Advertisement

ಬಿಜೆಪಿ ಜತೆ ಮೈತ್ರಿಗೆ ಸೈ ಜೆಡಿಯು ನಾಯಕರ ಸಭೆಯಲ್ಲಿ ನಿರ್ಧಾರ

11:52 AM Jul 09, 2018 | Team Udayavani |

ಪಾಟ್ನಾ/ಕೋಲ್ಕತಾ: ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಜೆಡಿಯು ಹೊರಬರುತ್ತದೋ, ಕಾಂಗ್ರೆಸ್‌-ಆರ್‌ಜೆಡಿ ಮಹಾ ಮೈತ್ರಿಕೂಟದ ಜತೆ ಕೈಜೋಡಿಸುತ್ತದೋ ಎಂಬ ಗೊಂದಲಕ್ಕೆ ಜೆಡಿಯು ನಾಯಕ, ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ತೆರೆ ಎಳೆದಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ 17 ಸ್ಥಾನಗಳಲ್ಲಿ ಪಕ್ಷ ಸ್ಪರ್ಧಿಸಲಿದೆ ಮತ್ತು ಬಿಜೆಪಿ ಜತೆಗಿನ ಮೈತ್ರಿ ಮುಂದುವರಿಯಲಿದೆ ಎಂದು ನಿತೀಶ್‌ ಸ್ಪಷ್ಟಪಡಿಸಿದ್ದಾರೆ.

Advertisement

ಶನಿವಾರ ಪಾಟ್ನಾದಲ್ಲಿ ನಡೆದ ಜೆಡಿಯು ನಾಯಕರ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಇದೇ 12ರಂದು ಬಿಹಾರಕ್ಕೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಭೇಟಿ ನೀಡಲಿದ್ದು, ಈ ವೇಳೆ ನಿತೀಶ್‌ ಅವರು ಸ್ಥಾನ ಹೊಂದಾಣಿಕೆ ಮತ್ತು ಇತರ ವಿಚಾರಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ನಿತೀಶ್‌ ನಿರ್ಧಾರದಿಂದಾಗಿ ಬಿಹಾರದಲ್ಲಿ ಕಾಂಗ್ರೆಸ್‌-ಆರ್‌ಜೆಡಿ ನೇತೃತ್ವದಲ್ಲಿ ಮಹಾ ಮೈತ್ರಿಕೂಟವನ್ನು ಮರು ರಚನೆ ಮಾಡುವ ಪ್ರಸ್ತಾಪಕ್ಕೆ ಹಿನ್ನಡೆ ಉಂಟಾಗಿದೆ.

ಸಭೆಯಲ್ಲಿ ಬಿಜೆಪಿ ಜತೆ ಮೈತ್ರಿ ಮುಂದು ವರಿಕೆಗೆ ಹೆಚ್ಚಿನ ನಾಯಕರು ಒಲವು ವ್ಯಕ್ತಪಡಿ ಸಿದ್ದಾರೆ.  2020ರಲ್ಲಿ ನಡೆಯಲಿ ರುವ ಬಿಹಾರ ವಿಧಾನಸಭೆ ಚುನಾವಣೆಯ ಬಗ್ಗೆಯೂ ವಿಚಾರ ವಿನಿಮಯ ನಡೆದಿದೆ.  
ಬಿಹಾರ ದಲ್ಲಿ ಒಟ್ಟು 42 ಲೋಕಸಭಾ ಸ್ಥಾನಗಳಿದ್ದು, ಆ ಪೈಕಿ 17ರಲ್ಲಿ ಜೆಡಿಯು ಸ್ಪರ್ಧಿಸಿದರೆ, ಎಲ್‌ಜೆಪಿ ಮತ್ತು ಆರ್‌ಎಲ್‌ಎಸ್‌ಪಿ ಉಳಿದ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿವೆ. ಜೆಡಿಯು ನಾಯಕ ರೊಬ್ಬರು ಮಾತನಾಡಿ, “ಬಿಜೆಪಿ ಜತೆಗಿನ ಮೈತ್ರಿ ಮುಂದುವರಿಯಲಿದೆ. ಅದರಲ್ಲಿ ಯಾವುದೇ ಸಂಶಯವಿಲ್ಲ.

ಆರ್‌ಜೆಡಿ- ಕಾಂಗ್ರೆಸ್‌ ಜತೆಗೆ ಮೈತ್ರಿ ಮುಂದು ವರಿಯುತ್ತಿದ್ದರೆ ಪಕ್ಷಕ್ಕೆ 17-18ಕ್ಕಿಂತ ಹೆಚ್ಚು ಸ್ಥಾನಗಳು ಸಿಗುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.  

ಎಡಪಕ್ಷಗಳಲ್ಲಿ ಒಡಕು: ಈ ನಡುವೆ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಜತೆಗೆ ಮುಂದಿನ ಚುನಾವಣೆ ಎದುರಿಸಬೇಕೇ ಬೇಡವೇ ಎಂಬ ಬಗ್ಗೆ ಎಡಪಕ್ಷಗಳಲ್ಲಿ ಭಿನ್ನಾಭಿ ಪ್ರಾಯ ಉಂಟಾಗಿದೆ. ನಾಲ್ಕು ದಶಕಗಳಿಂದ ಸ್ಪಷ್ಟ ಮೈತ್ರಿ ಇರದಿದ್ದರೂ,  ಪರೋಕ್ಷವಾಗಿ ಸಹಕರಿಸಿಕೊಂಡು ಚುನಾ ವಣೆ ಎದುರಿಸುತ್ತಿದ್ದವು. ಸಿಪಿಎಂ ಕಾಂಗ್ರೆಸ್‌ ಜತೆ ಹೆಚ್ಚು ಬಾಂಧವ್ಯ ಏರ್ಪಡಿಸಿಕೊಂಡಿರುವುದಕ್ಕೆ ಅಖೀಲ ಭಾರತ ಫಾರ್ವರ್ಡ್‌ ಬ್ಲಾಕ್‌ (ಎಐಎಫ್ಬಿ), ರೆವೊಲ್ಯೂಷನರಿ ಸೋಶಿಯ ಲಿಸ್ಟ್‌ ಪಕ್ಷ (ಆರ್‌ಎಸ್‌ಪಿ), ಸಿಪಿಐ ಆಕ್ಷೇಪ ಮಾಡಿವೆ. ಹೀಗಾಗಿ ಈ ಬೆಳವಣಿಗೆ ಉಂಟಾಗಿದೆ.

Advertisement

ಕೋಮುವಾದಕ್ಕೆ ಒಲವಿಲ್ಲ
ಗುರುವಾರ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಜತೆಗಿನ ಭೇಟಿ ನಡುವೆಯೇ ಕೋಮುವಾದ, ಅಪರಾಧ, ಭ್ರಷ್ಟಾಚಾರ (ತ್ರಿ ಸಿ)ಗಳಲ್ಲಿ ಯಾವುದೇ ರೀತಿಯ ರಾಜಿ ಇಲ್ಲ ಎಂದಿದೆ ಜೆಡಿಯು. ಇದರ ಜತೆಗೆ ಕಾಂಗ್ರೆಸ್‌ ಜತೆಗೆ ಮೈತ್ರಿ ಸಾಧಿಸಿಕೊಳ್ಳುವ ಅವಕಾಶವೂ ಮುಕ್ತವಾಗಿದೆ ಎಂದಿದೆ. ಕೇಂದ್ರ ಸಚಿವ ಜಯಂತ್‌ ಸಿನ್ಹಾ ದನ ಮಾರುವ ವ್ಯಕ್ತಿಯನ್ನು ಥಳಿಸಿ ಕೊಂದವರಿಗೆ ಹಾರ ಹಾಕಿದ್ದಕ್ಕೆ ಮತ್ತು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ನವಾಡಾ ಜೈಲಲ್ಲಿರುವ ಬಜರಂಗ ದಳ ಮತ್ತು ವಿಎಚ್‌ಪಿ ನಾಯಕರನ್ನು ಭೇಟಿಯಾಗಿದ್ದಕ್ಕೆ ನಿತೀಶ್‌ ಆಕ್ಷೇಪ ಮಾಡಿದ್ದಾರೆಂದು ಜೆಡಿಯು ವಕ್ತಾರ ಕೆ.ಸಿ.ತ್ಯಾಗಿ ಹೇಳಿದ್ದಾರೆ.

ವಿಪಕ್ಷಗಳ ಒಕ್ಕೂಟಕ್ಕೆ ಕಾಂಗ್ರೆಸ್‌ನಲ್ಲೇ ಆಕ್ಷೇಪ
ಎನ್‌ಡಿಎ ವಿರುದ್ಧ 2019ರ ಚುನಾವಣೆಗೆ ವಿಪಕ್ಷಗಳ ಪ್ರಬಲ ಒಕ್ಕೂಟ ರಚಿಸಬೇಕು ಎಂಬ ಕಾಂಗ್ರೆಸ್‌ ಆಶಯಕ್ಕೆ ವಿರೋಧವಾಗುವ ಸಂಗತಿಗಳೇ ಸದ್ಯ ಎದ್ದು ಕಾಣುತ್ತಿವೆ. ಪಶ್ಚಿಮ ಬಂಗಾಲದಲ್ಲಿ ಸಿಪಿಎಂ ಮತ್ತು ಟಿಎಂಸಿ ಜತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕಾಂಗ್ರೆಸ್‌ನಲ್ಲಿ ಗುಂಪುಗಳೇ ಆಗಿವೆ. ಆದರೆ ಈ ಬಗ್ಗೆ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಕೈಗೊಳ್ಳುವ ನಿರ್ಧಾರವೇ ಅಂತಿಮ ಎನ್ನುತ್ತಾರೆ ಅಲ್ಲಿನ ನಾಯಕರು. ಇನ್ನು ದಿಲ್ಲಿಯಲ್ಲಿ ಆಪ್‌ ಜತೆಗೆ ಮೈತ್ರಿ ಮಾಡಿಕೊಳ್ಳುವುದಕ್ಕೂ ಆಕ್ಷೇಪ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next