Advertisement

ಸುದಿನ ಅಭಿಯಾನ ಫ‌ಲಶ್ರುತಿ

11:10 AM Dec 11, 2017 | |

ಮಹಾನಗರ: ನಂತೂರು ಜಂಕ್ಷನ್‌ ಸಮಸ್ಯೆ ಸಂಬಂಧಿಸಿ ಸುದಿನ ಕೈಗೊಂಡ ಅಭಿಯಾನಕ್ಕೆ ಆಡಳಿತಾತ್ಮಕವಾಗಿಯೂ ಉತ್ತಮ ಸ್ಪಂದನೆ ಸಿಕ್ಕಿದ್ದು, ವಾಹನ ಸವಾರರು ಹಾಗೂ ಪ್ರಯಾಣಿಕರ ಸುರಕ್ಷೆ ದೃಷ್ಟಿಯಿಂದ ತಾತ್ಕಾಲಿಕ ಪರಿಹಾರ ಒದಗಿಸಲು ಪೊಲೀಸ್‌ ಇಲಾಖೆ ಮುಂದಾಗಿದೆ.

Advertisement

ಜಂಕ್ಷನ್‌ನಲ್ಲಿ ಡಿ.7ರಂದು ಸಂಭವಿಸಿದ ಅಪಘಾತದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ ಚಾಲಕರ ಅಜಾಗರೂಕತೆ ಹಾಗೂ ಅವೈಜ್ಞಾನಿಕ ವೃತ್ತದ ಬಗೆಗಿನ ‘ಸುದಿನ’ ಅಭಿಯಾನಕ್ಕೆ ಸಾರ್ವಜನಿಕರಿಂದ ಸಾಕಷ್ಟು ಸಲಹೆ ಹಾಗೂ ಆಡಳಿತ ವ್ಯವಸ್ಥೆ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗಿತ್ತು.

ಜಂಕ್ಷನ್‌ ಪರಿಶೀಲಿಸಿರುವ ಪೊಲೀಸ್‌ ಅಧಿಕಾರಿಗಳು ಕೆಲವು ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಮುಂದಾಗಿದ್ದು, ಸದ್ಯವೇ ಎನ್‌ಎಚ್‌ಎಐನ ಎಂಜಿನಿಯರ್‌ ಗಳು ಹಂಪ್ಸ್‌ ಅಳವಡಿಸಲಿದ್ದಾರೆ.

ಕಾರ್ಯನಿರ್ವಹಿಸದ ಸಿಗ್ನಲ್‌ !
ಈಜಂಕ್ಷನ್‌ನಲ್ಲಿ ಕೆಲವು ಸಮಯಗಳ ಹಿಂದೆ ಎನ್‌ಎಚ್‌ಎಐ ವತಿಯಿಂದ ಸಿಗ್ನಲ್‌ ಅಳವಡಿಸಲಾಗಿತ್ತಾದರೂ, ಅವು ಸಮರ್ಪಕವಾಗಿ ಕಾರ್ಯನಿರ್ವಹಿಸಲಿಲ್ಲ. ಪೊಲೀಸರು ಸ್ವಲ್ಪ ಸಮಯ ಮ್ಯಾನ್ಯುವಲ್‌ ಆಗಿ ಸಿಗ್ನಲ್‌ ನಿಭಾಯಿಸಿದರೂ, ಅದರಿಂದ ವಾಹನ ಒತ್ತಡ ನಿಯಂತ್ರಿಸಲಾಗಲಿಲ್ಲ. 

ಇಲ್ಲಿ ಎರಡು ಹೆದ್ದಾರಿಗಳು ಸಂಧಿಸುವುದು ಮತ್ತು ಮಂಗಳೂರು ನಗರದಿಂದ ಪ್ರಮುಖ ರಸ್ತೆಯೊಂದು ಹಾದು ಬರುವುದರಿಂದ ಇಲ್ಲಿ ಸಿಗ್ನಲ್‌ ಹಾಕಿ ಟ್ರಾಫಿಕ್‌ ನಿಯಂತ್ರಿಸುವುದು ಸುಲಭದ ಮಾತಲ್ಲ ಎಂದು ಪೊಲೀಸ್‌ ಅಧಿಕಾರಿಗಳು ಹೇಳುತ್ತಾರೆ.

Advertisement

ಶಿವಬಾಗ್‌ನಿಂದ ಕೆಪಿಟಿ, ಕೆಪಿಟಿಯಿಂದ ಬಿಕರ್ನಕಟ್ಟೆ, ಬಿಕರ್ನಕಟ್ಟೆಯಿಂದ ಪಂಪ್‌ ವೆಲ್‌, ಪಂಪ್‌ವೆಲ್‌ನಿಂದ ಶಿವಬಾಗ್‌ ಹೀಗೆ ನಾಲ್ಕು ಫ್ರೀ ಲೆಫ್ಟ್‌ ಸಹಿತ ಅಡ್ಡಾದಿಡ್ಡಿ ವಾಹನ ಚಲಾವಣೆಗೆ ಅವಕಾಶ ನೀಡುವುದು ಸಿಗ್ನಲ್‌ ಗೆ ಕಷ್ಟ ಎಂಬ ಅಭಿಪ್ರಾಯವೂ ಇದೆ. ಸಿಗ್ನಲ್‌ ಅಳವಡಿಸಿದ ಬಳಿಕ ಹೆದ್ದಾರಿಯ ಕಾಮಗಾರಿ ನಡೆದ ಕಾರಣ ಅದು ಕೆಟ್ಟು ಹೋಗಿದ್ದು, ದುರಸ್ತಿ ಮಾಡುವಂತೆ ಪೊಲೀಸ್‌ ಇಲಾಖೆಗೆ ಎನ್‌ಎಚ್‌ಎಐ ಪತ್ರ ಬರೆದಿದೆ. 

ಹಂಪ್ಸ್‌ ಅಳವಡಿಕೆ
ಪ್ರಸ್ತುತ ಪೊಲೀಸ್‌ ಇಲಾಖೆಯು ಬಿಕರ್ನಕಟ್ಟೆ ಭಾಗದಿಂದ ಬರುವ ವಾಹನಗಳ ನಿಯಂತ್ರಣಕ್ಕಾಗಿ ಹಂಪ್ಸ್‌ ಹಾಕಲು ಮುಂದಾಗಿದೆ. ಜತೆಗೆ ರಿಫ್ಲೆಕ್ಟರ್‌ಗಳ ಅಳವಡಿಕೆ ಸಹಿತ ಬ್ಯಾರಿಕೇಡ್‌ ಮೂಲಕ ವಾಹನ ನಿಯಂತ್ರಿಸಲು ಮುಂದಾಗಿದೆ. ಜಂಕ್ಷನ್‌ಗೆ ಪ್ರವೇಶ ಕಲ್ಪಿಸುವ ನಾಲ್ಕೂ ರಸ್ತೆಗಳಲ್ಲೂ ಹಂಪ್ಸ್‌ ಅಳವಡಿಸಲು ಎನ್‌ಎಚ್‌ಎಐ ಮುಂದಾಗಿದೆ.

ಜಂಕ್ಷನ್‌ನಲ್ಲಿ ಓವರ್‌ಪಾಸ್‌
ನಂತೂರು ಭಾಗದಲ್ಲಿ ಓವರ್‌ ಪಾಸ್‌ ನಿರ್ಮಾಣವಾದಾಗ ಮಾತ್ರ ಜಂಕ್ಷನ್‌ನ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ. ಪ್ರಸ್ತುತ ಕೇಂದ್ರ ಸರಕಾರವು ಬಿ.ಸಿ.ರೋಡ್‌-ಸುರತ್ಕಲ್‌ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಲು 800 ಕೋ.ರೂ.ಮೀಸಲಿಟ್ಟಿದ್ದು, ಈ ಸಂದರ್ಭದಲ್ಲಿ ಓವರ್‌ಪಾಸ್‌ ನಿರ್ಮಾಣ ಕಾರ್ಯ ನಡೆಯಲಿದೆ.

ಪ್ರತ್ಯೇಕ ರಸ್ತೆ
ಓವರ್‌ಪಾಸ್‌ ಎಂದರೆ ಬಿಕರ್ನಕಟ್ಟೆ-ಶಿವಬಾಗ್‌ ಸಂಪರ್ಕಕ್ಕೆ ಮೇಲ್ಸೆತುವೆ ನಿರ್ಮಾಣ, ನಾಲ್ಕು ಸರ್ವಿಸ್‌ ರೋಡ್‌ಗಳು, ಕೆಪಿಟಿ-ಪಂಪ್‌ ವೆಲ್‌ ಹೆದ್ದಾರಿಯನ್ನು ತಗ್ಗಿಸಿ ಸಂಪರ್ಕ ಕಲ್ಪಿಸಲಾಗುತ್ತದೆ. ಹೀಗಾದಾಗ ಪ್ರತಿ ಭಾಗದಲ್ಲೂ ವಾಹನಗಳಿಗೆ ಪ್ರತ್ಯೇಕ ರಸ್ತೆಗಳು ಲಭ್ಯವಾಗಲಿದ್ದು, ಯಾವುದೇ ಗೊಂದಲಗಳಿಲ್ಲದೆ ಸಾಗಲು ಅನುಕೂಲವಾಗಲಿದೆ.

ಶೀಘ್ರ ಹಂಪ್ಸ್‌ ಅಳವಡಿಸುತ್ತೇವೆ
ಈ ಹಿಂದೆ ಎನ್‌ಎಚ್‌ಎಐನವರು ಸಿಗ್ನಲ್‌ ಅಳವಡಿಸಿದ್ದರೂ, ಈಗ ಕಾರ್ಯ ನಿರ್ವಹಿಸುತ್ತಿಲ್ಲ. ಇಂತಹ ಮಲ್ಟಿ ರೋಡ್‌ ಪ್ರದೇಶದಲ್ಲಿ ಸಿಗ್ನಲನ್ನು ಸೆಟ್ಟಿಂಗ್‌ ಮಾಡುವುದು ಕಷ್ಟ. ಪ್ರಸ್ತುತ ನಾವು ಒಂದು ರಸ್ತೆಯಲ್ಲಿ ಹಂಪ್ಸ್‌ ಅಳವಡಿಸುತ್ತೇವೆ. ಜತೆಗೆ ಸಿಗ್ನಲ್‌ ದುರಸ್ತಿಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದೇವೆ.
–  ಮಂಜುನಾಥ್‌ ಶೆಟ್ಟಿ,
   ಎಸಿಪಿ, ಟ್ರಾಫಿಕ್‌ ಪೊಲೀಸ್‌

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next