು ದುರಂತವೇ ಸರಿ.
ಒಂದೆಡೆ ಹೊಸ ಕಾಯ್ದೆ ತಂದು ವಾರ್ಡ್‌ಗಳ ಸಂಖ್ಯೆ ಹೆಚ್ಚಳ ಮಾಡಿ ವಾರ್ಡ್ ಪುನರ್ ವಿಂಗಡಣೆ- ಮೀಸಲು ನಿಗದಿ ವಿಚಾರದ ಜಟಾಪಟಿಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮುಂದೂಡುತ್ತಲೇ ಇದೆ.
ಮತ್ತೊಂದೆಡೆ ರಾಜ್ಯದ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯಿತ್ ಚುನಾವಣೆಯೂ ಇದೇ ರೀತಿ ಮುಂದಕ್ಕೆ ಹೋಗುತ್ತಲೇ ಇದೆ. ಎಲ್ಲವೂ ಮುಗಿದು ಇನ್ನೇನು ಚುನಾವಣೆ ನಿಗದಿಯಾಗಲಿದೆ ಎನ್ನುವಾಗಲೇ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಜನಸಂಖ್ಯೆ ನಿಗದಿಗೆ ಸಂಬಂಧಿಸಿದಂತೆ “ಸುಗ್ರೀವಾಜ್ಞೆ’ ತರಲು ಸರಕಾರ ನಿರ್ಧರಿಸಿದೆ.
ಇದರಿಂದ ಮತ್ತೆ ಚುನಾವಣೆಗೆ ಗ್ರಹಣ ಖಚಿತ.ತಾ.ಪಂ. ಹಾಗೂ ಜಿ.ಪಂ. ಕ್ಷೇತ್ರಗಳ ಜನಸಂಖ್ಯೆ ಬಗ್ಗೆ “ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ (ತಿದ್ದುಪಡಿ) ವಿಧೇಯಕ ಕಳೆದ ಮಾರ್ಚ್‌ನಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ಅಂಗೀಕರಿಸಲಾಗಿದೆಯಾದರೂ ಇದೀಗ ಈ ತಿದ್ದುಪಡಿ ಕಾಯ್ದೆಯ ಸೆಕ್ಷನ್ 121 ಮತ್ತು ಸೆಕ್ಷನ್ 160ರ ತಿದ್ದುಪಡಿಗೆ ಸುಗ್ರೀವಾಜ್ಞೆ ತರಲು ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿರುವುದು ಮತ್ತೆ ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಗಲಿದೆ.
ಸುಗ್ರೀವಾಜ್ಞೆ ತಂದರೆ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಲಿದೆ. ಇದು ಮುಂದೆ ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮೀಸಲಾತಿ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಕ್ಷೇತ್ರ ಪುನರ್ ವಿಂಗಡಣೆಯ ಕರಡು ಸಹ ಈವರೆಗೆ ಸಲ್ಲಿಸಲಾಗಿಲ್ಲ ಎಂಬ ಮಾತುಗಳೂ ಇವೆ.
ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳ ಗಡಿ ಗುರುತಿಸುವ ಪ್ರಕ್ರಿಯೆ ಮುಗಿದಿದ್ದು, ಜುಲೈ ಕೊನೆಗೆ ಕರಡು ಹೊರಡಿಸಲಾಗುವುದು ಎಂದು ಸೀಮಾ ನಿರ್ಣಯ ಆಯೋಗ ಹೇಳುತ್ತಾ ಬಂದಿತ್ತು. ಆದರೆ ಈವರೆಗೆ ಕರಡು ಸಲ್ಲಿಸಲಾಗಿಲ್ಲ. ಇದರ ನಡುವೆ ಒಬಿಸಿ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಸವಾಲು ಸಹ ಸರಕಾರದ ಮುಂದಿದೆ. ಇದೆಲ್ಲವೂ ಗಮನಿಸಿದರೆ ಚುನಾವಣೆ ನಡೆಯುವುದೋ ಇಲ್ಲವೋ ಎಂಬ ಅನುಮಾನ ಬರುವುದು ಸಹಜ.
ಪಕ್ಷಾತೀತವಾಗಿ ಶಾಸಕರಿಗೆ ಬಿಬಿಎಂಪಿ ಹಾಗೂ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ನಡೆಯುವುದು ಇಷ್ಟವಿಲ್ಲ. ವಿಧಾನಸಭೆ ಚುನಾವಣೆ ಅನಂತರ ನಡೆಯಲಿ ಎಂಬ ಬಯಕೆ. ಹೀಗಾಗಿ ಎಲ್ಲರೂ ಸೇರಿ ನ್ಯಾಯಾಲಯ ಆದೇಶ ಪಾಲಿಸಿದಂತೆಯೂ ಮಾಡಿ ಅತ್ತ ಚುನಾವಣೆ ಮುಂದೂಡಿಕೆಗೆ ಬೇಕಾದ ತಂತ್ರಗಳನ್ನೂ ಅನುಸರಿಸುತ್ತಿದ್ದಾರೆ ಎಂಬ ಮಾತುಗಳಿವೆ.
ಏನೇ ಆಗಲಿ ರಾಜ್ಯ ಸರಕಾರ ಬಿಬಿಎಂಪಿ ಹಾಗೂ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಸೇರಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರದಲ್ಲಿ ಬದ್ಧತೆ ತೋರಬೇಕಾಗಿದೆ. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಅರ್ಥ ಬರಬೇಕಾದರೆ ಸಕಾಲದಲ್ಲಿ ಇವುಗಳಿಗೆ ಚುನಾವಣೆ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಚುನಾವಣ ಆಯೋಗಕ್ಕೂ ಸೂಕ್ತ ಅಧಿಕಾರವನ್ನೂ ಕೊಡಬೇಕಾಗಿದೆ.